ಶ್ರೀಮಂಗಲ, ಮೇ 16 : ಬಿರುನಾಣಿಯಲ್ಲಿ ಕೊಡವ ಕುಟುಂಬಗಳ ನಡುವೆ ಪ್ರಥಮ ಬಾರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದ ಮರೆನಾಡ್ ಕೊಡವ ಕಪ್ ಪ್ರಶಸ್ತಿಯನ್ನು ಕಳಕಂಡ ಕುಟುಂಬ ತಂಡ ತನ್ನ ಮುಡಿಗೇರಿಸಿಕೊಂಡಿದ್ದು, ರನ್ನರ್ಸ್ ಪ್ರಶಸ್ತಿಯನ್ನು ಬೊಟ್ಟಂಗಡ ತಂಡ ಪಡೆದುಕೊಂಡಿದೆ. ಬಿರುನಾಣಿಯ ಮರೆನಾಡು ಪ್ರೌಢಶಾಲಾ ಮೈದಾನದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಆಯೋಜಿಸುತ್ತಿದ್ದ ಕೊಡವ ಕ್ರಿಕೆಟ್ ಉತ್ಸವದಲ್ಲಿ ಸತತ ಎರಡು ವರ್ಷ ಅಳಮೇಂಗಡ ಮತ್ತು ಮಡ್ಲಂಡ ಕಪ್ ಪ್ರಶಸ್ತಿಯನ್ನು ಪಡೆದಿದ್ದ ಕಳಕಂಡ ತಂಡ ಮರೆನಾಡ್ ಕೊಡವ ಕಪ್ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ತನ್ನ ಮುಡಿಗೇರಿಸಿದೆ. ಕಳಕಂಡ ತಂಡ 10 ಸಾವಿರ ನಗದು ಹಾಗೂ ಟ್ರೋಫಿ, ಬೊಟ್ಟಂಗಡ ತಂಡ 6 ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು.12 ಓವರ್‍ಗಳ ಫೈನಲ್ ಪಂದ್ಯದಲ್ಲಿ ಕಳಕಂಡ ತಂಡ ಮೊದಲು ಬ್ಯಾಟ್ ಮಾಡಿ 8 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೊಟ್ಟಂಗಡ ತಂಡ ತನ್ನ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಕೇವಲ 40 ರನ್‍ಗಳನ್ನು ಗಳಿಸಿ 37 ರನ್‍ಗಳಿಂದ
(ಮೊದಲ ಪುಟದಿಂದ) ಸೋಲು ಅನುಭವಿಸಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು.
ಕಳಕಂಡ ತಂಡದ ಪರ ಬಬುಲಿ 24 ಮತ್ತು ನಿಕಿಲ್ 20ರನ್ ಗಳಿಸಿ ತಂಡಕ್ಕೆ ಉತ್ತಮ ನೆರವು ನೀಡಿದರು. ಕಳಕಂಡ ತಂಡದ ಪ್ರಸನ್ನ 4, ಜೀತು, ಬಬುಲಿ, ನಿರನ್, ಮಧು, ಕಾರ್ಯಪ್ಪ ತಲಾ 1 ವಿಕೆಟ್ ಪಡೆದರು.
ಬೊಟ್ಟಂಗಡ ತಂಡದ ಪರ ಪ್ರತು (16ರನ್) ಅತಿ ಹೆಚ್ಚು ರನ್ ಗಳಿಸಿದರು. ಬೊಟ್ಟಂಗಡ ತಂಡದ ಗೌತಮ್, ದರ್ಶನ್ ತಲಾ 3 ವಿಕೆಟ್ ಮತ್ತು ಪ್ರತು, ಸುಬ್ಬಯ್ಯ ತಲಾ 1 ವಿಕೆಟ್ ಪಡೆದರು.
ಸೆಮಿಫೈನಲ್ ಪಂದ್ಯಾಟ: ಇದಕ್ಕೂ ಮೊದಲು ನಡೆದ ಸೆಮಿ ಫೈನಲ್ ಪಂದ್ಯಾಟದಲ್ಲಿ ಅಣ್ಣಳಮಾಡ (ಬಿರುನಾಣಿ) ಹಾಗೂ ಬೊಟ್ಟಂಗಡ ತಂಡದ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ ತಂಡ 2 ವಿಕೆಟ್‍ಗೆ 35 ರನ್ ಗಳಿಸಿ ಗೆಲವು ಸಾಧಿಸಿತು. ಅಣ್ಣಳಮಾಡ ತಂಡ 33 ರನ್‍ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತದ ಗುರಿಯನ್ನು ನೀಡಿತ್ತು.
ಎರಡನೇ ಸೆಮಿ ಫೈನಲ್ ಕರ್ತಮಾಡ-ಕಳಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ತಮಾಡ ತಂಡ 4 ವಿಕೆಟ್‍ಗೆ 74ರನ್ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಕಳಕಂಡ ತಂಡ 2 ವಿಕೆಟ್‍ಗೆ 80 ರನ್ ಗಳಿಸಿ ವಿಜಯ ಸಾಧಿಸಿತು.
ಕರ್ತಮಾಡ ತೃತೀಯ : ಮೂರನೇ ಸ್ಥಾನಕ್ಕೆ ಕರ್ತಮಾಡ - ಅಣ್ಣಳಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರ್ತಮಾಡ ತಂಡ ಜಯ ಸಾಧಿಸಿತು. ಕರ್ತಮಾಡ ತಂಡ 5 ವಿಕೆಟ್‍ಗೆ 53 ರನ್ ಗುರಿ ಬೆನ್ನಟ್ಟಿದ ಅಣ್ಣಳಮಾಡ ತಂಡ 5 ವಿಕೆಟ್‍ಗೆ 34 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲನುಭವಿಸಿತು. ಮೂರನೇ ಸ್ಥಾನ ಪಡೆದ ಕರ್ತಮಾಡ ತಂಡಕ್ಕೆ 3 ಸಾವಿರ ನಗದು ಹಾಗೂ ಟ್ರೋಫಿ, 4ನೇ ಸ್ಥಾನ ಪಡೆದ ಅಣ್ಣಳಮಾಡ ತಂಡಕ್ಕೆ 2500 ಹಾಗೂ ಟ್ರೋಫಿ ಪಡೆಯಿತು.
ಪಂದ್ಯಾವಳಿಯಲ್ಲಿ ಕಳಕಂಡ ಬಬುಲಿ ಸರಣಿ ಶ್ರೇಷ್ಠ ಪ್ರಶಸ್ತಿ, ಕರ್ತಮಾಡ ಸಂಪತ್ ಶ್ರೇಷ್ಠ ಆಟಗಾರ ಪ್ರಶಸ್ತಿ, ಉತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಕರ್ತಮಾಡ ರೈನಾ, ಉತ್ತಮ ಆಲ್‍ರೌಂಡರ್ ಬೊಟ್ಟಂಗಡ ಪ್ರತು ಹಾಗೂ ಉತ್ತಮ ಬೌಲರ್ ಬೊಟ್ಟಂಗಡ ವಿಶು ಅವರು ಪ್ರಶಸ್ತಿ ಪಡೆದರು.
ಎಂಪೈರ್ ಆಗಿ ಬಾಚೀರ ರಾಜ ಹಾಗೂ ಅಳಮೇಂಗಡ ಸೋಮಯ್ಯ, ವೀಕ್ಷಕ ವಿವರಣೆಗಾರರಾಗಿ ಕಾಂಡೇರ ಕುಶಾಲಪ್ಪ, ಮಾಣೀರ ಮನೋಜ್, ಕಾಳಿಮಾಡ ಶರತ್ ಅವರು ಕಾರ್ಯ ನಿರ್ವಹಿಸಿದರು.
ಮುಂದಿನ ವರ್ಷ ಕುಪ್ಪಣಮಾಡ : 2020ಕ್ಕೆ ಮರೆನಾಡ್ ಕೊಡವ ಕಪ್‍ನ ಆತಿಥ್ಯವನ್ನು ಕುಪ್ಪಣಮಾಡ ತಂಡ ವಹಿಸಿಕೊಂಡಿದ್ದು, ಕುಟುಂಬದ ಹಿರಿಯರಾದ ಕುಪ್ಪಣಮಾಡ ಬೆಳ್ಯಪ್ಪ ಅವರ ನೇತೃತ್ವದಲ್ಲಿ ಕುಟುಂಬದ ಸದಸ್ಯರು ದ್ವಜ ಹಾಗೂ ಸಾಂಪ್ರದಾಯಿಕ ತಳಿಯತಕ್ಕಿ ಬೊಳಕ್ಕ್‍ನೊಂದಿಗೆ ಆಗಮಿಸಿ ಜವಾಬ್ದಾರಿಯನ್ನು ವಹಿಸಿಕೊಂಡರು.
ಪ್ರಶಸ್ತಿ ಪ್ರದಾನ ಸಮಾರಂಭ : ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು, ಗಡಿ ಪ್ರದೇಶ ಬಿರುನಾಣಿಯಂತಹ ಜಾಗದಲ್ಲಿ ಕ್ರಿಕೆಟ್ ಉತ್ಸವವನ್ನು ಆಯೋಜಿಸಿರುವುದು ಒಂದು ಹೊಸ ಪ್ರಯೋಗವಾಗಿದ್ದು, ಇದರಲ್ಲಿ ಯಶಸ್ವಿ ಕಾಣಲಾಗಿದೆ. ಮರೆನಾಡ್ ಪ್ರದೇಶದಲ್ಲಿ ಉತ್ತಮ ಕ್ರೀಡಾ ತಂಡಗಳು ಇದ್ದು, ಬಹು ದೂರದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುತ್ತಾ ಬಂದಿವೆ. ಇಲ್ಲಿನ ಕ್ರೀಡಾ ಉತ್ಸಾಹ ನಿಜಕ್ಕೂ ತುಂಬಾ ಸಂತೋಷಕರ ವಾಗಿದೆ. ಮುಂದಿನ ವರ್ಷದಲ್ಲಿ ಈ ವ್ಯಾಪ್ತಿಯ ಎಲ್ಲಾ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸು ವಂತಾಗಲಿ. ಕೊಡವ ಕ್ರಿಕೆಟ್ ಅಕಾಡೆಮಿ ಆಯೋಜಿಸುವ ಕೊಡವ ಕೌಟುಂಬಿಕ ಕ್ರೀಡಾ ಕೂಟದ ಸಮಯವನ್ನು ಗಮನದಲ್ಲಿಟ್ಟುಕೊಂಡು ಮರೆನಾಡ್ ಕಪ್ ಉತ್ಸವವನ್ನು ಆಚರಿಸುವಂತೆ ಸಲಹೆ ನೀಡಿದರು.
ಮತ್ತೋರ್ವ ಅತಿಥಿ ರೈಲ್ವೆ ತಂಡದ ಮಾಜಿ ಹಾಕಿ ಆಟಗಾರ ಕಾಳಿಮಾಡ ಮುತ್ತಣ್ಣ ಮಾತನಾಡಿ, ಮರೆನಾಡ್ ಪ್ರದೇಶದಿಂದ ಬಹಳಷ್ಟು ಕ್ರೀಡಾಪಟುಗಳು ಬೆಳೆದಿದ್ದಾರೆ. ಹಿಂದಿನ ಕಾಲದಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ವೇದಿಕೆ ಇರಲಿಲ್ಲ. ಇದನ್ನು ಗಮನಿಸಿ ಈಗಿನ ಇಲ್ಲಿನ ಯುವ ಸಮುದಾಯ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವದು ಹೆಮ್ಮೆಯ ವಿಚಾರ. ಈ ವ್ಯಾಪ್ತಿಗೆ ಏನು ಒಳ್ಳೆಯ ಕಾರ್ಯ ಮಾಡಬೇಕೆನ್ನುವ ಬಗ್ಗೆ ಇಲ್ಲಿನ ಯುವ ಸಮುದಾಯ ಚಿಂತಿಸುತ್ತಿರುವದು ಒಳ್ಳೆಯ ಬೆಳವಣಿಗೆ. ಕ್ರೀಡೆ ಹಾಗೂ ಯೋಗ ವನ್ನು ಪ್ರತಿನಿತ್ಯ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಯಾಗಲಿದೆ. ಈ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಕ್ರೀಡೆಗೆ ವೇದಿಕೆ ಕಲ್ಪಿಸಲು ಮುಂದಾಗಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ಮರೆನಾಡು ಕ್ರೀಡಾ ಸಮಿತಿ ಅಧ್ಯಕ್ಷ ಕೀಕಣಮಾಡ ಮನು ಕಾರ್ಯಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಸಮಿತಿ ಸದಸ್ಯರು ಮತ್ತಿತರರು ಹಾಜರಿದ್ದರು.