ಸೋಮವಾರಪೇಟೆ, ಮೇ 13: ಇಲ್ಲಿನ ಮಡಿಕೇರಿ ರಸ್ತೆಯ ಕನ್ನಡಾಂಬೆ ವೃತ್ತದ ಬಳಿಯಲ್ಲಿ ರಸ್ತೆಯ ಬದಿಯಲ್ಲಿಯೇ ಮೀನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಂಚಾಯಿತಿ ಮುಖ್ಯಾಧಿಕಾರಿಗಳು ತೆರವುಗೊಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು ಮಾರಾಟ ಮಾಡಲು ಪ.ಪಂ.ನಿಂದ ಟೆಂಡರ್ ಮೂಲಕ ಪರವಾನಗಿ ಪಡೆದುಕೊಂಡವರು ಆಗಾಗ್ಗೆ ದೂರು ನೀಡುತ್ತಿದ್ದ ಹಿನ್ನೆಲೆ, ಇಂದು ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಯಾವದೇ ಪರವಾನಗಿ ಇಲ್ಲದೇ ಮೀನು ಮಾರಾಟ ಮಾಡುತ್ತಿದ್ದವರನ್ನು ತೆರವುಗೊಳಿಸಿದರು.
ರಸ್ತೆ ಬದಿಯಲ್ಲಿಯೇ ಮೀನು ಮಾರಾಟ ಮಾಡುತ್ತಿದ್ದುದರಿಂದ ಮೀನಿಗೆ ಮಣ್ಣು, ಧೂಳು ಮೆತ್ತಿಕೊಳ್ಳುತ್ತಿದೆ. ಇದರೊಂದಿಗೆ ರಸ್ತೆಯ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಗ್ರಾಹಕರು ಮೀನು ಖರೀದಿಸುತ್ತಿರುವದರಿಂದ ಇನ್ನಿತರ ವಾಹನಗಳ ಸಂಚಾರಕ್ಕೂ ತೊಡಕಾಗುತ್ತಿದೆ. ನಾವುಗಳು ಲಕ್ಷಾಂತರ ರೂಪಾಯಿಯನ್ನು ಪಂಚಾಯಿತಿಗೆ ಕಟ್ಟಿ, ಮೀನು ಮಾರಾಟಕ್ಕೆ ಪರವಾನಗಿ ಪಡೆದಿದ್ದು, ಕೆಲವರು ಯಾವದೇ ಪರವಾನಗಿ ಪಡೆಯದೇ ಮೀನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಇತರ ಮೀನು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಪಂಚಾಯಿತಿಗೆ ದೂರು ನೀಡಿದ್ದರು.
ಈ ಹಿನ್ನೆಲೆ ಇಂದು ಮಡಿಕೇರಿ ರಸ್ತೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ಸಿಬ್ಬಂದಿಗಳ ಸಹಕಾರದಿಂದ ಮುಖ್ಯಾಧಿಕಾರಿ ನಟರಾಜ್ ಮತ್ತು ಪಂಚಾಯಿತಿ ಸಿಬ್ಬಂದಿಗಳು ತೆರವುಗೊಳಿಸಿದರು.
ಇದರೊಂದಿಗೆ ಇದೇ ರಸ್ತೆ ಬದಿಯಲ್ಲಿ ಪರವಾನಗಿ ರಹಿತವಾಗಿ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆಯೂ ದೂರುಗಳು ಬಂದಿದ್ದು, ಮುಂದಿನ 2 ದಿನಗಳ ಒಳಗೆ ತಮ್ಮ ಅಂಗಡಿಗಳನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಹಣ್ಣು ಅಂಗಡಿಗಳ ಮಾಲೀಕರಿಗೆ ಮುಖ್ಯಾಧಿಕಾರಿ ಸೂಚಿಸಿದರು.