ಪ್ರಸಕ್ತ ವಿದ್ಯಮಾನಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು “ಶಕ್ತಿ” ಸಂದರ್ಶಿಸಿತು. ಅವರ ಕೆಲವು ಪ್ರಮುಖ ನಿರ್ಧಾರಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.ತಮ್ಮ ಜಾಗಗಳಲ್ಲಿಯೇ ಮನೆ ನಿರ್ಮಿಸಿಕೊಳ್ಳುವವರಿಗೂ ಅವಕಾಶ ಕಲ್ಪಿಸಲಾಗಿದೆ. 83 ಸಂತ್ರಸ್ತರಿಂದ ಈ ಕುರಿತ ಕೋರಿಕೆಯ ಅರ್ಜಿ ಬಂದಿತ್ತು. ಆದರೆ. ಆ ಪೈಕಿ ಅನೇಕರಿಗೆ ತಮ್ಮ ಜಾಗಗಳ ಸಮರ್ಪಕ ದಾಖಲೆ ಇಲ್ಲದಿರುವದರಿಂದ ದಾಖಲೆ ಲಭ್ಯವಿರುವ 43 ಮಂದಿಯನ್ನು ಫಲಾನುಭವಿ ಗಳಾಗಿ ಆಯ್ಕೆ ಮಾಡಲಾಗಿದೆ. ಈ ಮಂದಿಗೆ ತಲಾ ಒಟ್ಟು ರೂ. 9.85 ಲಕ್ಷ ಮಂಜೂರಾತಿಯಲ್ಲಿ ಪ್ರಾರಂಭಿಕವಾಗಿ ರೂ. 2 ಲಕ್ಷ ಮುಂಗಡ ಒದಗಿಸಲಾಗುತ್ತದೆ. ಆದರೆ, ತಮ್ಮ ಜಾಗಗಳಲ್ಲಿ ಮನೆ ಕಟ್ಟುವ ಬಗ್ಗೆ ಆ ಜಾಗ ಸೂಕ್ತವಾಗಿದೆ ಎನ್ನುವ ಖಾತರಿ ಬೇಕು. (ಮೊದಲ ಪುಟದಿಂದ) ರಾಜೀವ್ ಗಾಂಧಿ ನಿಗಮದವರು ನಿರ್ಮಿಸುತಿರುವ ಅಳತೆಯಲ್ಲಿಯೇ, ಅದೇ ನಮೂನೆಯಲ್ಲಿ ನಿರ್ಮಾಣವಾಗಬೇಕು ಹಂತ ಹಂತದ ಕೆಲಸವಾಗುತ್ತಿದ್ದಂತೆ ಉಳಿದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಪ್ರಥಮ ಹಂತದ ಮನೆಗಳ ನಿರ್ಮಾಣ ಕಾರ್ಯದಲ್ಲ್ಲಿ ಆಯ್ಕೆ ಮಾಡಲಾದ ಒಟ್ಟು 470 ಮಂದಿಗೆ ನಿರ್ಮಿಸಿಕೊಡಲಾಗುತ್ತದೆ. ಕರ್ಣಂಗೇರಿಯಲ್ಲಿ 35 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು ಸದ್ಯದಲ್ಲಿಯೇ ಹಂಚಲಾಗುತ್ತದೆ. ಈ ಪೈಕಿ ಸುತ್ತಮುತ್ತಲ ಸಂತ್ರಸ್ತರಿಗೆ ನೀಡಲು ಆದ್ಯತೆ ಕೊಡಲಾಗುತ್ತದೆ.ಮಾದಾಪುರ, ಜಂಬೂರುಗಳಲ್ಲಿಯೂ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಎರಡನೇ ಹಂತವಾಗಿ 409 ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಪೈಕಿ ಇನ್‍ಫೋಸಿಸ್ ಸಂಸ್ಥೆಯಿಂದ 200 ಮನೆಗಳನ್ನು ನಿರ್ಮಿಸಲಾಗುತ್ತದೆ. ಪ್ರಥಮ ಹಂತದ ಆದ್ಯತೆಯ 427 ಸಂತ್ರಸ್ತರಿಗೆ ತಿಂಗಳಿಗೆ ರೂ. 10 ಸಾವಿರದಂತೆ ಮನೆ ಬಾಡಿಗೆ ಹಣವನ್ನು ಒದಗಿಸಲಾಗಿದೆ. ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರವನ್ನು ಸರಕಾರವೇ ನೇರವಾಗಿ ಪರಿಹಾರ ಸಾಫ್ಟ್‍ವೇರ್ ಮೂಲಕ ನೀಡುತ್ತಿದೆ. ಅವರವರ ಅಕೌಂಟ್‍ಗಳಿಗೆ ನೀಡಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಈ ಹಣ ಬರುವದಿಲ್ಲ.
ಜಲಪ್ರದೇಶಗಳಲ್ಲಿ ಹೂಳೆತ್ತಲು ಕ್ರಮ
ಈ ನಡುವೆ ಹಾರಂಗಿ ಸೇರಿದಂತೆ ಜಿಲ್ಲೆಯ ಜಲ ಪ್ರದೇಶಗಳಲ್ಲಿ ಹೂಳು ತೆಗೆದು ಮಳೆಗಾಲದಲ್ಲಿ ಪ್ರವಾಹ ಬಾರದಂತೆ ಮುಂಜಗೃತಾ ಕ್ರಮ ಕೈಗೊಳ್ಳಲಾಗಿದೆ. ಇದಕ್ಕ್ಕಾಗಿ ಸರಕಾರಕ್ಕೆ ರೂ. 6 ಕೋಟಿ ಪ್ರಸ್ತಾವನೆ ಕಳುಹಿಸಿದ್ದು ಸದ್ಯದಲ್ಲಿಯೇ ಈ ಹಣ ಬಿಡುಗಡೆಯಾಗಲಿದೆ.
ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಕುರಿತಾದ ಪ್ರಸಕ್ತ ಮಾಹಿತಿ ಪಡೆಯಲು ನೋಡಲ್ ಅದಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ಯಾವದಾದರೂ ಸಂತ್ರಸ್ತರ ಬಳಿ ತೆರಳದಿದ್ದರೆ ತಮಗೆ ನೇರ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ “ಶಕಿ”್ತಯೊಂದಿಗೆ ಮುಕ್ತ ನುಡಿಯಾಡಿದರು.
ಎಡಿಸಿ ಶಿವರಾಜ್ ಅನಿಸಿಕೆ
ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಅವರು “ಶಕ್ತಿ”ಯೊಂದಿಗೆ ಮಾತನಾಡಿ ಮುಂದಿನ ಮಳೆಗಾಲದಲ್ಲಿ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಎಲ್ಲ ಅಧಿಕಾರಿಗಳು ಆ ಸಂದರ್ಭ ರಜೆ ಮಾಡದಂತೆ ನಿರ್ಧರಿಸದ್ದೇವೆ. ಜಿಲ್ಲೆಯ ಯಾವ ಭಾಗದಲ್ಲಿಯಾದರೂ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ದೊರೆಯದಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತಂದರೆ ತುರ್ತು ಸ್ಪಂದಿಸಲಾಗುತ್ತದೆ ಎಂದು ಶಿವರಾಜ್ ಭರವಸೆಯಿತ್ತರು.