ಮಡಿಕೇರಿ, ಮೇ 10: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಡಿಕೇರಿ ನಗರದ ಹೊರವಲಯದಲ್ಲಿರುವ ರೆಸಾರ್ಟ್‍ನಲ್ಲಿ ವಿಶ್ರಾಂತಿಗೆಂದು ಆಗಮಿಸಿದ್ದಾರೆ. ಸಿ.ಎಂ. ಜತೆಯಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಬೋಜೆಗೌಡ ಕೂಡ ಆಗಮಿಸಿದ್ದಾರೆ. ಇಂದು ಸಂಜೆ ವೇಳೆಗೆ ಅವರುಗಳು ಖಾಸಗಿ ಭದ್ರತೆಯೊಂದಿಗೆ ರೆಸಾರ್ಟ್‍ಗೆ ಪ್ರವೇಶಿಸಿದ್ದು, ಭೇಟಿಯಾಗಲು ಯಾರಿಗೂ ಅವಕಾಶವಿಲ್ಲ. ಸಿ.ಎಂ. ಹೆಸರಿನಲ್ಲಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿನಲ್ಲಾಗಲಿ ಕೊಠಡಿ ನಿಗದಿಯಾಗಿಲ್ಲ. ಆದರೂ ಇವರುಗಳಿಗಾಗಿ ಒಟ್ಟು ಐದು ಕೊಠಡಿಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನೆರಡು ದಿನಗಳ ಕಾಲ ಅವರು ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರಿಗೆ ಕಿರಿಕಿರಿ

ಮುಖ್ಯಮಂತ್ರಿಗಳು ಖಾಸಗಿ ಕಾರ್ಯಕ್ರಮವಾಗಿ ವಿಶ್ರಾಂತಿಗೆಂದು ಆಗಮಿಸಿದ್ದರೆ, ಇತ್ತ ಭದ್ರತೆಯ ನೆಪದಲ್ಲಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು.

(ಮೊದಲ ಪುಟದಿಂದ) ಮುಖ್ಯಮಂತ್ರಿಗಳ ಆಗಮನದ ಬಗ್ಗೆ ಯಾವದೇ ಅಧಿಕೃತ ಮಾಹಿತಿ ಇರಲಿಲ್ಲ. ಈ ಬಗ್ಗೆ ಸಂಜೆ ವೇಳೆ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ವಿಚಾರಿಸಿದಾಗಲೂ ತಮಗೆ ಈ ಬಗ್ಗೆ ಯಾವದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಆದರೆ 7 ಗಂಟೆ ವೇಳೆಗೆ ದಿಢೀರಾಗಿ ಪೊಲೀಸರು ಮೈಸೂರು ಹೆದ್ದಾರಿಯ ಸಂಪಿಗೆಕಟ್ಟೆ ಜಂಕ್ಷನ್ ಬಳಿ ಬ್ಯಾರಿಕೇಡ್ ಇರಿಸಿದ ಪೊಲೀಸರು ಎಲ್ಲಾ ವಾಹನಗಳನ್ನು ತಡೆಹಿಡಿದರು.

ಅತ್ತ ಬೋಯಿಕೇರಿ ಬಳಿಯಿಂದಲೇ ತಡೆ. ನಾಳೆ - ನಾಡಿದ್ದು ರಜೆ ಇದ್ದ ಕಾರಣ ವಾಹನ ಓಡಾಟ ಅಧಿಕವಿದ್ದು, ಮೈಲಿಗಟ್ಟಲೆ ಸಾಲಾಗಿ ನಿಲ್ಲುವಂತಾಯಿತು. ದಿಢೀರ್ ರಸ್ತೆ ತಡೆಯಿಂದಾಗಿ ಗಾಬರಿಗೊಂಡ ಪ್ರಯಾಣಿಕರೆಲ್ಲರೂ ಏನಾಯಿತೆಂದು ಗಾಬರಿಯಿಂದ ವಾಹನದಿಂದಿಳಿದು ಕಿ.ಮೀ. ಗಟ್ಟಲೆ ನಡೆದು ವಿಚಾರಿಸಿದಾಗ ನಾಡಿದ್ದು ಸಿ.ಎಂ. ವಿಶ್ರಾಂತಿಗೆ ಬರುತ್ತಿರುವ ವಿಚಾರ. ಅವರಿಗೆ ವಿಶ್ರಾಂತಿಗೆ ನಮಗ್ಯಾಕೆ ನ್ಯೂಸೆನ್ಸ್ ಕ್ರಿಯೆಟ್ ಮಾಡ್ತೀರಿ.., ಜನನಾಯಕರೇ ಈ ರೀತಿ ತೊಂದ್ರೆ ಕೊಡೋದಾ...? ಇದೊಂದ್ ರೂಲ್ಸೋ ಈ ಕೊಡಗ್ನ್‍ನಲ್ಲಿ..., ಬೇರೆ ಎಲ್ಲೂ ಪ್ರೈವೆಟ್ ವಿಸಿಟ್‍ಗಳಿಗೆ ಈ ಥರ ಪಬ್ಲಿಕ್‍ಗೆ ಪ್ರಾಬ್ಲಂ ಕೊಡಲ್ಲಪ್ಪಾ...! ಅಂತ ಹೊರಗಿನಿಂದ ಬಂದ ಪ್ರವಾಸಿಗರು ಪೊಲೀಸರನ್ನು ಪ್ರಶ್ನಿಸುತ್ತಿದ್ದದು ಕಂಡುಬಂದಿತು. ಇತ್ತ ಕೊಪ್ಪ ಗಡಿಯಲ್ಲಿ ಸಿ.ಎಂ. ಅವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಪದಾಧಿಕಾರಿಗಳು ಸ್ವಾಗತಿಸಿದರು.