ಶನಿವಾರಸಂತೆ, ಮೇ 17: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದರೆ ಗ್ರಾಮದಲ್ಲಿ ಕುಶಾಲನಗರ ಚೈಲ್ಡ್‍ಲೈನ್ ಸಂಸ್ಥೆ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸರಿಂದ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ವಿಶೇಷ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಮಾತನಾಡಿದ ಶನಿವಾರಸಂತೆ ಪೊಲೀಸ್ ಠಾಣೆಯ ಹೆಡ್‍ಕಾನ್ಸ್‍ಟೇಬಲ್ ಬೋಪಣ್ಣ 18 ವರ್ಷ ಒಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ತಡೆಯುವ ಸಲುವಾಗಿ ಸರಕಾರ ಫೋಕ್ಸೋ ಕಾಯ್ದೆ ಜಾರಿಗೊಳಿಸಿದೆ. ಮಕ್ಕಳ ಮೇಲೆ ಯಾವದೇ ರೀತಿಯ ಲೈಂಗಿಕ ದೌರ್ಜನ್ಯ ನಡೆಯುವ ಸಂದರ್ಭ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದರು.

ಕುಶಾಲನಗರ ಚೈಲ್ಡ್‍ಲೈನ್ ಸಂಸ್ಥೆಯ ಕಾರ್ಯಕರ್ತೆ ಬಿ.ಆರ್. ಕುಮಾರಿ ಹಾಗೂ ಮಂಜುಳಾ ಅವರುಗಳು ಮಾತನಾಡಿ, ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವದು ಅಪರಾಧ. 14 ವರ್ಷದ ಒಳಗಿನ ಮಕ್ಕಳನ್ನು ಮನೆ ಕೆಲಸದಲ್ಲಿ, ಗದ್ದೆ, ತೋಟಗಳಲ್ಲಿ, ಹೊಟೇಲ್, ಕ್ಯಾಂಟೀನ್, ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವದನ್ನು ತಡೆಗಟ್ಟಲು ಸರಕಾರ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಅನುಷ್ಠಾನಗೊಳಿಸಿದೆ. ಭಿಕ್ಷಾಟನೆ ಮಾಡುವ ಅನಾಥ ಮಕ್ಕಳನ್ನು ರಕ್ಷಣೆ ಮಾಡಲು ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಈ ರೀತಿಯ ಯಾವದೇ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಸಾರ್ವಜನಿಕರು ಚೈಲ್ಡ್‍ಲೈನ್ ಸಂಸ್ಥೆ 1098 ಸಂಖ್ಯೆಗೆ ಉಚಿತ ಕರೆಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಸಿಬ್ಬಂದಿ ಸವಿತಾ ಹಲವು ಮಾಹಿತಿಗಳನ್ನು ನೀಡಿದರು. ಚೈಲ್ಡ್‍ಲೈನ್ ಸಂಸ್ಥೆಯ ಕುಸುಮ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.