ಗೋಣಿಕೊಪ್ಪಲು, ಮೇ 14: ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ಆಡಳಿತ ಮಂಡಳಿಯ ತುರ್ತುಸಭೆ ಹರಿಶ್ಚಂದ್ರಪುರದಲ್ಲಿರುವ ಚೇಂಬರ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ನಿರ್ದೇಶಕರು ನಗರದ ಕಸ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಇತ್ತೀಚೆಗೆ ಕಸ ಸಮಸ್ಯೆಯಿಂದಾಗಿ ನಗರವು ಅಶುಚಿತ್ವದಿಂದ ಕೂಡಿದ್ದು, ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುವದರಿಂದ ಅಗತ್ಯ ಕ್ರಮ ಕೈಗೊಳ್ಳಲು ಚೇಂಬರ್ ನಿರ್ಧಾರ ಕೈಗೊಂಡಿತ್ತು. ಪಂಚಾಯಿತಿ ಸದಸ್ಯರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಇಲ್ಲಿಯ ತನಕ ಕೇವಲ ಪ್ರತಿಷ್ಠೆಯಲ್ಲಿಯೇ ದಿನ ಕಳೆಯುತ್ತಿರುವ ಬಗ್ಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸದಸ್ಯರು ಪೂರಕ ಬೆಂಬಲ ನೀಡದಿರುವ ಬಗ್ಗೆ ವ್ಯಾಪಕ ದೂರು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ವಿಷಯ ಚರ್ಚೆಯಾಯಿತು.

ವರ್ತಕರು ಕಸವನ್ನು ರಸ್ತೆ ಬದಿಯಲ್ಲಿ ಇಡದಂತೆ ಪಂಚಾಯಿತಿಯಿಂದ ಸೂಚನೆ ಬಂದಿರುವದರಿಂದ ಕಸವನ್ನು ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಿಲ್ಲ. ಆದಷ್ಟು ಬೇಗನೆ ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತೆ ಸದಸ್ಯರು ಸಲಹೆ ನೀಡಿದರು. ಸದಸ್ಯರು ಕಸ ಸಮಸ್ಯೆಯ ಬಗ್ಗೆ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಕೆಲಸ ನಿರ್ವಹಿಸದೆ ಹೀಗೆ ಮುಂದುವರೆದಲ್ಲಿ ಪಂಚಾಯಿತಿ ಮುಂದೆ ಸಾರ್ವಜನಿಕರ ಹಾಗೂ ವರ್ತಕರ ಸಮ್ಮುಖದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಚರ್ಚೆ ನಡೆಯಿತು.

ಚೇಂಬರ್ ವತಿಯಿಂದ ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿಪ್ರಿಯ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಖುದ್ದು ಭೇಟಿ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿರ್ಧಾರಕ್ಕೆ ಬರಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ತೆಕ್ಕಡ ಕಾಶಿ, ಖಜಾಂಚಿ ಮನೋಹರ್, ನಿರ್ದೇಶಕರುಗಳಾದ ಅಜಿತ್ ಅಯ್ಯಪ್ಪ, ಕಿರಿಯಮಾಡ ಅರುಣ್ ಪೂಣಚ್ಚ, ಬಿ.ಎನ್. ಪ್ರಕಾಶ್, ರಾಜಶೇಖರ್, ಚೇಂದಂಡ ಸುಮಿ ಸುಬ್ಬಯ್ಯ, ಟಿ.ಜೆ. ನಾಸೀರ್, ಮಾಚಿಮಾಡ ಅನಿತಾ ಮುಂತಾದವರು ಹಾಜರಿದ್ದರು. ಕಾರ್ಯದರ್ಶಿ ತೆಕ್ಕಡ ಕಾಶಿ ಸ್ವಾಗತಿಸಿ, ವಂದಿಸಿದರು.