ಮಡಿಕೇರಿ, ಮೇ. 12: ಕೊಡಗಿನಲ್ಲಿ ಅತಿವೃಷ್ಟಿ, ಭೂ ಕುಸಿತ, ಜಲಸ್ಫೋಟಗಳ ದುರಂತ ನಡೆದು ಸುಮಾರು 9 ತಿಂಗಳು ಕಳೆದಿದೆ. ದುರಂತದ ಕೆಲವೊಂದು ಪ್ರದೇಶಗಳಾದ ಕಾಲೂರು,ನಿಡುವಟ್ಟು, ದೇವಸ್ತೂರು, ಆವಂಡಿ,ಬಾರಿಬೆಳ್ಳಚ್ಚು ಹಾಗೂ ಹಚ್ಚಿನಾಡು ಗ್ರಾಮಗಳಿಗೆ ‘ಶಕ್ತಿ’ ತೆರಳಿದಾಗ ಕಂಡು ಬಂದ ನೈಜ ಚಿತ್ರಣವೇ ಬೇರೆ.ಅನೇಕ ಕಡೆ ತಾತ್ಕಾಲಿಕ ಪರಿಹಾರದ ಭಾಗಶಃ ಹಣ ಸೇರಿದೆ. ಇನ್ನು ಕೆಲವೆಡೆ ಸಂತ್ರಸ್ತರು ತಮ್ಮ ಹೆಸರು ಪಟ್ಟಿಯಲ್ಲಿದೆ, ಹಣ ತಲುಪಿಲ್ಲ ಎಂದವರಿದ್ದಾರೆ. ಮುಖ್ಯವಾಗಿ ಪುನರ್ವಸತಿಯ ಮನೆಗಳ ನಿರ್ಮಾಣ ವಿಳಂಬಗೊಂಡುದರಿಂದ ಸಮರ್ಪಕ ವಸತಿ ಸೌಲಭ್ಯವಿಲ್ಲದೆ ಪರದಾಡುವವರೂ ಇದ್ದಾರೆ. ಬಹುತೇಕ ಸಂತ್ರಸ್ತರ ಅಭಿಪ್ರಾಯ ಹೀಗಿದೆ: ನಮಗೆ ಇನ್ನೂ ಮನೆ ಸಿಕ್ಕಿಲ್ಲ, ಕೆಲವೊಂದು ಪ್ರಮಾಣದಲ್ಲಿ ಪರಿಹಾರ ದೊರಕಿದೆ. ಗದ್ದೆ, ತೋಟ ಕಳೆದುಕೊಂಡು

(ಮೊದಲ ಪುಟದಿಂದ) ತಾತ್ಕಾಲಿಕ ಹಣ ದೊರೆತರೂ ನಮ್ಮ ಗದ್ದೆಗಳನ್ನು, ಕೃಷಿ ಭೂಮಿಗಳನ್ನು ಪುನರ್ನಿರ್ಮಾಣ ಮಾಡಲಾಗದೆ ಶಾಶ್ವತವಾಗಿ ಬೇರೆ ಉದ್ಯೋಗ ಮಾಡಲಾಗದೆ, ಸಿಕ್ಕ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಅದೃಷ್ಟವಶಾತ್ ರೇಷನ್ ಸೌಲಭ್ಯದಿಂದ ಆಹಾರ ಪದಾರ್ಥಗಳು ದೊರಕುತ್ತಿರು ವದರಿಂದ ಉಪವಾಸ ಬೀಳುವ ಪರಿಸ್ಥಿತಿ ಮಾಯವಾಗಿದೆ. ಆದರೆ, ಮನೆಯವರಿಗೆ ಅನಾರೋಗ್ಯ ವುಂಟಾದಾಗ, ಮಕ್ಕಳ ವಿದ್ಯಾಭ್ಯಾಸ ಮುಂದುವರಿಕೆಗೆ, ಇನ್ನಿತರ ಅಗತ್ಯ ಖರ್ಚುಗಳಿಗೆ ಹಣ ಸಂಪಾದನೆ ಯಿಲ್ಲದೆ ನಾವು ನಿಧಾನವಾಗಿ ಕುಸಿಯುತ್ತಿದ್ದೇವೆ ಎಂಬ ಭಯ ಆತಂಕ ಮೂಡುತ್ತಿದೆ” ಎಂದು ಬಹುತೇಕ ಮಂದಿ ಆತಂಕ ವ್ಯಕ್ತಪಡಿಸಿದರು.ಅಲ್ಲದೆ ಮನೆಗಳನ್ನು ನಿಧಾನ ವಾಗಿಯಾದರೂ ನೀಡಬಹುದಾದರೂ ನಮ್ಮ ಊರಿನಿಂದ ಭಾರೀ ಅಂತರ ದಲ್ಲಿರುವ ಅಂತಹ ಪ್ರದೇಶಗಳಲ್ಲಿ ವಾಸ ಮಾಡುವದು ಹೇಗೆ? ಆ ಪ್ರದೇಶಗಳಲ್ಲಿ ನಮಗೆ ನಾವು ಕಳೆದುಕೊಂಡ ಕೃಷಿ ಭೂಮಿಯಂತೂ ಲಭ್ಯವಾಗುವದಿಲ್ಲ. ಅಂತಹ ಮನೆಗಳಲ್ಲಿ ಕುಳಿತು ನಾವು ಮಾಡುವದೇನು? ಅಲ್ಲಿಂದ ನಮ್ಮ ಊರಿಗೆ ಬಂದು ಈ ಹಿಂದಿನ ಕೃಷಿ ಭೂಮಿಗಳನ್ನು ಪುನರುತ್ಪಾದನೆಗೆ ತಯಾರು ಮಾಡೋಣವೆಂದರೆ ಈಗಲೂ ಈ ಹಿಂದೆ ದುರಂತವಾದ ಸ್ಥಿತಿಯಲ್ಲಿಯೇ, ಕುಸಿದ ಮಣ್ಣು, ರಸ್ತೆಗಳಿಲ್ಲದೆ ಅ ಪ್ರದೇಶಗಳು ಬರಡಾಗಿವೆ. ಮಕ್ಕಳನ್ನು ಓದಿಸಿ ಮುಂದೆ ಅವರಾದರೂ ಉತ್ತಮ ಉದ್ಯೋಗಕ್ಕೆ ತೆರಳಲಿ ಎನ್ನುವ ಸಂಕಲ್ಪ ನಮಗಿದ್ದರೂ ಈಗಾಗಲೇ ಪರಿಹಾರ ಲಭ್ಯವಾದ ಹಣವೆಲ್ಲ ಮುಗಿದಿದ್ದು ಸಂಪಾದನೆಯೇ ಇಲ್ಲದೆ ಮಕ್ಕಳ ಭವಿಷ್ಯವನ್ನು ರೂಪಿಸುವದು ಹೇಗೆ? ಎಂಬ ಗಾಢ ಚಿಂತೆ ಎದುರಾಗಿದೆ ಎಂದು “ ಶಕ್ತಿ” ಭೇಟಿ ಮಾಡಿದ ಎಲ್ಲ ಸಂತ್ರಸ್ತರು ದು:ಖ ತೋಡಿಕೊಂಡರು. ಅಷ್ಟೇ ಅಲ್ಲ ಈ ಹಿಂದೆ ಕುಸಿದು ಹೋದ ಸ್ಥಳಗಳು ಯಥಾ ರೂಪದಲ್ಲಿಯೇ ಇದ್ದು ಕೃಷಿ ಮಾಡಲು ಅಸಾಧ್ಯವಾಗಿರುವ ಸ್ಪಷ್ಟ ಚಿತ್ರಣ “ಶಕ್ತಿ”ಗೆ ಪ್ರತ್ಯಕ್ಷ ಗೋಚರ ವಾಯಿತು.

ದಾರಿಕಾಣದ ಭವಿಷ್ಯ

ಬಾರಿಬೆಳ್ಳಚ್ಚು ಗ್ರಾಮದಲ್ಲಿ 72 ರ ವೃದ್ಧ ಕಾಳಪ್ಪ ಅವರಿಗೆ ಪ್ರಾಕೃತಿಕ ದುರಂತವಾದ ಬಳಿಕ ಆರೋಗ್ಯವೂ ಹಾಳಾಗಿದ್ದು ಪಾಶ್ರ್ವವಾಯು ತಟ್ಟ್ಟಿದೆ. ಇವರು ತಮ್ಮ ಪುತ್ರ ಚಾಂದಿರ ಪೊನ್ನಪ್ಪ ಅವರೊಂದಿಗೆ ಅದೇ ಗ್ರಾಮದಲ್ಲಿ ಅವರ ಸ್ನೇಹಿತರೊಬ್ಬರು ಬಿಟ್ಟುಕೊಟ್ಟ ಹಳೆ ಮನೆಯಲ್ಲಿ ವಾಸವಾಗಿದ್ದಾರೆ. ನಡೆಯಲು ಕಷ್ಟವಾದರೂ ಆಗಿಂದಾಗ್ಗೆ ತಮ್ಮ ಕುಸಿದ ಗದ್ದೆ, ತೋಟಗಳಿಗೆ ತೆರಳಿ ಅದನ್ನು ಕಣ್ತುಂಬ ನೋಡುತ್ತ ಕಣ್ಣೀರಿಡುತ್ತಾರೆ. ಅವರಿಗೆ ತಮಗೆ ಸರಕಾರದಿಂದ ಎಲ್ಲಿ ಪುನರ್ವಸತಿ ಮನೆಗಳನ್ನು ಗುರುತಿಸಿದ್ದಾರೆ ಎಂಬ ಕಲ್ಪನೆಯೂ ಇಲ್ಲ. ಈಗ ಅವರಿರುವ ಮನೆ ಗ್ರಾಮದ ಒಳ ಪ್ರದೇಶದಲ್ಲಿರು ವದರಿಂದ ಯಾವ ನೋಡಲ್ ಅಧಿಕಾರಿಯೂ ಅತ್ತ ಸುಳಿದಿಲ್ಲವಂತೆ. ಅವರ ಪುತ್ರ ಪೊನ್ನಪ್ಪ ಮಡಿಕೇರಿಯಲ್ಲಿ ಆಟೋ ಓಡಿಸುತ್ತಿದ್ದರು. ಇದೀಗ ತಂದೆಗೆ ಅನಾರೋಗ್ಯ ಕಾರಣ ಹಾಗೂ ಮಡಿಕೇರಿಯಲ್ಲಿ ಬಾಡಿಗೆ ಮನೆಯೂ ಸುಲಭದಲ್ಲಿ ಸಿಗದಿದ್ದು ತಂದೆ ಯೊಂದಿಗೆ ಅವರ ಸೇವೆ ಮಾಡುತ್ತ ಹಳ್ಳಿಯಲ್ಲಿಯೇ ಕಳೆಯುತ್ತಿದ್ದಾರೆ. ಊಟ ತಿಂಡಿಗೆ ಬೇಕಾದ ಅಕ್ಕಿ ಇತ್ಯಾದಿ ರೇಷನ್ ಮೂಲಕ ದೊರಕುತ್ತಿರುವದರಿಂದ ಹಸಿವು ನೀಗಿಸಿಕೊಳ್ಳ್ಳುತ್ತಿದ್ದೇವೆ. ಆದರೆ, ಔಷಧಿ- ವೈದ್ಯರ ವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡುವದು ಎನ್ನುವದು ಗಂಭೀರ ಪ್ರಶ್ನೆ.. ಸರಕಾರದಿಂದ ಈಗ ರೂ. 1ಲಕ್ಷ ಪರಿಹಾರ ದೊರೆತಿದೆ. ಆದರೆ. ಕೃಷಿ ಮತ್ತು ತೋಟದಿಂದ ವಾರ್ಷಿಕ ನಮಗೆ ರೂ. 2 ಲಕ್ಷ ಆದಾಯ ಬರುತ್ತಿದ್ದು ಕುಟುಂಬ ನಿರ್ವಹಣೆಗೆ ಸಾಕಾಗಿತ್ತು. ಮುಂದೆ ಏನು ಎನ್ನುವದು ಆತಂಕಕಾರಿಯಾಗಿದೆ ಎಂದರು.

ರಸ್ತೆ ಕೆಲಸ ಕಳಪೆ:ರವಿ ತಮ್ಮಯ್ಯ

“ಶಕ್ತಿ” ಯೊಂದಿಗೆ ಸಹಕರಿಸಿ ಈ ಸ್ಥಳಗಳಿಗೆ ಭೇಟಿ ಮಾಡಿದ ಪಶ್ಚಿಮಘಟ್ಟ ಅರಣ್ಯ ವಿಮೋಚನಾ ಸಮಿತಿ ಸಂಚಾಲಕ ಕಾಳಚಂಡ ರವಿ ತಮ್ಮಯ್ಯ ಅವರು ಈ ಗ್ರಾಮಗಳಲ್ಲಿ ಮುಚ್ಚಿ ಹೋೀಗಿದ್ದ ರಸ್ತ್ತೆಗಳನ್ನು ಪುನ ರ್ನಿರ್ಮಾಣ ಮಾಡಿದ ಸ್ಥಳಗಳನ್ನು ತೋರಿಸಿದರು. ಈ ರಸ್ತೆ ಕೆಲಸಗಳೆಲ್ಲ ಕಳಪೆ ಕಾಮಗಾರಿಗಳಾಗಿವೆ. ಅರ್ಧಂಬರ್ಧ ಕೆಲಸ ಮಾಡಿ ಪೈಪ್‍ಗಳನ್ನು ಅಲ್ಲಲ್ಲೇ ಎಸೆದು, ಕುಸಿದ ಭಾಗವನ್ನು ಗಟ್ಟಿ ಮಾಡದೆ ಮುಂದಿನ ಮಳೆಗಾಲದಲ್ಲಿ ಈ ಸಂಪರ್ಕ ರಸ್ತೆಗಳೆಲ್ಲ ಮತ್ತೆ ಕುಸಿಯವದಂತೂ ನಿಶ್ಚಿತ. ಆ ಬಳಿಕ ಈ ಗ್ರಾಮಗಳಿಗೆ ಮತ್ತೆ ಸಂಪರ್ಕವೇ ಸಂಪೂರ್ಣ ಕಡಿತಗೊಳ್ಳುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂತಹ ಕಳಪೆ ಕಾಮಗಾರಿಗಳ ಬಗ್ಗೆ ಸಮರ್ಪಕ ತನಿಖೆಯಾಗಬೇಕು ; ಗುತ್ತಿಗೆದಾರರು ಮತ್ತು ಇಂಜಿನಿ ಯರ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರವಿ ತಮ್ಮಯ್ಯ ಆಗ್ರಹಿಸಿದರು.

ಅಲ್ಲದೆ ಮುಕ್ಕೋಡ್ಲು ದೇವಾಲಯದ ಬಳಿಯೇ ಇರುವಂತಹ ಹೊಳೆಯಲ್ಲಿ ಕೆಲವು ಪ್ರಭಾವಿಗಳು ಲಂಗು ಲಗಾಮಿಲ್ಲದೆ ಮರಳು ದಂಧೆಯಲ್ಲಿ ತೊಡಗಿರು ವದನ್ನು ಅಲ್ಲಲ್ಲಿಯೇ ಬಿದ್ದ್ದ ಮರಳು ರಾಶಿ ಸಹಿತ ತೋರಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಹಳ್ಳಿ ಪ್ರದೇಶಗಳಲ್ಲಿ ಕೆಲವು ಸಂತ್ರಸ್ತರುಗಳಾದ ಕೆ.ಎನ್. ಉತ್ತಯ್ಯ, ಕಾರೇರ ದುರ್ಯೋ ಧನ,ಚನ್ನಪಂಡ ದೇವಯ್ಯ, ಕಾರೇರ ಯು. ಕಾಳಪ್ಪ, ಕಾರೇರ ಗಣಪತಿ ಮೊದಲಾದ ಆನೇಕರನ್ನು “ಶಕ್ತಿ” ಭೇಟಿ ಮಾಡಿ ಅವರಿಗಾಗಿರುವ ಹಾನಿಯಾದ ಸ್ಥಳಗಳನ್ನು ಪರಿಶೀಲಿಸಿದಾಗ ಎಲ್ಲಿಯೂ ಕೂಡ ಪುನರ್ನಿರ್ಮಾಣ ಅಸಾಧ್ಯ ಎಂಬದು ಗೊಚರ ವಾಯಿತು. ಅವರೆಲ್ಲ ಸದ್ಯಕ್ಕೆ ಸಿಕ್ಕಿರುವ ಪರಹಾರ ಮೊತ್ತಗಳಲ್ಲ್ಲಿ ಹಾಗೂ ರೇಷನ್ ಆಹಾರದಲ್ಲಿ ಜೀವನ ಸಾಗಿಸುತ್ತಿರುವದು ಖಚಿತವಾಗಿದೆ. ಕೊಡಗಿನ ಸಂತ್ರಸ್ತರ ಭವಿಷ್ಯ ಜೀವನ ನಿಜಕ್ಕೂ ಅಯೋಮಯ ಎನಿಸುತ್ತಿದೆ. ಇವರಿಗೆ ಬದಲೀ ಕೃಷಿ ಜಾಗ ಮಂಜೂರಾದರೆ ಮಾತ್ರ ಪುನ: ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂಬದು “ಶಕ್ತಿ”ಗೆ ಮನವರಿಕೆಯಾದ ಅಂಶ.

-ವರದಿ: “ಚಕ್ರವರ್ತಿ-ಪ್ರಜ್ಞಾ ಜಿ.ಆರ್