ಮಡಿಕೇರಿ, ಮೇ 14: ವಾಹನವನ್ನು ಹಿಂದಿಕ್ಕಿದ ಕಾರಣಕ್ಕಾಗಿ ಕಾರನ್ನು ಅಡ್ಡಗಟ್ಟಿ ಯುವಕನನ್ನು ಕಾರಿನಿಂದ ಹೊರಗೆಳೆದು ಹಲ್ಲೆ ಮಾಡಿದ ಕಾರಣಕ್ಕಾಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಚೇಂದ್ರಿಮಾಡ ಲೋಕೇಶ್ ಹಾಗೂ ಪಳಂಗಪ್ಪ ಎಂಬವರುಗಳು ಕಾರಿನಲ್ಲಿ ತೆರಳುತ್ತಿದ್ದಾಗ ತಮ್ಮ ವಾಹನವನ್ನು ಹಿಂದಿಕ್ಕಿದ ನೆಪವೊಡ್ಡಿ ಕಾರ್ಯಪ್ಪ ಎಂಬಾತನನ್ನು ಆತನ ಕಾರಿನಿಂದ ಕೆಳಗೆಳೆದು ಹಲ್ಲೆ ನಡೆಸಿದ್ದಲ್ಲದೆ, ಆತನ ಕಾರನ್ನು ಅಪಹರಿಸಲು ಪ್ರಯತ್ನಿಸಿದ್ದಾರೆನ್ನಲಾಗಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಕಾರದೊಂದಿಗೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಲೋಕೇಶ್ ಈ ಹಿಂದೆ ಎಫ್‍ಎಂಸಿ ಕಾಲೇಜು ಹಿಂಭಾಗದ ಮನೆಯೊಂದಕ್ಕೆ ಹಾಗೂ ಮಾರುಕಟ್ಟೆ ಬಳಿ ಗುಂಡು ಹಾರಿಸಿ ಕೊಲೆಯತ್ನ ಆರೋಪದಡಿ ಅಪರಾಧ ಎದುರಿಸುತ್ತಿದ್ದಾನೆ. ಠಾಣಾಧಿಕಾರಿ ಷಣ್ಮುಗಂ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ವೇಳೆ ರಾಜಾಸೀಟ್ ಬಳಿ ವಾಹನ ದಟ್ಟಣೆ ಏರ್ಪಟ್ಟಿತ್ತು. -ಮೋಕ್ಷಿತಾ ಪಟೇಲ್