ಮಡಿಕೇರಿ, ಮೇ 16: ಕ್ರೀಡಾರಂಗದಲ್ಲಿ ಅದ್ವಿತೀಯ ಸಾಧನೆಗಳ ಮೂಲಕ ಜಿಲ್ಲೆಯ ಕ್ರೀಡಾಪಟುಗಳು ಕೊಡಗಿಗೆ ಕ್ರೀಡಾ ಜಿಲ್ಲೆ ಎಂಬ ಹೆಸರು ತಂದು ಕೊಟ್ಟಿದ್ದಾರೆ. ರಾಷ್ಟ್ರ - ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಬಹುತೇಕ ಕ್ರೀಡೆಗಳಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ತಮ್ಮ ಪ್ರತಿಭೆ ಮೆರೆದಿದ್ದು, ರಾಷ್ಟ್ರಕ್ಕೆ ಪದಕವನ್ನು ತಂದುಕೊಟ್ಟಿದ್ದಾರೆ. ಆದರೆ ಕ್ರೀಡೆಯಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಕೊಡಗು ತವರಾಗಿದ್ದರೂ, ಇಲ್ಲಿ ಆಯಾ ಕ್ರೀಡೆಗಳಿಗೆ ಸಂಬಂಧಿಸಿದಂತಹ ಮೂಲಭೂತ ವ್ಯವಸ್ಥೆಗಳು ಮಾತ್ರ ಕೊರತೆಯಾಗಿ ಕಾಡುತ್ತಿತ್ತು. ಹಾಕಿ, ಕ್ರಿಕೆಟ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಟೆನ್ನಿಸ್, ಕರಾಟೆ ಈ ರೀತಿಯಾಗಿ ಎಲ್ಲಾ ಕ್ರೀಡೆಗಳಲ್ಲೂ ಕೊಡಗಿನವರು ಹೆಸರು ಮಾಡಿದ್ದಾರೆ. ಜಿಲ್ಲೆಯಿಂದ ಪ್ರಾತಿನಿಧ್ಯವಿರದಂತಹ ಕೆಲವೊಂದು ಕ್ರೀಡೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಮೂಲದವರು ತಮ್ಮ ಪ್ರತಿಭೆಯೊಂದಿಗೆ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವದು ಹೊಸ ಬೆಳವಣಿಗೆ. ಸೈಲಿಂಗ್, ಈಜು ಸ್ಪರ್ಧೆಯಲ್ಲಿ ಒಂದೆರಡು ವರ್ಷದಿಂದ ಹೊಸ ಪ್ರತಿಭೆಗಳು ಬೆಳಕಿಗೆ ಬಂದಿವೆ.ಇವೆಲ್ಲದರ ನಡುವೆ ಇಡೀ ಭಾರತದಲ್ಲಿ ಹೆಸರು ಮಾಡಿರುವ ಬೆರಳೆಣಿಕೆಯ ಕ್ರೀಡಾಪಟುಗಳಿರುವ ಕ್ರೀಡೆಯಲ್ಲಿ ಸ್ಕ್ವಾಷ್ ಕೂಡ ಒಂದಾಗಿದೆ. ವಿಶಿಷ್ಟ ಶಕ್ತಿ ಸಾಮಥ್ರ್ಯದ ಸ್ಕ್ವಾಷ್ನಲ್ಲಿ ಜಿಲ್ಲೆಯವರಾದ ಕುಟ್ಟಂಡ ಜೋತ್ನ್ಸಾ ಚಿಣ್ಣಪ್ಪ ಹಲವು ವರ್ಷಗಳಿಂದ ದೇಶಕ್ಕೆ ಪದಕ ತಂದುಕೊಡುತ್ತಿರುವ ಸಾಧಕಿಯಾಗಿದ್ದಾರೆ. ಮಾತ್ರವಲ್ಲ ಅರ್ಜುನ ಪ್ರಶಸ್ತಿ ವಿಜೇತೆ ಕೂಡ ಆಗಿದ್ದಾರೆ.
ಇದರೊಂದಿಗೆ ಈ ಹಿಂದೆ ಬಾಕ್ಸಿಂಗ್ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿರುವ ಚೇನಂಡ ಸಿ. ಮಾಚಯ್ಯ ಅವರು 1978ರ ಅವಧಿಯಲ್ಲೇ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇದೀಗ ಬಾಕ್ಸಿಂಗ್ನಲ್ಲಿ ಭಾರತದ ಮುಖ್ಯ ಕೋಚ್ ಆಗಿರುವದು ಕೂಡ ಕೊಡಗಿನವರಾದ ಕಳೆದ ಸಾಲಿನಲ್ಲಿ ಕೊಡಗಿಗೆ ಪ್ರಪ್ರಥಮ ದ್ರೋಣಾಚಾರ್ಯ ಪ್ರಶಸ್ತಿಯನ್ನು ತಂದು ಕೊಟ್ಟಿರುವ ಬಾಕ್ಸಿಂಗ್ ಪಟು ಚೇನಂದ ವಿಶು ಕುಟ್ಟಪ್ಪ ಎಂಬದು ಸ್ಮರಣೀಯ.
ಕೊಡಗಿಗೆ ಹೊಸ ಕೊಡುಗೆ
ಪ್ರಸ್ತುತ ಇಡೀ ರಾಜ್ಯದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಮೂಲಕ ಪ್ರಪ್ರಥಮವಾದ ಸ್ಕ್ವಾಷ್ ಕ್ರೀಡಾಂಗಣ ಹಾಗೂ ರಾಜ್ಯದ ಎರಡನೇ ಬಾಕ್ಸಿಂಗ್ ಕೋರ್ಟ್ ಕೊಡಗಿನಲ್ಲಿ ಶುಭಾರಂಭಗೊಂಡಿದೆ. ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಜಾಗದಲ್ಲಿ ಈ ಎರಡು ಕೋರ್ಟ್ಗಳ ಆರಂಭಕ್ಕೆ ಕಳೆದ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪುಗೊಂಡಿತ್ತಾದರೂ ಕೆಲವು ಕಾರಣಗಳಿಂದ ವಿಳಂಬವಾಗಿತ್ತು. ಈ ಹಿಂದೆ ಅಪ್ಪಚ್ಚು ರಂಜನ್ ಅವರು ರಾಜ್ಯದಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖಾ ಸಚಿವರಾಗಿದ್ದ ಅವಧಿಯಲ್ಲಿ ಸ್ಕ್ವಾಷ್ - ಬಾಕ್ಸಿಂಗ್, ಈಜುಕೊಳದಂತಹ ಹಲವು ಯೋಜನೆಗಳನ್ನು ಜಿಲ್ಲೆಗೆ ತರುವಲ್ಲಿ ಕಾರಣೀಭೂತರಾಗಿದ್ದರು. ಇದೀಗ ಆರೂವರೆ ವರ್ಷಗಳ ಬಳಿಕ ಕೊಡಗಿನ ಕ್ರೀಡಾಪ್ರೇಮಿಗಳು ಸಂತಸಪಡುವಂತೆ ಇಡೀ ರಾಜ್ಯದಲ್ಲಿ ಪ್ರಥಮವಾಗಿ ನಿರ್ಮಾಣಗೊಂಡಿರುವ ಸ್ಕ್ವಾಷ್ ಕೋರ್ಟ್ ಹಾಗೂ ಬೆಳಗಾಂ ಹೊರತುಪಡಿಸಿದರೆ, ರಾಜ್ಯದ ಎರಡನೆಯ ಬಾಕ್ಸಿಂಗ್ ಒಳಾಂಗಣ ಅಂಕಣ ಸಿದ್ಧಗೊಂಡಿದ್ದು, ಕ್ರೀಡಾಪಟುಗಳ ಬಳಕೆಗೆ ಲಭ್ಯವಾಗುತ್ತಿದೆ.
ಭೂಸೇನಾ ನಿಗಮದ ಮೂಲಕ ಈ ಎರಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಲವು ಸಮಯದ ಹಿಂದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಸವನಹಳ್ಳಿಗೆ ಆಗಮಿಸಿದ್ದ ಸಂದರ್ಭ ಹಲವು ಕಾಮಗಾರಿಗಳನ್ನು ಉದ್ಘಾಟಿಸಲಾಗಿದ್ದು, ಈ ಸಂದರ್ಭ ಇವೂ ಉದ್ಘಾಟನೆ ಗೊಂಡಿತ್ತು. ಇದೀಗ ಭೂಸೇನಾ ನಿಗಮ ಕೆಲವು ದಿನಗಳ ಹಿಂದೆ ಎಲ್ಲಾ ಅಗತ್ಯತೆಗಳನ್ನು ನಿರ್ವಹಿಸಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದೆ.
ಸ್ಕ್ವಾಷ್ ಕೋರ್ಟ್ನ ಮಾಹಿತಿ :ರೂ. 61 ಲಕ್ಷ ವೆಚ್ಚದಲ್ಲಿ ಸ್ಕ್ವಾಷ್ ಕೋರ್ಟ್ ಸಿದ್ಧಗೊಂಡಿದೆ.
(ಮೊದಲ ಪುಟದಿಂದ) ಈ ಒಳಾಂಗಣ ಆವರಣದಲ್ಲಿ ಎರಡು ಪ್ರತ್ಯೇಕ ಕೋರ್ಟ್ಗಳು ಬರಲಿವೆ. ಗ್ಲಾಸ್ಹೌಸ್ನ ಮಾದರಿಯಲ್ಲಿರುವ ಇದರಲ್ಲಿ ಆಚೆಯಿಂದ ಒಬ್ಬರು, ಈ ಕಡೆಯಿಂದ ಒಬ್ಬರು ಆಡಬಹುದಾಗಿದೆ. ಟಫನ್ಡ್ಗ್ಲಾಸ್ ಎಂಬ ಸಾಧನವನ್ನು ಇದಕ್ಕೆ ಅಳವಡಿಸಲಾಗಿದ್ದು, ಈ ಗ್ಲಾಸ್ ಹಾನಿಗೀಡಾಗದು. ಮುಂಬೈಯ ಏಷ್ಯನ್ ಫ್ಲೋರಿಂಗ್ ಅಂಡ್ ಸ್ಪೋಟ್ರ್ಸ್ನಿಂದ ಇದಕ್ಕೆ ಅಗತ್ಯವಿರುವ ಪ್ಲಾಸ್ಟರ್ ತರಿಸಿ ವ್ಯವಸ್ಥಿತಗೊಳಿಸಲಾಗಿದೆ. ಮೇಲ್ಭಾಗದ ಶೀಟ್ಗಳು ಕಾಣದಂತೆ ಈ ಕೋರ್ಟ್ ನಿರ್ಮಾಣವಾಗಿದ್ದು, ಮ್ಯಾಪಲ್ವುಡ್ನ ಫ್ಲೋರಿಂಗ್ ಮಾಡಲಾಗಿದೆ. ಮೈಸೂರಿನ ಇನ್ಫೋಸಿಸ್ನಲ್ಲಿರುವ ಖಾಸಗಿ ಸ್ಕ್ವಾಷ್ ಕೋರ್ಟ್ ಹೊರತು ಪಡಿಸಿದರೆ, ಸರಕಾರದ ಮೂಲಕ ನಿರ್ಮಾಣವಾಗಿರುವ ರಾಜ್ಯದ ಪ್ರಥಮ ಕೋರ್ಟ್ ಇದಾಗಿದೆ.
ಬಾಕ್ಸಿಂಗ್ ಕೋರ್ಟ್
ಬಾಕ್ಸಿಂಗ್ ಅಂಕಣ ರೂ. 53.15 ಲಕ್ಷ ವೆಚ್ಚದಲ್ಲಿ ಸಿದ್ದಗೊಂಡಿದೆ. ಈ ಆವರಣದಲ್ಲಿ ಭೂಸೇನಾ ನಿಗಮದಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ಎರಡು ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಭೂಸೇನಾ ನಿಗಮದ ಸಹಾಯಕ ಅಭಿಯಂತರ ಪ್ರಮೋದ್ ‘ಶಕ್ತಿ’ಗೆ ಮಾಹಿತಿ ಒದಗಿಸಿದರು. ಇದರ ಇನ್ನಿತರ ಅಗತ್ಯತೆಗಳನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೂಲಕ ಮಾಡಬೇಕಿದೆ ಎಂದು ಅವರು ತಿಳಿಸಿದರು.
ಸಹಾಯಕ ನಿರ್ದೇಶಕರ ಮಾಹಿತಿ
ಪ್ರಸ್ತುತ ಈ ಎರಡು ಕೋರ್ಟ್ಗಳನ್ನು ಸಾರ್ವಜನಿಕರ ಬಳಕೆಗೆ ನೀಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 9 ಹಾಗೂ ಸಂಜೆ 4 ರಿಂದ 8ರ ಸಮಯ ನಿಗದಿಪಡಿಸಲಾಗಿದೆ. ಪಾಲ್ಗೊಳ್ಳುವವರು ರೂ. ಒಂದು ಸಾವಿರ ಸದಸ್ಯತ್ವ ಹಾಗೂ ಮಾಸಿಕವಾಗಿ ರೂ. 300 ಹಣ ಪಾವತಿಸಬೇಕಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಅವರು ತಿಳಿಸಿದ್ದಾರೆ. ಬಾಕ್ಸಿಂಗ್ ಕೋರ್ಟ್ನಲ್ಲಿ ಬಾಕ್ಸಿಂಗ್ ರಿಂಗ್ ವ್ಯವಸ್ಥೆ ಮಾಡಲಾಗಿದೆ. ಬಾಕ್ಸಿಂಗ್ ಬ್ಯಾಗ್ ಅನ್ನು ತರಿಸಲಾಗಿದ್ದು, ಇದು ಅಳವಡಿಕೆಯಾಗಬೇಕಿದೆ ಎಂದು ಅವರು ಮಾಹಿತಿಯಿತ್ತರು.