ಕರಿಕೆ, ಮೇ 10: ಮಡಿಕೇರಿ ತಾಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲೊಂದಾದ ಬೇಂಗೂರು ಗ್ರಾ.ಪಂ.ಗೆ ಒಳಪಡುವ ಐವತ್ತೊಕ್ಲು, ಬೇಂಗೂರು ಈ ಎರಡು ಗ್ರಾಮಗಳ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟು ಪ್ರಯಾಣಿ ಸುವದು ದುಸ್ತರವಾಗಿದೆ. ಇದು ಎಮ್ಮೆಮಾಡು ಗ್ರಾಮಕ್ಕೂ ಕೂಡ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಕಾರ್ಯ ನಿರ್ವಹಣಾ ಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಭಾಗದಲ್ಲಿ ನಾನೂರಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು ಶಾಲಾ ವಾಹನ ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತವೆ. ಆದರೆ ಕಳೆದ ಏಳು ವರ್ಷಗಳಿಂದ ಈ ರಸ್ತೆಗೆ ಯಾವದೇ ಡಾಮರೀಕರಣ ನಡೆದಿರುವದಿಲ್ಲ. ಅಲ್ಲದೆ, ಇದೇ ಸಂಪರ್ಕ ರಸ್ತೆಯಲ್ಲಿ ಕೊಟ್ಟೂರು ಸಮೀಪ ಒಂದು ಪುರಾತನ ದುಸ್ಥಿತಿ ಯಲ್ಲಿರುವ ಸೇತುವೆಯೊಂದಿದ್ದು ಇದು ಅಪಾಯವನ್ನು ಆಹ್ವಾನಿಸುತ್ತಿದೆ. ಇದಕ್ಕೆ ಕಳೆದ ಒಂದುವರೆ ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಯಿಂದ ಇಪ್ಪತ್ತಾರು ಲಕ್ಷ ಮಂಜೂ ರಾಗಿದ್ದು ಇನ್ನೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಇದೀಗ ಮಳೆಗಾಲ ಹಾಗೂ ಶಾಲಾ-ಕಾಲೇಜುಗಳು ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಇದ್ದು ಇದುವರೆಗೆ ರಸ್ತೆ ದುರಸ್ತಿಗೆ ಹಾಗೂ ನೂತನ ಸೇತುವೆ ಕಾಮಗಾರಿಗೆ ಕ್ರಮಕೈಗೊಳ್ಳದಿರುವದು ಗ್ರಾಮಸ್ಥರನ್ನು ಕೆರಳಿಸಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಭಾಗದ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.