ಮಡಿಕೇರಿ, ಮೇ 12: ಹತ್ತು ಹಲವಾರು ರೀತಿಯ ವಿಮರ್ಶೆಗಳು, ಟೀಕೆ - ಟಿಪ್ಪಣಿಗಳಿಗೆ ಕಾರಣವಾಗಿದ್ದ ಸಿಎಂ ಕುಮಾರಸ್ವಾಮಿ ಹಾಗೂ ಅವರ ಆಪ್ತರ ರೆಸಾರ್ಟ್ ವಾಸ್ತವ್ಯ ಮುಗಿದಿದೆ. ಮಡಿಕೇರಿಯ ಹೊರವಲಯದಲ್ಲಿರುವ ಇಬ್ಬನಿ ರೆಸಾರ್ಟ್‍ಗೆ ಕಳೆದ ಎರಡು ದಿನಗಳ ಹಿಂದೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಹಲವು ಆಪ್ತರೊಂದಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ತಮ್ಮ ದಂಡಿನೊಂದಿಗೆ ಕೊಡಗು ಜಿಲ್ಲೆಯಿಂದ ಹಿಂತಿರುಗಿದರು. ಮಾಧ್ಯಮದವರು ಅವರನ್ನು ಮಾತನಾಡಿಲು ಸಾಕಷ್ಟು ಪರಿಶ್ರಮಪಟ್ಟರೂ ರೆಸಾರ್ಟ್ ಸೇರಿದ್ದ ಕುಮಾರಣ್ಣ ಯಾರಿಗೂ ಲಭ್ಯವಾಗಿರಲಿಲ್ಲ. ತಾ. 10 ರಂದು ಸಂಜೆ ಇವರು ಕೊಡಗಿನ ಈ ರೆಸಾರ್ಟ್‍ಗೆ ಪ್ರವೇಶಿಸಿದ್ದು, ಇಂದು ಅಪರಾಹ್ನದ ತನಕವೂ ಹೊರ ಬಂದಿರಲಿಲ್ಲ. ಈ ವೇಳೆಯಲ್ಲಿ ಪೊಲೀಸ್ ಹಾಗೂ ಖಾಸಗಿ ಭದ್ರತೆಯೂ ಹೆಚ್ಚಾಗಿತ್ತು. ವಿಶ್ರಾಂತಿಯ ಕಾರಣ ಹೇಳಿ ಸಿಎಂ ಪಾಳಯ ಇಲ್ಲಿ ವಾಸ್ತವ್ಯ ಹೂಡಿತ್ತು.ಆದರೆ ಈ ರೆಸಾರ್ಟ್ ವಾಸ್ತವ್ಯ ಇಡೀ ರಾಜ್ಯಾದ್ಯಂತ ಹಲವು ರೀತಿಯ ಚರ್ಚೆಗಳಿಗೆ

(ಮೊದಲ ಪುಟದಿಂದ) ಎರಡು ದಿನ ಆಸ್ಪದವಾಗಿತ್ತು. ಇಂದು ಬೆಳಿಗ್ಗೆ ಮೊದಲಿಗೆ ಸಚಿವ ಸಾ.ರಾ. ಮಹೇಶ್ ನಿರ್ಗಮಿಸಿದರೆ, ಬಳಿಕ ಇನ್ನೋರ್ವ ಸಚಿವರಾದ ಪುಟ್ಟರಾಜು ಇದಾದ ನಂತರ ಅನಿತಾಕುಮಾರಸ್ವಾಮಿ ಹಾಗೂ ನಿಖಿಲ್ ಹಿಂತಿರುಗಿದರೆ, 12.30ರ ವೇಳೆಗೆ ಕುಮಾರಸ್ವಾಮಿ ಅವರು ಮರಳಿದರು. ಇವರೆಲ್ಲರೂ ಒಟ್ಟಿಗೆ ತೆರಳದೆ ಒಬ್ಬೊಬ್ಬರಾಗಿ ತಾಸುಗಳ ಅಂತರದಲ್ಲಿ ತೆರಳಿದ್ದು, ವಿಶೇಷವಾಗಿತ್ತು. ರೆಸಾರ್ಟ್‍ನ ಹೊರಗೆ ಮುಖ್ಯದ್ವಾರದ ಬಳಿ ಮಾಧ್ಯಮದವರು ಕಾಯುತ್ತಿದ್ದರಾದರೂ ವಾಹನ ನಿಲ್ಲಿಸುವದಿರಲಿ, ತಿರುಗಿಯೂ ನೋಡದಂತೆ ಕುಮಾರಸ್ವಾಮಿ ಅವರು ಮರಳುವದರೊಂದಿಗೆ ರೆಸಾರ್ಟ್ ವಾಸ್ತವ್ಯದ ಗುಸುಗುಸು ಚರ್ಚೆ, ಕೊಡಗಿನ ಗಡಿದಾಟಿತು.