ಮಡಿಕೇರಿ, ಮೇ 13: ಸಂಪಾಜೆಯಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಬಂದ ಮಾರುತಿ ವ್ಯಾನ್ (ಓಮ್ನಿ ಕೆಎ-21-ಎನ್-0781) ಡಿಕ್ಕಿ ಹೊಡೆದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಲಾರಿಗೆ (ಕೆಎ 12 ಬಿ-5842) ಅತಿವೇಗವಾಗಿ ಬಂದ ವ್ಯಾನ್; ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.ಪರಿಣಾಮ ಪುತ್ತೂರು ನಿವಾಸಿ ಜಯರಾಂ (36) ಎಂಬ ವ್ಯಕ್ತಿ ಮಾರಣಾಂತಿಕ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ವ್ಯಾನ್ ಚಾಲಕ ವಿಜಯ ಕೂಡ ತೀವ್ರ ಗಾಯಗೊಂಡು ಸುಳ್ಯದಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.ಲಾರಿ ಚಾಲಕ ಉಮ್ಮರ್ ಎಂಬವರು (ಮೊದಲ ಪುಟದಿಂದ) ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಘಟನೆ ಸ್ಥಳಕ್ಕೆ ತೆರಳಿ ಮಹಜರು ನಡೆಸುವದರೊಂದಿಗೆ ಕಾನೂನು ಕ್ರಮ ಕೈಗೊಂಡು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇಂದು ಅಪರಾಹ್ನ 4.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಮೃತ ಜಯರಾಂ ಹಾಗೂ ವ್ಯಾನ್ ಚಾಲಕ ವಿಜಯ್ ಸಂಬಂಧಿಗಳಾಗಿದ್ದು, ಹಾಸನಕ್ಕೆ ತೆರಳಿದ್ದು; ಅಲ್ಲಿಂದ ಸ್ವಗ್ರಾಮ ಪುತ್ತೂರಿಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.