ಮಡಿಕೇರಿ, ಮೇ 13: ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂರ್ಗ್ ಪ್ರಾಯೋಜಕತ್ವದ ಕಾಲೂರು ಗ್ರಾಮದ ಮಹಿಳೆಯರು ಉತ್ಪಾದಿಸಿದ ಮಸಾಲೆ, ಸಂಬಾರ ಪದಾರ್ಥಗಳ ಮಾರಾಟಕ್ಕೆ ಅಮೇರಿಕಾದಲ್ಲಿನ ಕೊಡವ ಕೂಟದ ಪ್ರಾಯೋಜಕತ್ವದಲ್ಲಿ ದೊರಕಿರುವ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು.
ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿ ನಡೆದ ಸರಳ ಸಮಾರಂಭದಲ್ಲಿ ಜಲಪ್ರಳಯದಿಂದ ಸಂಕಷ್ಟಗೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಸ್ವಾವಲಂಭಿ ಜೀವನಕ್ಕಾಗಿ ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂರ್ಗ್ ವತಿಯಿಂದ ತರಬೇತಿ ನೀಡಿ ತಯಾರಿಸಲಾದ ಮಸಾಲೆ ಪದಾರ್ಥಗಳ ಮಾರಾಟಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಉತ್ತರ ಅಮೇರಿಕಾದ ಕೊಡವ ಕೂಟದವರು ನೀಡಿದ ಸಂಚಾರಿ ವಾಹನಕ್ಕೆ ವಿದ್ಯಾಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್.ದೇವಯ್ಯ ಚಾಲನೆ ನೀಡಿದರು.
ಈ ಸಂದರ್ಭ ಸ್ಪೆಕ್ ವ್ಯವಸ್ಥೆಯ ನೆರವಿನೊಂದಿಗೆ ಅಮೇರಿಕಾದಿಂದ ಮಡಿಕೇರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನುದ್ದೇಶಿಸಿ ಮಾತನಾಡಿದ ಕೊಡವ ಕೂಟದ ಅಧ್ಯಕ್ಷೆ ಕೊಂಗಂಡ ಜಿನ, ಜಲಪ್ರಳಯದಿಂದ ತತ್ತರಿಸಿರುವ ಕೊಡಗಿನ ಹಲವಾರು ಗ್ರಾಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಮೇರಿಕಾದಲ್ಲಿ ನೆಲಸಿರುವ ಕೊಡವ ಸಮುದಾಯವರು ಎಲ್ಲಾ ರೀತಿಯ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ಪ್ರಾಜೆಕ್ಟ್ ಕೂರ್ಗ್ ವಿನೂತನ ರೀತಿಯಲ್ಲಿ ಮಹಿಳೆಯರನ್ನು ಸ್ವಾವಲಂಭಿಗಳಾಗಿಸುವ ಉದ್ದೇಶದಿಂದ ಮಸಾಲೆ ಪದಾರ್ಥಗಳ ತಯಾರಿಕೆಯ ತರಬೇತಿ ನೀಡಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿರುವದು ಗಮನ ಸೆಳೆಯಿತು. ವಿಶೇಷವಾಗಿ ನೊಂದ ಮಹಿಳೆಯರಿಗೆ ಮಾನಸಿಕ ಧೈರ್ಯ ತುಂಬಿ ಆರ್ಥಿಕವಾಗಿ ಆ ಮಹಿಳೆಯರನ್ನು ಪ್ರಬಲಗೊಳಿಸುವ ಯೋಜನೆ ವಿನೂತನ ಎನಿಸಿತು. ಹೀಗಾಗಿ ಕೊಡವಕೂಟದಿಂದ ಈ ಯೋಜನೆಗೆ ಸಂಚಾರಿ ವಾಹನ ಪ್ರಾಯೋಜಿಸಲು ನಿರ್ಧರಿಸಲಾಯಿತು ಎಂದರು.
ಸ್ವಚ್ಚ ಮತ್ತು ಹಸಿರು ಕೊಡಗಿನ (ಕ್ಲೀನ್‍ಅಂಡ್‍ಗ್ರೀನ್ ಕೂರ್ಗ್) ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೊಡವ ಕೂಟವು ವಿನೂತನವಾದ ಯೋಜನೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಪ್ರಳಯಕ್ಕೊಳಗಾದ ಗ್ರಾಮಗಳಲ್ಲಿ ಸಸಿ ನೆಡುವ ಉದ್ದೇಶವನ್ನೂ ಹೊಂದಲಾಗಿದೆ. ಪೊನ್ನಂಪೇಟೆಯ ಸಾಯಿಶಂಕರ ಶಾಲಾ ವಿದ್ಯಾರ್ಥಿಗಳಿಗೆ ಕೊಡವಕೂಟದಿಂದ 15 ಕಂಪ್ಯೂಟರ್‍ಗಳನ್ನು ನೀಡಲಾಗಿದೆ ಎಂದು ಜಿನ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ತಾನು ಹುಟ್ಟಿದ ಕಾಲೂರು ಗ್ರಾಮದ ಮಹಿಳೆಯರನ್ನು ಸ್ವಾವಲಂಭಿಗಳಾಗಿಸುವ ಉದ್ದೇಶದಿಂದ ನೀಡಲಾಗುತ್ತಿರುವ ಸವಲತ್ತುಗಳು ತೃಪ್ತಿ ತಂದಿದೆ. ಅಮೇರಿಕಾದಲ್ಲಿದ್ದರೂ ಕೊಡಗನ್ನು ಮರೆಯದೇ ಸಂಕಷ್ಟದಲ್ಲಿರುವ ಕೊಡಗಿನ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವ ಕೊಡವಕೂಟದ ಉದ್ದೇಶ ಶ್ಲಾಘನೀಯ ಎಂದರು. ಎಲ್ಲಾದರೂ ಇರು, ಎಂಥಾದರೂ ಇರು, ಕೊಡಗಿನವರಿಗೆ ಸದಾ ನೆರವಾಗುತ್ತಿರು ಎಂಬಂತೆ ಕೊಡವ ಕೂಟದವರು ಸಹಾಯಕ್ಕೆ ಮುಂದಾಗಿದ್ದಾರೆ ಎಂದೂ ಬೋಪಯ್ಯ ಹರ್ಷ ವ್ಯಕ್ತಪಡಿಸಿದರು.
ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಕಾಲೂರಿನ ಜನತೆಯ ನೆರವಿಗೆ ಅಮೇರಿಕಾದ ಕೊಡವಕೂಟ ಮುಂದಾಗಿರುವದು ಕಾಲೂರು ಗ್ರಾಮಸ್ಥರಿಗಾಗಿನ ಸಬಲೀಕರಣ ಉದ್ದೇಶದ ವೈವಿಧ್ಯಮಯ ಯೋಜನೆಗಳಿಗೆ ಮತ್ತಷ್ಟು ಬಲ ನೀಡಿದೆ ಎಂದು ಶ್ಲಾಘಿಸಿದರು.
ಕಾಲೂರು ಗ್ರಾಮಸ್ಥರ ಪರವಾಗಿ ಮಾತನಾಡಿದ ಸಾಹಿತಿ ನಾಗೇಶ್‍ಕಾಲೂರು, ಹಲವಾರು ವರ್ಷಗಳಿಂದ ದಿನಾ ಕಾಣುತ್ತಿದ್ದ ಬೃಹತ್ ಬೆಟ್ಟಗಳೇ ಈ ರೀತಿ ಕುಸಿದೀತು ಎಂದು ಯಾರೂ ಅಂದು ಕೊಂಡಿರಲಿಲ್ಲ. ಕಾಲೂರು ಗ್ರಾಮದಲ್ಲಿ ಗ್ರಾಮದೇವಿಯ ಅನುಗ್ರಹದಿಂದಾಗಿ ಯಾರದ್ದೇ ಪ್ರಾಣ, ಜಾನುವಾರುಗಳಿಗೆ ಜೀವಹಾನಿಯಾಗಲಿಲ್ಲ ಎಂದರು. ಕತ್ತಿ ಹಿಡಿದು ಗದ್ದೆಯಲ್ಲಿ ಕೃಷಿ ಮಾಡಿದ್ದ, ಕಾಫಿ ಕುಯ್ಲು ಮಾಡಿ ತಲೆ ಹೊರೆಯಲ್ಲಿ ಕೊಂಡೊಯ್ದು ಮಾರಾಟ ಮಾಡುತ್ತಿದ್ದ ಗ್ರಾಮದ ಮಹಿಳೆಯರಿಗೆ ಸಂಕಷ್ಟ ಎದುರಾದಾಗ ಹೊಸದ್ದಾಗಿ ಮಸಾಲೆ ಪದಾರ್ಥಗಳ ತಯಾರಿಕೆಯ ತರಬೇತಿ ನೀಡಿ ಮಡಿಕೇರಿಯಲ್ಲಿ ಉತ್ಪನ್ನಗಳ ಮಾರಾಟಕ್ಕಾಗಿ ಎರಡು ಮಳಿಗೆಗಳನ್ನು ತೆರೆಯಲಾಗಿತ್ತು. ಇದೀಗ ನೂತನವಾಗಿ ಸಂಚಾರ ವಾಹನದ ಮೂಲಕ ಜಿಲ್ಲೆಯಾದ್ಯಂತ ಕಾಲೂರು ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಮನೋಹರ್ ಜಿ.ಪಾಟ್ಕರ್, ಪ್ರಾಜೆಕ್ಟ್ ಕೂರ್ಗ್ ಮುಖ್ಯಸ್ಥ ಬಾಲಾಜಿಕಶ್ಯಪ್, ನಿರ್ದೇಶಕರುಗಳಾದ ಕೆ.ಎಸ್.ರಮೇಶ್ ಹೊಳ್ಳ, ವೇದಮೂರ್ತಿ, ಎಂ.ಇ.ಚಿಣ್ಣಪ್ಪ, ನಯನಾಕಶ್ಯಪ್, ಅನಿಲ್ ಎಚ್.ಟಿ., ಗೌರಿಕಶ್ಯಪ್, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ರಘುಮಾದಪ್ಪ, ಕಾಲೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾಲೂರು ಮಹಿಳೆಯರು ಯಶಸ್ವಿ ಯೋಜನೆಯಡಿ ತಯಾರಿಸಿದ ಮಸಾಲೆ ಪದಾರ್ಥಗಳು, ಸಂಬಾರ ಪದಾರ್ಥಗಳು, ಕಾಫಿ ಪುಡಿ, ಜೇನು, ಅಕ್ಕಿಪುಡಿ, ಚಾಕೋಲೇಟ್, ಸೇರಿದಂತೆ ಕೊಡಗಿನ ಉತ್ನನ್ನಗಳನ್ನು ಈ ಸಂಚಾರಿ ವಾಹನದಲ್ಲಿ ಕೊಡಗಿನ ವಿವಿಧೆಡೆ ಮಾರಾಟ ಮಾಡಲಾಗುತ್ತದೆ. ಕೊಡಗಿನವರೇ ಉತ್ಪಾದಿಸಿದ ಮಸಾಲೆ ಪದಾರ್ಥಗಳ ಮಾರಾಟದ ಮೊದಲ ಸಂಚಾರಿ ವಾಹನ ಇದಾಗಿದೆ.