ಸೋಮವಾರಪೇಟೆ, ಮೇ 13: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಭಾರೀ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದ್ದು, ತಕ್ಷಣ ರೈತರಿಗೆ ಪರಿಹಾರವನ್ನು ವಿತರಿಸಬೇಕೆಂದು ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಗೋವಿಂದರಾಜ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ್ರಾಕೃತಿಕ ವಿಕೋಪದಿಂದ ಸೋಮವಾರಪೇಟೆ ತಾಲೂಕಿನಾದ್ಯಂತ ಅಪಾರ ಪ್ರಮಾಣದಲ್ಲಿ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಪರಿಹಾರಕ್ಕಾಗಿ ರೈತರು ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಪರಿಹಾರ ಲಭಿಸಿಲ್ಲ. ಕೆಲವೇ ದಿನಗಳಲ್ಲಿ ಈ ವರ್ಷದ ಮಳೆಗಾಲವೂ ಪ್ರಾರಂಭವಾಗಲಿದ್ದು, ಸರ್ಕಾರಿ ಅಧಿಕಾರಿಗಳು ರೈತಪರವಾಗಿ ಕೆಲಸ ಮಾಡದೇ ಇರುವದು ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.ಭೂಕುಸಿತ, ಪ್ರವಾಹದಿಂದ ಕಾಫಿ ತೋಟ, ಏಲಕ್ಕಿ ತೋಟ, ಭತ್ತದ ಗದ್ದೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಹಾಗು ಬದಲಿ ಜಾಗ ನೀಡಬೇಕು. ಮನೆ ಕಳೆದು ಕೊಂಡವರಿಗೆ ಮನೆಗಳನ್ನು ಕೂಡಲೆ ನಿರ್ಮಿಸಿಕೊಡಬೇಕು. ಏಲಕ್ಕಿ, ಕಾಫಿ ತೋಟಗಳಲ್ಲಿ ಬಿದ್ದಿರುವ ಮರಗಳನ್ನು ತೋಟದ ಮಾಲೀಕರು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ.ಮುದ್ದಪ್ಪ ಅವರುಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಮಹಾಮಳೆಯಿಂದ ತಾಲೂಕಿನಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆ, ಭತ್ತ ಮುಂತಾದ ಬೆಳೆ ಶೇ.70ರಿಂದ 80ರಷ್ಟು ಹಾನಿಯಾಗಿದೆ. ಆದರೆ ಇದುವರೆಗೆ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಬೆರಳೆಣಿಕೆ ಮಂದಿಗೆ ಒಂದೆರಡು ಸಾವಿರ ಪರಿಹಾರ ನೀಡಲಾಗಿದೆ. ಇಂತಹ ಅವೈಜ್ಞಾನಿಕ ಪರಿಹಾರದಿಂದ ರೈತಾಪಿ ವರ್ಗಕ್ಕೆ ಪ್ರಯೋಜನವಿಲ್ಲ ಎಂದು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಕೆ.ಪಿ.ಬಸಪ್ಪ ಹೇಳಿದರು.

ಪ್ರಸಕ್ತ ವರ್ಷವೂ ಸಹ ಹೆಚ್ಚು ಮಳೆಯಾಗುವ ಬಗ್ಗೆ ವಿಜ್ಞಾನಿಗಳು ಅಭಿಪ್ರಾಯಿಸಿದ್ದು, ಸಂಭವಿಸ ಬಹುದಾದ ಅನಾಹುತಗಳನ್ನು ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬೆಳೆಗಾರರ ಸಮಸ್ಯೆಗಳ ಬಗ್ಗೆ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಎಸ್.ಜಿ.ಮೇದಪ್ಪ ಅವರು ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ತಾ. 14 ರಂದು (ಇಂದು) ಈ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳು ಕಚೇರಿಗೆ ಆಹ್ವಾನ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂದರ್ಭ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಎಂ.ಲವ, ಪದಾಧಿಕಾರಿಗಳಾದ ಸೋಮಶೇಖರ್, ಲಕ್ಷ್ಮಣ್, ರಾಮಚಂದ್ರ, ದಿನೇಶ್, ಕುಶಾಲಪ್ಪ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.