ಸೋಮವಾರಪೇಟೆ, ಮೇ 13: ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ 100 ವರ್ಷಗಳು ತುಂಬಿದ ಹಿನ್ನೆಲೆ ಸ್ಥಳೀಯ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸೋಮೇಶ್ವರ ದೇವಾಲಯ-ಬ್ರಾಹ್ಮಣ ಸಮಾಜದ ಶತಮಾನೋತ್ಸವ ಸಮಾರಂಭ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.
ತಾ. 9ರಂದು ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡ ಶತಮಾನೋತ್ಸವ ಸಮಾರಂಭದಲ್ಲಿ ಸಮಾಜದ ಬಾಂಧವರಿಗೆ ವಿವಿಧ ಕಾರ್ಯಕ್ರಮಗಳು ನಡೆದವು. ಶತಮಾನೋತ್ಸವ ಪ್ರಯುಕ್ತ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸೋಮೇಶ್ವರ ಕೃಪ (ಅರ್ಚಕರ ಗೃಹ)ದ ಉದ್ಘಾಟನೆ ನೆರವೇರಿತು.
ತಾ. 10ರಂದು ಮಾತನಾಡುವ ಗೊಂಬೆ ಖ್ಯಾತಿಯ ಇಂದೂಶ್ರೀ ರವೀಂದ್ರ ಅವರು ನಡೆಸಿಕೊಟ್ಟ ‘ಡಿಂಕು’ ಕಾರ್ಯಕ್ರಮ ಆಕರ್ಷಣೀಯವಾಗಿತ್ತು. ಇದರೊಂದಿಗೆ ಬ್ರಾಹ್ಮಣ ಸಮಾಜ ಬಾಂಧವರಿಗೆ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಕಲಾವಿದರಿಂದ ಮೂಡಿಬಂದ ನೃತ್ಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಮಾರೋಪ ಸಮಾರಂಭ: ನಂಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಶತಮಾನೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಅಖಿಲ ಭಾರತ ಬ್ರಾಹ್ಮಣ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಡಾ.ಕೆ.ಪಿ.ಪುತ್ತೂರಾಯ ಅವರು ಮಾತನಾಡಿ, ಉತ್ತಮ ವಿದ್ಯಾಭ್ಯಾಸ ಪಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೆ ಮಾತ್ರ ಸಮಾಜದ ಅಭಿವೃದ್ಧಿಯನ್ನು ಕಾಣಬಹುದು ಎಂದರು.
ಧಾರ್ಮಿಕ ಆಚರಣೆಗಳು ಮನುಷ್ಯನ ಬದುಕಿನಲ್ಲಿ ಅವಶ್ಯಕ. ಇವುಗಳಿಂದ ಮನಸ್ಸಿಗೆ ನೆಮ್ಮದಿ, ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದ ಅವರು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಅಂತಹ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ. ಮುಂದೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದು ಅಭಿಪ್ರಾಯಿಸಿದರು.
ಸಮಾರಂಭದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗೋಪಾಲಕೃಷ್ಣ, ಬೆಂಗಳೂರಿನ ಉದ್ಯಮಿ ಎನ್.ಪಿ. ಭಾಸ್ಕರ್, ವಕೀಲ ಎಚ್.ಆರ್.ರಮೇಶ್, ಸಮಾಜದ ಉಪಾಧ್ಯಕ್ಷ ಸುದರ್ಶನ್ ಕೌಶಿಕ್, ಹಿರಿಯ ಸದಸ್ಯ ಎಚ್.ಎಸ್. ಚಂದ್ರಶೇಖರಯ್ಯ, ದೇವಿಬಳಗ ಅಧ್ಯಕ್ಷೆ ಸುಮ ಚಿರಂಜೀವಿ, ಸಮಾಜದ ಮಾಜಿ ಅಧ್ಯಕ್ಷ ಎಸ್.ಆರ್.ಸೋಮೇಶ್, ಬೆಂಗಳೂರಿನ ನೇತ್ರಾವತಿ ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.