ಶ್ರೀಮಂಗಲ, ಮೇ 9 : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳ ಬೌಗೋಳಿಕ ಪ್ರದೇಶವನ್ನು ಪುರಾತನ ಕಾಲದಿಂದಲೂ ಮರೆನಾಡ್ ಎಂದು ಕರೆಯುತ್ತಿದ್ದು, ಈ ವ್ಯಾಪ್ತಿಯಲ್ಲಿನ ಕೊಡವ ಕುಟುಂಬಗಳ ನಡುವೆ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಇದೇ ಮೊದಲ ಬಾರಿಗೆ ತಾ. 14 ರಿಂದ ಆಯೋಜಿಸಲಾಗಿದೆ ಎಂದು ಮರೆನಾಡು ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಕೀಕಣಮಾಡ ಮನು ಕಾರ್ಯಪ್ಪ ತಿಳಿಸಿದ್ದಾರೆ.
ಬಿರುನಾಣಿ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೊಡವ ಕುಟುಂಬಗಳ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಸಭೆ ಕರೆದು ಎಲ್ಲಾ ಕುಟುಂಬದವರನ್ನು ಸೇರಿಸಿ ಕ್ರೀಡಾಕೂಟ ಸಮಿತಿ ರಚಿಸಲಾಗಿದೆ. ಈ ವ್ಯಾಪ್ತಿಯಲ್ಲಿ 20 ಕುಟುಂಬಗಳು ಇದ್ದು, ಇದರಲ್ಲಿ 18 ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮನು ಕಾರ್ಯಪ್ಪ ಹೇಳಿದರು.
ಈ ವರ್ಷ ಮಾತ್ರ ಎಲ್ಲಾ ಕುಟುಂಬಗಳನ್ನೊಳಗೊಂಡ ಕ್ರೀಡಾಕೂಟ ಸಮಿತಿ ಕ್ರೀಡಾಕೂಟ ವನ್ನು ಆಯೋಜಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ ಪ್ರತಿವರ್ಷ ಒಂದೊಂದು ಕುಟುಂಬದವರು ಕ್ರೀಡಾಕೂಟವನ್ನು ಆಯೋಜಿಸಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಪ್ರತಿ ವರ್ಷ ಒಂದೊಂದು ಕುಟುಂಬ ಕ್ರೀಡಾಕೂಟ ನಡೆಸಲು, ಈಗಾಗಲೇ 8 ಕುಟುಂಬಗಳು ಮುಂದೆ ಬಂದಿವೆ ಎಂದು ಮನು ಕಾರ್ಯಪ್ಪ ತಿಳಿಸಿದರು.
ಕ್ರೀಡಾಕೂಟ ಸಮಿತಿ ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ ಮಾತನಾಡಿ ಈ ವ್ಯಾಪ್ತಿಯ ಎಲ್ಲಾ ಕೊಡವ ಕುಟುಂಬಗಳನ್ನು ಒಂದೇ ವೇದಿಕೆಗೆ ತರುವದು ಮತ್ತು ಕ್ರೀಡೆಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ತಾ. 14, 15, 16ರಂದು ಬಿರುನಾಣಿಯ ಮರೆನಾಡು ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾಕೂಟ ನಡೆಯಲ್ಲಿದ್ದು, ವಿನ್ನರ್ಸ್ ಮತ್ತು ರನ್ನರ್ಸ್ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವಿದೆ. ಕ್ರೀಡಾಕೂಟವನ್ನು ತಾ. 14ರಂದು ಹಿರಿಯ ಕ್ರೀಡಾಪಟು ಕೀಕೀರ ನಂದಾ ಸುಬ್ಬಯ್ಯ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.