ಕೂಡಿಗೆ, ಮೇ. 13: ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಕಳೆದ 7 ವರ್ಷಗಳಿಂದ ಪ್ರಾರಂಭಗೊಂಡ ಹಾಕಿ ಟರ್ಫ್ ಕಾಮಗಾರಿಯು, ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಆದರೆ ಈಗ ಮತ್ತೆ ಪ್ರಾರಂಭಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.
ಕಳೆದ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭಗೊಂಡು ಹಾಕಿ ಟರ್ಫ್ (ಕೃತಕ ಹುಲ್ಲು ಹಾಸು) ಮೈದಾನಕ್ಕೆ ತಾತ್ಕಾಲಿಕವಾಗಿ ಹಾಕಿ ಟರ್ಫನ್ನು ಅಳವಡಿಸಲಾಗಿತ್ತು. ಹದಿನೈದು ದಿನಗಳ ಹಿಂದೆ ಕೂಡಿಗೆಯಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಕೃತಕ ಹುಲ್ಲು ಹಾಸು ಕಿತ್ತುಹೋಗಿದ್ದವು.
ಕೂಡಿಗೆ ಕ್ರೀಡಾ ಶಾಲೆಗೆ ರಾಜ್ಯ ಕ್ರೀಡಾ ಆಯುಕ್ತ ಕೆ. ಶ್ರೀನಿವಾಸ್ ಮತ್ತು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಜಿತೇಂದ್ರಶೆಟ್ಟಿ ಭೇಟಿ ನೀಡಿದ ಸಂದರ್ಭ ಕ್ರೀಡಾಂಗಣವನ್ನು ಪರಿಶೀಲಿಸಿ ಮುಂದಿನ ಶೈಕ್ಷಣಿಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ಪೂರ್ಣಗೊಳಿ ಸಲು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದರು. ಇದರನ್ವಯ ಗುತ್ತಿಗೆ ಪಡೆದ ದೆಹಲಿಯ ಸಿನ್ಹೋ ಕೋಡ್ ಕಂಪೆನಿಯವರು ಇಲಾಖೆಯಿಂದ ಹಣ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಪೂರ್ಣ ಗೊಳಿಸಲು ಮುಂದಾಗಿದ್ದಾರೆ.
ಜರ್ಮನಿಯಲ್ಲಿ ವಿಶೇಷ ತರಬೇತಿ ಪಡೆದ ದೆಹಲಿ ಮೂಲದ ನುರಿತ ತಜ್ಞ ರಾಜೇಶ್ ಮತ್ತು ಸಹಚರ ಹಮೀಷ್ ಅವರು ಇಂದಿನಿಂದ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.
ಹಾಕಿ ಟರ್ಫ್ನ ಅಡಿ ಭಾಗಕ್ಕೆ ವಿದೇಶದಿಂದ ತರಿಸಿದ ಅಂಟು (ಗಮ್)ನ್ನು ಹಾಕಿ ಅಳವಡಿಸಲಾಗುತ್ತಿದೆ. ತಜ್ಞರ ಪ್ರಕಾರ ಮುಂದಿನ ಹದಿನೈದು ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಹಾಕಿ ಕ್ರೀಡಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವದು ಎಂದು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕಾಮಗಾರಿ ಪ್ರಾರಂಭವಾಗಿ 7 ವರ್ಷಗಳು ಕಳೆದರೂ ಉದ್ಘಾಟನಾ ಭಾಗ್ಯ ಕಾಣದ ಕೂಡಿಗೆ ಕ್ರೀಡಾ ಶಾಲೆಯ ಹಾಕಿ ಟರ್ಫ್, ಕ್ರೀಡಾ ಆಯುಕ್ತರ ಹಾಗೂ ನಿರ್ದೇಶಕರ ಆಸಕ್ತಿಯಿಂದ ಆದಷ್ಟು ಬೇಗನೇ ಲೋಕಾರ್ಪಣೆಗೊಳ್ಳಲಿದೆ.
- ಕೆ.ಕೆ. ನಾಗರಾಜ್ ಶೆಟ್ಟಿ