ಮಡಿಕೇರಿ, ಮೇ 12: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ, ಸೋಮವಾರಪೇಟೆ ರೋಟರಿ ಹಿಲ್ಸ್ ಮತ್ತು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ತಾ. 14 ರಂದು ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರದಲ್ಲಿ ‘ಕಾಯಕ ದಿನಾಚರಣೆ’, ಬಸವಣ್ಣ, ಬುದ್ಧ, ಮಹಾವೀರ, ಅಕ್ಕಮಹಾದೇವಿ, ವಾಲ್ಮೀಕಿ, ಅಂಬೇಡ್ಕರ್, ಶಂಕರ ಹಾಗೂ ಶಿವ ಕುಮಾರ ಸ್ವಾಮೀಜಿಗಳ ಜಯಂತಿ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹೇಶ್, ದಿನದ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಗೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗಿಡ ನೆಡುವ ಕಾರ್ಯಕ್ರಮ ನಡೆಯಲಿದ್ದು, ವಲಯ ಅರಣ್ಯ ಅಧಿಕಾರಿ ಲಕ್ಷ್ಮೀಕಾಂತ್ ಚಾಲನೆ ನೀಡಲಿದ್ದಾರೆ.
ಬಳಿಕ ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಸಹಯೋಗದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ಹೃದ್ರೋಗ, ಸ್ತ್ರೀರೋಗ, ಚರ್ಮರೋಗ, ಮಕ್ಕಳ ತಜ್ಞರು, ಜನರಲ್ ಮೆಡಿಸಿನ್, ಇಸಿಜಿ ಮತ್ತು ಎಕೋ ಪರೀಕ್ಷೆಯನ್ನು ನುರಿತ ವೈದ್ಯರ ತಂಡ ನಡೆಸಿಕೊಡಲಿದೆ ಎಂದು ಹೇಳಿದರು.
ಪೂರ್ವಾಹ್ನ 11 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭÀದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಭಾಗವಹಿಸಲಿದ್ದಾರೆ. ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ, ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು, ಸೋಮವಾರಪೇಟೆ ರೋಟರಿ ಅಧ್ಯಕ್ಷ ಪಿ.ಕೆ. ರವಿ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು.
ಜಾತಿ ವ್ಯವಸ್ಥೆಯ ವಿರುದ್ಧ ಮಾತನಾಡುವ ಸರ್ಕಾರವೆ ಇಂದು ಜಾತಿ ಹೆಸರಿನಲ್ಲಿ ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಿದೆ. ಇದರೊಂದಿಗೆ ಇಂತಹ ಮಹಾಪುರುಷರ ಜಯಂತಿ ಆಚರಣೆ ಸಂದರ್ಭ ಆಯಾ ಸಮುದಾಯದವರನ್ನು ಮಾತ್ರ ಆಹ್ವಾನಿಸಲಾಗುತ್ತಿದ್ದು, ಇತರ ಸಮುದಾಯದವರನ್ನು ಕಡೆಗಣಿಸುವ ಮೂಲಕ ಜಾತಿ ವ್ಯವಸ್ಥೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಎಸ್. ಮಹೇಶ್ ಈ ಹಿನ್ನೆಲೆಯಲ್ಲಿ ಎಲ್ಲಾ ಮಹಾಪುರುಷರ ಜಯಂತಿಗಳಿಗೆ ಎಲ್ಲಾ ಸಮುದಾಯದ ಪ್ರತಿನಿಧಿಗಳನ್ನು ಆಹ್ವಾನಿಸುವಂತಾಗಬೇಕೆಂದು ಒತ್ತಾಯಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವಂತೆ ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಆದೇಶ ಹೊರಡಿಸಿದ್ದರು ಅದು ಇಂದಿಗೂ ಅನುಷ್ಟಾನಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾಡಳಿತದ ಗಮನ ಸೆಳೆÉಯಲಾಗಿದ್ದು, ಮೂರು ವಾರಗಳ ಒಳಗೆ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಕಿರಿಯ ವಯಸ್ಸಿನಲ್ಲೇ ಶೌರ್ಯಚಕ್ರ ಪುರಸ್ಕøತ ಹೆಚ್.ಎನ್. ಮಹೇಶ್, ದಿಡ್ಡಳ್ಳಿ ನಿರಾಶ್ರಿತರ ಪರವಾಗಿ ಹೋರಾಟ ನಡೆಸಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಹೋರಾಟಗಾರ್ತಿ ಮುತ್ತಮ್ಮ ಹಾಗೂ ಇತರರನ್ನು ಸನ್ಮಾನಿಸಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್ತುವಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಾಂಬಶಿವ ಮೂರ್ತಿ, ಸಲಹೆಗಾರ ಶಿವಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ಉದಯ ಕುಮಾರ್ ಹಾಜರಿದ್ದರು.