ಭಾಗಮಂಡಲ, ಮೇ 13: ಜನಾಂಗ ಬಾಂಧವರು ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುತ್ತಿದ್ದು ಜಿಲ್ಲೆಯ ಯುವ ಶಕ್ತಿಗೆ ಉತ್ತಮ ಅವಕಾಶ ಲಭಿಸಿದಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳು ಹೊರಬರಲು ಸಹಕಾರಿಯಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ಇಲ್ಲಿಗೆ ಸಮೀಪದ ಕೋರಂಗಾಲದ ಸರ್ಕಾರಿ ಶಾಲಾ ಮೈದಾನದಲ್ಲಿ ಗೌಡ ಜನಾಂಗಗಳ ನಡುವೆ ಏರ್ಪಡಿಸಲಾಗಿದ್ದ ನಂಗಾರು ಕಬಡ್ಡಿ ಕಪ್- 2019 ಪಂದ್ಯಾಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆ ಕ್ರೀಡೆಗಳಿಗೆ ತವರೂರಾಗಿದೆ. ವಿವಿಧ ಜನಾಂಗಗಳು ನಡೆಸುತ್ತಿರುವ ಗ್ರಾಮೀಣ ಕ್ರೀಡಾಕೂಟಗಳಿಂದ ಕ್ರೀಡಾ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಿದೆ ಎಂದರು. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಹೊಸೊಕ್ಲು ಉತ್ತಪ್ಪ ಮಾತನಾಡಿ ನಂಗಾರು ಕುಟುಂಬ ಗೌಡ ಜನಾಂಗಗಳ ನಡುವೆ ಕ್ರೀಡಾಕೂಟವನ್ನು ಏರ್ಪಡಿಸುತ್ತಿರುವದು ಸಂತಸ ತಂದಿದೆ. ಮುಂದಿನ ವರ್ಷಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವದು ಎಂದರು. ಸಮಾರಂಭಕ್ಕೆ ಮುನ್ನ ಕ್ರೀಡಾಕೂಟವನ್ನು ಉದ್ಘಾಟಿಸಿ ಅಂತಿಮ ಪಂದ್ಯಕ್ಕೆ ಚಾಲನೆ ನೀಡಿದರು.

ಗೌಡ ಜನಾಂಗಳ ನಡುವೆ ಏರ್ಪಡಿಸಲಾಗಿದ್ದ ಕಬಡ್ಡಿ ಪಂದ್ಯಾಟದಲ್ಲಿ 32 ತಂಡಗಳು ಪಾಲ್ಗೊಂಡಿದ್ದವು. ನಂಗಾರು ಮತ್ತು ಪುದಿಯನೆರವನ ಹಾಗೂ ಕುಂಬಳಚೇರಿ ಮತ್ತು ಅಡಪಂಗಾಯ ತಂಡಗಳ ನಡುವೆ ಸೆಮಿಫೈನಲ್ ಪಂದ್ಯಗಳು ಜರುಗಿದವು.

(ಮೊದಲ ಪುಟದಿಂದ) ಅಂತಿಮ ಸುತ್ತು ಪ್ರವೇಶಿಸಿದ ನಂಗಾರು ಮತ್ತು ಕುಂಬಳಚೇರಿ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಪಂದ್ಯಾಟದಲ್ಲಿ ಕುಂಬಳಚೇರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಆತಿಥೇಯ ನಂಗಾರು ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಹಿಳೆಯರಿಗಾಗಿ ನಡೆದ ಥ್ರೋಬಾಲ್ ಪಂದ್ಯಾವಳಿಯನ್ನು ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ್ತಿ ಪಟ್ಟೆಮನೆ ನವನೀತ ಉದ್ಘಾಟಿಸಿದರು. ಫೈನಲ್ ಪಂದ್ಯಾಟವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್‍ಕುಮಾರ್ ಹಾಗೂ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೆರ ಮನೋಹರ್ ಉದ್ಘಾಟಿಸಿದರು. ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕೋಳಿಬೈಲು ಮತ್ತು ನಂಗಾರು ಹಾಗೂ ಉಳುವಾರನ ಮತ್ತು ಕುದುಕುಳಿ ತಂಡಗಳು ಅಂತಿಮ ಸುತ್ತಿನಲ್ಲಿ ಸೆಣಸಾಟ ನಡೆಸಿದವು.

ಪಂದ್ಯಾವಳಿಯಲ್ಲಿ ಉಳುವಾರನ ತಂಡ ಪ್ರಥಮ ಸ್ಥಾನ ಗಳಿಸಿತು. ಕೋಳಿಬೈಲು ತಂಡ ದ್ವಿತೀಯ ಸ್ಥಾನ ಗಳಿಸಿತು. ಪ್ರಶಸ್ತಿ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ನಂಗಾರು ಕುಟುಂಬದ ವಿಕಸನ ಸಂಘದ ಅಧ್ಯಕ್ಷ ಗುರುಪ್ರಸನ್ನ ವಹಿಸಿದ್ದರು. ನಂಗಾರು ಕುಟುಂಬದ ಹಿರಿಯರಾದ ಮಾದಪ್ಪ , ಉತ್ತಯ್ಯ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ದುಗ್ಗಳ ಕಪಿಲ್, ನಂಗಾರು ಮೋಹನ್‍ಕುಮಾರ್, ಪಳಂಗೋಟು ಕೇಶು, ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಭವಾನಿ ಹರೀಶ್, ಯುವ ವೇದಿಕೆ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ನಂಗಾರು ಪುನೀತ್ ಉಪಸ್ಥಿತರಿದ್ದರು.

-ಸುನಿಲ್ ಕುಯ್ಯಮುಡಿ