ಮಡಿಕೇರಿ, ಮೇ 10: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಸಮಗ್ರವಾದ ಪುನರ್ ವಸತಿ ಯೋಜನೆಯನ್ನು ರೂಪಿಸಬೇಕು ಅಲ್ಲದೆ ಇನ್ನಿತರ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಕ್ರಮಕೈಗೊಳ್ಳುವಂತೆ ಕೊಡಗು ಸೇವಾ ಕೇಂದ್ರದ ಪ್ರಮುಖರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಉಸ್ತುವಾರಿ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಸೇವಾ ಕೇಂದ್ರದ ಪ್ರಮುಖರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಬೇಡಿಕೆಗಳು

ಭೂಕುಸಿತವುಂಟಾಗಿದ್ದ ಪ್ರದೇಶ ಗಳು ಭವಿಷ್ಯದಲ್ಲಿ ವಾಸಯೋಗ್ಯವೇ, ಕೃಷಿ ಯೋಗ್ಯವೇ ಎಂಬ ಸ್ಪಷ್ಟ ಮಾಹಿತಿಯ ಕೊರತೆಯ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಆತಂಕದ ವಾತಾವರಣವುಂಟಾಗಿದೆ. ಈ ಕುರಿತು ಜಿಲ್ಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದ ಜಿಯಾಲಾ ಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರ ತಂಡ ಇನ್ನೂ ವರದಿಯನ್ನೇ ನೀಡಿಲ್ಲ ಎನ್ನಲಾಗುತ್ತಿದೆ. ಇತ್ತೀಚೆಗೆ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ನಿವೃತ್ತ ಉಪ ನಿರ್ದೇಶಕರು ನೀಡಿದ ಪತ್ರಿಕಾ ಹೇಳಿಕೆ, ಕೆಲ ಗ್ರಾಮ ಪಂಚಾಯಿತಿಗಳು ಸಂತ್ರಸ್ತರಿಗೆ ಮೇ ತಿಂಗಳ ಅಂತ್ಯದಲ್ಲಿ ಮನೆ ತೆರವುಗೊಳಿಸುವಂತೆ ಮೌಖಿಕವಾಗಿ ಸೂಚಿಸುತ್ತಿರುವದು ಈ ಪ್ರದೇಶದ ನಿವಾಸಿಗಳ ಆತಂಕಕ್ಕೆ ಕಾರಣ ವಾಗಿದೆ. 2018ರಲ್ಲಿ ಭೂಕುಸಿತ ವುಂಟಾಗಿದ್ದ ಪ್ರದೇಶದಲ್ಲಿ ಮನೆ ನಿರ್ಮಿಸುವ ಉದ್ದೇಶವಿ ರುವವರು, ಕೃಷಿ ವಿಸ್ತರಣೆಗೆ ಆಸಕ್ತಿಯಿರುವವರು ಈ ರೀತಿಯ ಸನ್ನಿವೇಶದಲ್ಲಿ ಗೊಂದಲಕ್ಕೀಡಾಗಿದ್ದಾರೆ. ಸರಕಾರ ಭರವಸೆ ನೀಡಿದಂತೆ ಬದಲಿ ಮನೆಗಳನ್ನು ಮಂಜೂರು ಮಾಡದಿರುವ ಪರಿಸ್ಥಿತಿಯಲ್ಲಿ ಇರುವ ಮನೆಯನ್ನು ಬಿಟ್ಟು ಈ ಕುಟುಂಬಗಳು ಹೋಗುವ ದಾದರೂ ಎಲ್ಲಿಗೆ ಎಂಬ ಪ್ರಶ್ನೆ ನೂರಾರು ಕುಟುಂಬಗಳನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರಿಂದ ವರದಿ ಪಡೆದು ತಕ್ಷಣ ಬಹಿರಂಗ ಪಡಿಸುವ ಮೂಲಕ ಈ ಗೊಂದಲಕ್ಕೆ ತೆರೆಎಳೆಯಬೇಕು.

2018ರಲ್ಲಿ ಭೂಕುಸಿತ ಮತ್ತು ಅತಿವೃಷ್ಟಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸರಕಾರದಿಂದ ಲಭಿಸುವ ಪರಿಹಾರ ಮತ್ತು ಅದರ ವಿತರಣೆಯಲ್ಲಿ ಕಾಲಮಿತಿಯ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಲಭಿಸುತ್ತಿಲ್ಲ. ಈ ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಸರಕಾರ ಶಾಶ್ವತ ವಸತಿ ಕಲ್ಪಿಸುವವರೆಗೆ ಮನೆ ಬಾಡಿಗೆ ನೀಡುವ ಯೋಜನೆ, ಬೆಳೆನಾಶಕ್ಕೆ ನೈಸರ್ಗಿಕ ವಿಪತ್ತು ನಿರ್ವಹಣಾ ಯೋಜನೆಯಡಿ ವಿತರಿಸಲಾಗುವ ಪರಿಹಾರ, ಜಮೀನು ಕಳೆದು ಕೊಂಡವರಿಗೆ ಭವಿಷ್ಯದಲ್ಲಿ ಪರಿಹಾರ ಲಭಿಸಲಿದೆಯೇ ಇಲ್ಲವೇ ಎಂಬ ವಿಚಾರದಲ್ಲಿ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಈ ರೀತಿಯ ನಿಖರ ಮಾಹಿತಿ ಲಭ್ಯವಿದ್ದಲ್ಲಿ ಸಂತ್ರಸ್ತ ಕುಟುಂಬಗಳು ತಮ್ಮ ಭವಿಷ್ಯದ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಸಂತ್ರಸ್ತರಾದ ಕುಟುಂಬಗಳಿಗೆ ಲಭ್ಯವಿರುವ ಪರಿಹಾರ, ಅದರ ಕಾಲಮಿತಿ, ಸಂಪರ್ಕಿಸಬೇಕಾದ ಅಧಿಕಾರಿ ಮತ್ತು ಕಚೇರಿಯ ವಿವರ, ಅರ್ಜಿ ನಮೂನೆಯನ್ನು ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಯ ಕಚೇರಿಗಳಲ್ಲಿ ಲಿಖಿತ ರೂಪದಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು.

ಭೂಕುಸಿತ ಮತ್ತು ಅತಿವೃಷ್ಟಿಯಿಂದ ಸಂತ್ರಸ್ತರಾದ ಕೆಲ ಕುಟುಂಬಗಳು ಈಗಿರುವ ಪ್ರದೇಶದಲ್ಲಿಯೇ ಮನೆ ನಿರ್ಮಿಸಲು, ಮನೆಯನ್ನು ದುರಸ್ತಿ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಅದಕ್ಕೆ ಸಕಾಲದಲ್ಲಿ ಸೂಕ್ತ ಅನುಮತಿ ನೀಡದಿರುವ ಪ್ರಕರಣಗಳು ಕಂಡು ಬರುತ್ತಿದೆ. ಕೆಲ ಗ್ರಾಮ ಪಂಚಾಯಿತಿಗಳು ಭೂಪರಿವರ್ತನೆ ಪ್ರಕ್ರಿಯೆಯು ನಂತರ ಅನುಮತಿ ನೀಡುವದಾಗಿ ಸಬೂಬು ಹೇಳುತ್ತಿವೆ. ಆದರೆ ಜಿಲ್ಲಾಡಳಿತ ನೈಸರ್ಗಿಕ ದುರಂತದ ಹಿನ್ನೆಲ್ಲೆ ಭೂಪರಿವರ್ತನೆ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ. ವಾಣಿಜ್ಯ ಉದ್ದೇಶದ ಭೂಪರಿವರ್ತನೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಕ್ರಮ ಸ್ವಾಗತಾರ್ಹವಾದರೂ, ತಮ್ಮ ಸ್ವತ ಜಮೀನಿನಲ್ಲಿ ಮನೆ ನಿರ್ಮಿಸುವ ಮೂಲಭೂತ ಹಕ್ಕನ್ನು ಮೊಟಕು ಗೊಳಿಸುವ ಪ್ರಯತ್ನ ಪ್ರಶ್ನಾರ್ಹವಾದದು.

2018ರಲ್ಲಿ ಭೂಕುಸಿತ ಮತ್ತು ಅತಿವೃಷ್ಟಿವುಂಟಾದ ಪ್ರದೇಶದ ನಿವಾಸಿಗಳು ತಮ್ಮ ಮನೆಯಿರುವ ಪ್ರದೇಶದಲ್ಲಿ ನೂತನ ಮನೆ ನಿರ್ಮಿಸಲು, ಮನೆಯ ದುರಸ್ತಿ ನಡೆಸಲು, ವಾಸಕ್ಕಾಗಿ ಮನೆ ನಿರ್ಮಿಸಲು ಅನುಮತಿ ನೀಡುವ ಸರಳ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಕೊಡಗು ಜಿಲ್ಲೆಯಲ್ಲಿನ ವಿಭಿನ್ನ ಭೂಹಿಡುವಳಿಯ ಕಾರಣದಿಂದ ಹಲವಾರು ರೈತ ಕುಟುಂಬಗಳು ತಲೆಮಾರುಗಳಿಂದ ಕೃಷಿ ಮಾಡುತ್ತಿರುವ ಜಮೀನಿಗೆ ಕಂದಾಯ ನಿಗದಿ ಮಾಡಿಕೊಳ್ಳು ಸಾಧ್ಯವಾಗಿಲ್ಲ. ಈ ರೀತಿಯ ಪ್ರಕರಣಗಳಲ್ಲಿ ಜಮೀನು ಕುಟುಂಬಗ ಮುಖ್ಯಸ್ಥನ ಹೆಸರಿನಲ್ಲಿಯೇ ಇರುತ್ತದೆ. ಭೂಕುಸಿತ ಮತ್ತು ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವಾಗ ಈ ರೀತಿಯ ಪ್ರಕರಣಗಳನ್ನು ಕೈಬಿಡಲಾಗುತ್ತಿದೆ. ಜಮೀನು ಕಳೆದುಕೊಂಡವರು ಈ ಕಾರಣಕ್ಕೆ ಸರಕಾರದ ಪರಿಹಾರವೂ ಲಭಿಸದೇ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಪರಿಹಾರ ವಿತರಿಸುವಾಗ ಈ ರೀತಿಯ ಪ್ರಕರಣಗಳನ್ನು ಪರಿಗಣಿಸಲು ಸೂಕ್ತ ಮಾರ್ಗ ಸೂಚಿ ರೂಪಿಸಬೇಕು.

2018ರ ಪ್ರಾಕೃತಿಕ ದುರಂತದ ಹಿನ್ನೆಲೆಯಲ್ಲಿ ರೈತರ ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಲು ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಕೆಲ ವಾಣಿಜ್ಯ ಬ್ಯಾಂಕ್‍ಗಳು ಲೀಡ್ ಬ್ಯಾಂಕ್‍ಗಳ ಸೂಚನೆಯನ್ನು ಉಲ್ಲಂಘಿಸಿ ಈ ರೀತಿಯ ಪ್ರಕರಣಗಳಲ್ಲಿ ದೀರ್ಘಾವಧಿ ಸಾಲದ ಬಡ್ಡಿ ದರವನ್ನು ವಿಧಿಸಲು ಮುಂದಾಗುತ್ತಿವೆ. ಈ ಕುರಿತು ಮಧ್ಯಪ್ರವೇಶಿಸಿ ಎಲ್ಲಾ ಬ್ಯಾಂಕ್‍ಗಳು ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಿದಾಗ ಬಡ್ಡಿ ದರಗಳಲ್ಲಿ ಹೆಚ್ಚಳ ಮಾಡದಂತೆ ಸೂಚಿಸಬೇಕು. 2018ರಲ್ಲಿ ಭೂಕುಸಿತ ಮತ್ತು ಅತಿವೃಷ್ಟಿಯಿಂದ ರಸ್ತೆ ಸಂಪರ್ಕ ಹಾನಿಯಾಗಿರುವ ಕೆಲವು ಗ್ರಾಮಗಳಿಗೆ ಇನ್ನೂ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಸೂಕ್ತ ರಸ್ತೆಯಿಲ್ಲದೆ ಇರುವದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಲ್ಲಿಗೆ ಬಸ್ ಸಂಪರ್ಕವನ್ನ ಸ್ಥಗಿತಗೊಳಿಸಿದೆ. ಇದರಿಂದ ಶೈಕ್ಷಣಿಕ ವ್ಯವಸ್ಥೆಗಾಗಿ, ಉದ್ಯೋಗಕ್ಕಾಗಿ ಪ್ರತಿದಿನ ಪ್ರಯಾಣಿಸುವವರಿಗೆ ಸಮಸ್ಯೆಯಾಗಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಂತ್ರಸ್ತ ಗ್ರಾಮಗಳಿಗೆ ತಕ್ಷಣದಿಂದಲೇ ಮಿನಿ ಬಸ್ ಸಂಚರಿಸಲು ಸೂಚಿಸಬೇಕು.

ನೈಸರ್ಗಿಕ ವಿಪತ್ತು ನಿರ್ವಹಣಾ ಯೋಜನೆಯ ಮಾರ್ಗಸೂಚಿಯಡಿ ಲಭಿಸುವ ಪರಿಹಾರ ಅತ್ಯಂತ ಕನಿಷ್ಟ ಪ್ರಮಾಣದಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಭೂಕುಸಿತ ಮತ್ತು ಅತಿವೃಷ್ಟಿಯಿಂದಾದ ನಷ್ಟವನ್ನು ಅಂದಾಜು ಮಾಡಲು ಬದಲಿ ಮಾರ್ಗಸೂಚಿ ರೂಪಿಸಲು ಮತ್ತು ಚಾಲ್ತಿಯಲ್ಲಿನ ಸಾಲ ಮನ್ನಾ ಯೋಜನೆಯಡಿ ಈ ಪ್ರದೇಶದ ರೈತರ ಸಾಲಮನ್ನಾಕ್ಕೆ ಆದ್ಯತೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.