ಗೋಣಿಕೊಪ್ಪಲು, ಮೇ 10: ರೈತರ, ಬೆಳೆಗಾರರ, ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳೊಂದಿಗೆ ನಾಗರಹೊಳೆಯ ಅತಿಥಿ ಗೃಹ ಮುಂಭಾಗದ ಮರದ ನೆರಳಿನಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಸಂವಾದ ಕಾರ್ಯಕ್ರಮಕ್ಕೆ ಮುನ್ನ ಅರಣ್ಯ ಇಲಾಖೆಯ ವತಿಯಿಂದ ವಿತರಿಸಲಾಗುವ ಪರಿಹಾರದ ಹಳೆಯ ಸುತ್ತೋಲೆಯನ್ನು ಅರಣ್ಯ ಅಧಿಕಾರಿಗಳ ಹಾಗೂ ನೂರಾರು ರೈತರ ಸಮ್ಮುಖದಲ್ಲಿ ಹರಿದು ಹಾಕಿ ಕಾಲಿನಿಂದ ತುಳಿಯುವ ಮೂಲಕ ಹಿರಿಯ ವಕೀಲ ಹೇಮಚಂದ್ರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅತಿಥಿಗೃಹದ ಆವರಣದಲ್ಲಿ ಶಾಮಿಯಾನ ಕುರ್ಚಿ ಹಾಕಿ ಸಂವಾದಕ್ಕೆ ಅವಕಾಶ ಕಲ್ಪಿಸಿದ್ದರೂ ರೈತರು ಅದನ್ನು ಬದಿಗೊತ್ತಿ ಪರಿಸರದ ಮಧ್ಯೆ ಮರದ ನೆರಳಿನಲ್ಲಿಯೇ ಸಂವಾದ ಕಾರ್ಯಕ್ರಮವನ್ನು ನಡೆಸುವಂತೆ ಆಗ್ರಹಿಸಿದರು. ಅಧಿಕಾರಿಗಳು ಕೂಡಲೇ ಸ್ಥಳ ಬದಲಾಯಿಸಿ ಮರದ ನೆರಳಿನಲ್ಲಿಯೇ ಕಾರ್ಯಕ್ರಮ ಆರಂಭಿಸಿದರು.

ಆನೆ,ಹುಲಿ,ಸರ್ಕಾರದ ಪರಿಹಾರ ವಿಚಾರದಲ್ಲಿ ರೈತರು, ಬೆಳೆಗಾರರು ಹಿರಿಯ ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಂತೆಯೇ ಅಂಕಿ ಅಂಶಗಳ ಸೂಕ್ತ ಮಾಹಿತಿ ಇಲ್ಲದೆ ಕೆಲ ಕಾಲ ಅಧಿಕಾರಿಗಳು ತಬ್ಬಿಬ್ಬಾದ ಪ್ರಸಂಗ ನಡೆಯಿತು. ಮಧ್ಯೆ ಪ್ರವೇಶಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ವಿಭಾಗವಾರು ರೈತ ಮುಖಂಡರು ಆಯಾಯಾ ವಿಭಾಗಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳುವಾಗ ಹಿರಿಯ ಅಧಿಕಾರಿಗಳು ತಮ್ಮ ಕಿರಿಯ ಅಧಿಕಾರಿಗಳ ಸಹಾಯ ಪಡೆದು ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಆನೆ ಮಾನವ ಸಂಘರ್ಷದಿಂದ ಮನುಷ್ಯನ ಜೀವ ಹಾನಿ, ಹುಲಿಹಾವಳಿಯಿಂದ ಸಾಕು ಪ್ರಾಣಿಗಳ ಪ್ರಾಣ ಹಾನಿ ಹಾಗೂ ರೈತರು ಬೆಳೆದ ಬೆಳೆಗಳು ವನ್ಯ ಜೀವಿಗಳಿಂದ ನಷ್ಟ ಅನುಭವಿಸಿದಾಗ ಇಲಾಖೆಯು ನೀಡುವ ಪರಿಹಾರ ಮೊತ್ತ ಏನೇನೂ ಸಾಲದು ಈ ಬಗ್ಗೆ ರೈತ ಸಂಘವು ಆನೇಕ ಬಾರಿ ಹೋರಾಟ ನಡೆಸಿದರೂ ಪರಿಹಾರ ಮೊತ್ತದಲ್ಲಿ ಏರಿಕೆ ಕಂಡಿಲ್ಲ. ಇದರಿಂದ ಇಲಾಖೆಯು ನಿದ್ರಾವಸ್ಥೆಯಲ್ಲಿದೆ ಎಂದು ರೈತ ಮುಖಂಡರಾದ ಪುಚ್ಚಿಮಾಡ ಶುಭಾಷ್, ಮಂಡೇಪಂಡ ಪ್ರವೀಣ್, ಚಂಗುಲಂಡ ಸೂರಜ್, ಹಾಗೂ ಕೊಲ್ಲಿರ ಧರ್ಮಜ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಈ ಸಂದರ್ಭ ಅಧಿಕಾರಿ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಮತ್ತೆ ರೈತ ಸಂಘದ ಅಧ್ಯಕ್ಷ ಇದನ್ನು ತಿಳಿಗೊಳಿಸಿ ಸಭೆ ಮುಂದುವರೆಯಲು ಅವಕಾಶ ಕಲ್ಪಿಸಿದರು.

ಆನೆ ಹಾವಳಿಯಿಂದ ಪ್ರಾಣ ಹಾನಿ ಸಂಭವಿಸಿದಾಗ ಮೃತ ಕುಟುಂಬಕ್ಕೆ 25 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಇಲಾಖೆಯಲ್ಲಿ ನೌಕರಿ ನೀಡುವಂತೆ ರೈತ ಸಂಘ ಈ ಹಿಂದೆ ಲಿಖಿತ ಮನವಿ ಸಲ್ಲಿಸಿತ್ತು. ಈ ಬಗ್ಗೆ ಕೈಗೊಂಡ ಕ್ರಮ ಮಾಹಿತಿ ನೀಡುವಂತೆ ಅಧ್ಯಕ್ಷ ಮನುಸೋಮಯ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಬಳಿ ಮಾಹಿತಿ ಬಯಸಿದರು.

ಮಾಹಿತಿಗೆ ಉತ್ತರಿಸಿದ ಸಂತೋಷ್ ಕುಮಾರ್, ರೈತ ಸಂಘ ನೀಡಿರುವ ಮನವಿಯನ್ನು ಶಿಫಾರಸ್ಸು ಮಾಡಿ ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಇತ್ತೀಚೆಗೆ ಶ್ರೀಮಂಗಲ ಸಮೀಪ ಆನೆ ದುರಂತಕ್ಕೀಡಾದ ಕುಟುಂಬಕ್ಕೆ 25 ಲಕ್ಷ ಪರಿಹಾರದ ಕುರಿತು ಹಿರಿಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿರುವ ಲಿಖಿತ ಮನವಿಯನ್ನು ಸಭೆಯ ಮುಂದಿಟ್ಟರು. ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘಿಸಿದ ರೈತ ಮುಖಂಡರು ಕೇವಲ ಅರ್ಜಿ ಬರೆದು ಕೂತರೆ ಸಾಲದು, ಇದನ್ನು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಆದಷ್ಟು ಬೇಗನೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಕಾಡು ಪ್ರಾಣಿಗಳಿಂದಾಗುವ ಬೆಳೆ ನಾಶದ ಪರಿಹಾರ ಮೊತ್ತವನ್ನು 10 ಪಟ್ಟು ಹೆಚ್ಚಿಸುವ ಪ್ರಯತ್ನದಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಗಬೇಕು ಎಂದರು.

ರೈತ ಸಂಘದ ನಿರಂತರ ಹೋರಾಟದ ಫಲವಾಗಿ ತಿತಿಮತಿ ವಲಯದ ಚಕ್ಕೇರ ಜಯಪುರ ಎಸ್ಸೇಟ್‍ನಿಂದ ಕುಂಞರಾಮನ ಕಟ್ಟೆವರೆಗೆ 3 ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಮೂರು ಕಿ.ಮೀ.ನೊಂದಿಗೆ 1.5 ಕಿ.ಮೀ. ಹೆಚ್ಚುವರಿ ರೈಲ್ವೆ ಬ್ಯಾರೀಕೇಡ್ ಅಳವಡಿಸಲಾಗುವದು ಹಾಗೂ ನಿಧಾನಗತಿಯಲ್ಲಿ ಸಾಗುತ್ತಿರುವ ಕೆಲಸಕ್ಕೆ ವೇಗ ಹೆಚ್ಚಿಸಲಾಗುವದೆಂದು ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ನಾರಾಯಣ ಸ್ವಾಮಿ ಮಾಹಿತಿ ಒದಗಿಸಿದರು. ಆನೆ, ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಗ್ರಾಮಗಳಿಗೆ ಬಂದು ಹಾನಿ ಮಾಡುತ್ತಿರುವ ಆನೆಗಳನ್ನು ಗುರುತಿಸಿ ರೇಡೀಯೋ ಕಾಲರ್ ಅಳವಡಿಸಬೇಕು ಹಾಗೂ ಆನೆಗಳ ಸಂತಾನ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಎಂಬ ಆಗ್ರಹ ಕೇಳಿ ಬಂತು.

ಇಲ್ಲಿನ ತೋಟ ಮಾಲೀಕರು ಹೊರ ಭಾಗದಲ್ಲಿ ನೆಲೆಸಿದ್ದಾರೆ. ಇವರ ತೋಟದಲ್ಲಿ ಮತ್ಯಾರೋ ಬೇಲಿಗೆ ಬಲೆ ಅಳವಡಿಸಿರುತ್ತಾರೆ. ಈ ಸಂದರ್ಭ ವನ್ಯ ಜೀವಿಗಳು ಬಲೆಗೆ ಸಿಲುಕಿ ಪ್ರಾಣ ಕಳೆದುಕೊಂಡಲ್ಲಿ ತೋಟ ಮಾಲೀಕರನ್ನು ಉದ್ದೇಶಪೂರ್ವಕವಾಗಿ ದೂರು ದಾಖಲಿಸಿ ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ಆನಾವಶ್ಯಕ ತೊಂದರೆ ಕೊಡುತ್ತಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಇದರಿಂದ ಮಾನಸಿಕವಾಗಿ ರೈತರನ್ನು ಇಲಾಖೆಯು ಹಿಂಸಿಸುವಂತಾಗಿದೆ ಕೂಡಲೇ ಇಂತಹ ಸುತ್ತೋಲೆಗಳನ್ನು ಮಾರ್ಪಾಡು ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಬಿ.ಶೆಟ್ಟಿಗೇರಿ ಸಮೀಪವಿರುವ ಕುಟ್ಟಂದಿ ಕಾಟೀಗುಂಡಿ ಬೆಟ್ಟಕುರುಬ ಜನಾಂಗ ವಾಸಿಸುತ್ತಿರುವ ಪ್ರದೇಶವನ್ನು ಅರಣ್ಯ ಇಲಾಖೆ ಸರ್ವೆ ನಡೆಸಿರುವ ಬಗ್ಗೆ ಗ್ರಾಮದ ಮುಖಂಡ ಕಡೇಮಾಡ ಅಶೋಕ್ ಚಿಟ್ಟಿಯಪ್ಪ ಹಾಗೂ ತೀತೀರ ಲಾಲಾರವರು ಅಧಿಕಾರಿಗಳ ಗಮನ ಸೆಳೆದರು. ಈ ಸಂದರ್ಭ ಅಧಿಕಾರಿಗಳು ಇನ್ನು ಮುಂದೆ ಇಂತಹ ಪ್ರಮಾದ ಆಗುವದಿಲ್ಲ. ಎಚ್ಚರ ವಹಿಸುತ್ತೇವೆ. ಆದಿವಾಸಿಗಳು ಭಯ ಪಡುವ ಅವಶ್ಯಕತೆ ಇಲ್ಲ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರಥ್ಯು, ಮುಕ್ಕಾಟೀರ ಶಿವು ಮಾದಪ್ಪ, ತಾ.ಪಂ.ಸದಸ್ಯ ಪಲ್ವಿನ್ ಪೂಣಚ್ಚ, ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಸೇರಿದಂತೆ ಆನೇಕ ಮುಖಂಡರು ಅರಣ್ಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

-(ಚಿತ್ರ, ವರದಿ, ಹೆಚ್.ಕೆ.ಜಗದೀಶ್)