*ಗೋಣಿಕೊಪ್ಪಲು, ಮೇ 13 : ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆ ತಿತಿಮತಿ ಮರಪಾಲ ಸಮೀಪದ ನರವತ್ತು ಎಸ್ಟೇಟ್ ಬಳಿ ನಡೆದಿದೆ. ಸೋಮವಾರ ಮದ್ಯಾಹ್ನದ ಸಮಯದಲ್ಲಿ ಹಸುಗಳನ್ನು ಅಡಿಕೆ ತೋಟದಲ್ಲಿ ಮಾಲೀಕರು ಮೇಯಲು ಬಿಟ್ಟಿದ್ದರು. ಈ ಸಂದರ್ಭ ಹುಲಿ ಎಕಾಏಕಿ ಹಸುಗಳ ಮೇಲೆ ದಾಳಿ ನಡೆಸಿದೆ. ಹುಲಿ ದಾಳಿಗೆ ಗಬ್ಬದ ಹಸುವೊಂದು ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದೆ. ನರವತ್ತು ಎಸ್ಟೇಟ್‍ನ ವ್ಯವಸ್ಥಾಪಕ ಡಿ.ಬಿ. ರವಿ ಅವರಿಗೆ ಸೇರಿದ ಹಸುಗಳಾಗಿದ್ದು, ನಾಲ್ಕು ಹಸುಗಳನ್ನು ಮೇಯಲು ಬಿಟ್ಟ ಸಂದರ್ಭ ಹುಲಿ ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿದೆ.
ಹಸು ಮೇಯಿಸುತ್ತಿದ್ದ ವ್ಯಕ್ತಿ ಹುಲಿಯನ್ನು ಕಂಡು ಗಾಬರಿಯಿಂದ ಕಿರುಚಿಕೊಂಡು ಓಡಿ ಹೋಗಿ ಮಾಲೀಕನಿಗೆ ಮಾಹಿತಿ ನೀಡಿದ್ದಾನೆ. ಈ ಸಂದರ್ಭ ಸ್ಥಳಕ್ಕೆ ಸ್ಥಳೀಯರು ಬಂದು ಪಟಾಕಿ ಸಿಡಿಸಿದಾಗ ಹಸುವಿನ ಮೇಲೆ ದಾಳಿ ನಡೆಸಿದ ಸಮೀಪದಲ್ಲೇ ಹುಲಿ ಅವಿತು ಕುಳಿತ್ತಿದ್ದು, ಪಟಾಕಿಯ ಶಬ್ದಕ್ಕೆ ಓಡಿ ಹೋಗಿದೆ ಎಂದು ಸ್ಥಳೀಯ ಗ್ರಾ.ಪಂ. ಸದಸ್ಯ ಎನ್.ಎನ್. ಅನೂಪ್ ಕುಮಾರ್ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಹಸು ಮುಂದಿನ ನಾಲ್ಕೈದು ದಿನದೊಳಗೆ ಕರು ಹಾಕುವ ಸಾಧ್ಯತೆ ಇತ್ತು. ಮಾಲೀಕ ರವಿ ಅವರ ಮಾಹಿತಿ ಪ್ರಕಾರ ಗಾಯಗೊಂಡ ಹಸು ಸುಮಾರು 60 ಸಾವಿರ ರೂಪಾಯಿ ಬೆಲೆ ಬಾಳುತ್ತದೆ.
ಹುಲಿ ಹಸುವಿನ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭವೇ ಮತ್ತೊಂದು ಬದಿಯಲ್ಲಿ ಸುಮಾರು 35ಕ್ಕೂ ಹೆಚ್ಚು ತೋಟ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹುಲಿ ದಾಳಿ ನಡೆಸಿದಾಗ ಹಸುಗಳ ಆರ್ಭಟಕ್ಕೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಭಯಗೊಂಡು ಕೆಲಸ ಸ್ಥಗಿತಗೊಳಿಸಿ ಹಸುಗಳಿದ್ದ ಸ್ಥಳಕ್ಕೆ ದಾವಿಸಿದರು. ಜನರ ಶಬ್ದವನ್ನು ಗ್ರಹಿಸಿದ
(ಮೊದಲ ಪುಟದಿಂದ) ಹುಲಿ ದಾಳಿಯನ್ನು ಬಿಟ್ಟು ತೋಟದೊಳಗೆ ಓಡಿ ಹೋಗಿದೆ ಎಂದು ಮಾಲೀಕ ರವಿ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿ ಶ್ರೀಪತಿ, ವಲಯ ಅರಣ್ಯಾಧಿಕಾರಿ ಅಶೋಕ್ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತಿಗೋಡು ವನ್ಯ ಜೀವಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಹುಲಿ ಪತ್ತೆಗಾಗಿ ತೋಟದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಗಾಯಗೊಂಡ ಹಸುವಿಗೆ ಪಶುವೈದ್ಯಾಧಿಕಾರಿ ಚಿಕಿತ್ಸೆ ನೀಡಿದ್ದಾರೆ.
ಕ್ರಮಕ್ಕೆ ಆಗ್ರಹ
ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾದ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಮುಖಂಡರಾದ ಪುಚ್ಚಿಮಾಡ ಸುಭಾಷ್, ಬಾಚಿಮಾಡ ಭವಿ ಕುಮಾರ್,ಮಂಡೆಪಂಡ ಪ್ರವೀಣ್, ಆಲೆಮಾಡ ಮಂಜುನಾಥ್, ಪುಚ್ಚಿಮಾಡ ಸಂತೋಷ, ಕಿಶೋರ್, ಪಾರುವಂಗಡ ಅರುಣ್, ಬಲ್ಯಮೇದಿರ ಪ್ರವೀಣ್, ಮಚ್ಚಮಾಡ ಸತೀಶ್, ಮಲ್ಲೆಂಗಡ ಕೀರ್ತಿ, ಎಸ್.ಎಸ್.ಸುರೇಶ್, ಅಪ್ಪನೆರವಂಡ ರವಿ,ಮುಂತಾದವರು ಘಟನಾ ಸ್ಥಳ ಕ್ಕೆ ಭೇಟಿ ನೀಡಿದರು.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬರಮಾಡಿಕೊಂಡ ರೈತ ಮುಖಂಡರು ಹುಲಿಯನ್ನು ಹಿಡಿಯಲು ಕ್ರಮಕ್ಕೆ ಆಗ್ರಹಿಸಿದರು. ಸ್ಥಳದಲ್ಲಿ ಎಸಿಎಪ್ ಶ್ರೀಪತಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆರ್.ಆರ್.ಟಿ.ತಂಡ ಮೊಕ್ಕಾಂ ಹೂಡಿದ್ದು, ಹುಲಿಯ ಚಲನ ವಲನದ ಬಗ್ಗೆ ನಿಗಾ ವಹಿಸಿ ಹುಲಿ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.
- ದಿನೇಶ್, ಜಗದೀಶ್