ಗೋಣಿಕೊಪ್ಪಲು,ಮೇ 10: ಅಂದು ದಂಪತಿಗಳ ಅದೃಷ್ಟ ಗಟ್ಟಿಯಾಗಿತ್ತು. ಕೊಂಚ ಯಾಮಾರಿದ್ದರೂ ಮುಂದಾಗಬಹುದಾಗಿದ್ದ ಘಟನೆಯನ್ನು ಯಾರೂ ಊಹಿಸಲೂ ಸಾಧ್ಯವಿರುತ್ತಿರಲಿಲ್ಲ. ಧೃತಿಗೆಡದ ದಂಪತಿಗಳು ಒಂಟಿ ಸಲಗ ತಾನು ಚಲಾಯಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸುತ್ತಿದ್ದರೂ ಕೂಡ ಎದೆಗುಂದದೆ ಕಾರಿನಲ್ಲೇ ಕುಳಿತು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡ ಅಪರೂಪದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಂತೆಯೇ ಯಾರಿಗಾದರೂ ಭಯ ಹುಟ್ಟದಿರಲು ಸಾಧ್ಯವೇ ಇಲ್ಲ. ಅಂತಹದ್ದೊಂದು ಘಟನೆ ಕೊಡಗಿನ ಗಡಿ ಭಾಗ ಕುಟ್ಟ ಸಮೀಪದ ನಾಣಚ್ಚಿಯಲ್ಲಿ ನಡೆದಿದೆ.
ನಾಗರಹೊಳೆ ಅಭಯಾರಣ್ಯ ಗಡಿ ಪ್ರದೇಶದ ನಾಣಚ್ಚಿ ಬೇಗೂರ್ ನಿವಾಸಿ ಕೊಂಗಂಡ ಕೆ. ದೇವಯ್ಯ ಹಾಗೂ ವೀಣಾ ದಂಪತಿ ಮುಂಜಾನೆ 6.30ರ ವೇಳೆಗೆ ತಮ್ಮ ಮಾರುತಿ 800 ಕಾರಿನಲ್ಲಿ ಕುಟ್ಟಾಗೆ ಕಾರ್ಯನಿಮಿತ್ತ ತೆರಳುತ್ತಿದ್ದಾಗ ಮನೆಯಿಂದ ಸುಮಾರು 500 ಮೀ. ಸಾಗುತ್ತಿದಂತೆ ರಸ್ತೆ ಬದಿ ತೋಟದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದನ್ನು ಕಂಡು ತಕ್ಷಣ ಕಾರಿಗೆ ಬ್ರೇಕ್ ಹಾಕಿದ್ದಾರೆ. ಇನ್ನೇನು ಕಾಡಾನೆ ದಾಟಬಹುದು ಎಂಬ ನಿರೀಕ್ಷೆಯಲ್ಲಿದ್ದ ಇವರು ಕಾರಿನ ಬಳಿಯೇ ಆನೆ ಬರಬಹುದೆಂದು ಊಹಿಸಿರಲಿಲ್ಲ. ಭಯಗೊಂಡ ದೇವಯ್ಯ ಕ್ಷಣಾರ್ಧದಲ್ಲಿ ನಮ್ಮ ಮೇಲೆ ದಾಳಿ ಮಾಡ ಬಹುದೆಂದು ಕಾರನ್ನು ಹಿಂದಕ್ಕೆ ತೆಗೆಯುವ ಪ್ರಯತ್ನ ನಡೆಸಿದರು. ಕಾರನ್ನು ಹಿಂದಕ್ಕೆ ತೆಗೆಯುತ್ತಿದಂತೆಯೇ ಆನೆ ಕಾರಿನತ್ತ ಓಡಿ ಬಂದಿದೆ. ಧೈರ್ಯ ಗುಂದದ ದಂಪತಿಗಳು ಗುಂಡಿಗೆ ಗಟ್ಟಿ ಮಾಡಿಕೊಂಡು ಕಾರಿನ ಗ್ಲಾಸನ್ನು ಏರಿಸಿ ಒಳಗೆಯೇ ಕುಳಿತುಕೊಂಡಿದ್ದಾರೆ.
ಕಾರಿನ ಮುಂಭಾಗಕ್ಕೆ ಬಂದು ನಿಂತ ಆನೆ ಸ್ವಲ್ಪ ದೂರದ ವರೆಗೂ ಹಿಂದಕ್ಕೆ ತಳ್ಳಿಕೊಂಡು ಪಕ್ಕದಲ್ಲಿರುವ ಕೆರೆಯ ಮೂಲೆವರೆಗೂ ತಂದು ನಿಲ್ಲಿಸಿದೆ. ಬಳಿಕ ಡ್ರೈವಿಂಗ್ ಸೀಟ್ ಪಕ್ಕಕ್ಕೆ ಬಂದು ಸೊಂಡಿಲಿನಿಂದ ಬಡಿದು ದಂತದಿಂದ ತಿವಿದಿದೆ. ಇಷ್ಟಕ್ಕೇ ತನ್ನ ಆಕ್ರೋಶವನ್ನು ನಿಲ್ಲಿಸದ ಸಲಗವು ಹಲವು ಬಾರಿ ಕಾರನ್ನು ಅಲ್ಲಾಡಿಸಿದೆ. ಅಷ್ಟೊತ್ತಿಗಾಗಲೇ ಆನೆ ನಮ್ಮ ಮೇಲೆ ದಾಳಿ ಮಾಡುವದು ಖಚಿತ ಎಂಬವದನ್ನು ಅರಿತ ದೇವಯ್ಯ ದಂಪತಿ ಇನ್ನೂ ಇಲ್ಲೇ ಇದ್ದರೆ ನಮ್ಮ ಕಥೆ ಮುಗಿಯುವದು ಖಚಿತ ಎಂದುಕೊಂಡು ದೇವರನ್ನು ಮನಸ್ಸಿನಲ್ಲಿ ಸ್ಮರಿಸಿ ಕಾರಿನಿಂದ ಇಳಿದು ತಪ್ಪಿಸಿಕೊಳ್ಳುವ ನಿರ್ಧಾರ ಮಾಡುತ್ತಿದ್ದಂತೆ ನಂಬಿದ್ದ ದೇವರು ಒಂಟಿ ಸಲಗವನ್ನು ಅಲ್ಲಿಂದ ದೂರ ಸರಿಯುವಂತೆ ಮಾಡಿದ್ದಾನೆ. ಹೋದ ಜೀವ ವಾಪಸು ಬಂದ ಸಂತೋಷದಲ್ಲಿ ಕಾರನ್ನು ಚಾಲನೆ ಮಾಡುತ್ತಾ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ. ನಡೆದ ಘಟನೆಯ ವಿವರಗಳನ್ನು ನಾಗರ ಹೊಳೆಯ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರ ಹಾಗೂ ಅರಣ್ಯಾಧಿಕಾರಿಗಳ ಸಭೆಯಲ್ಲಿ ಬಿಚ್ಚಿಡುತ್ತಾ ರಸ್ತೆ ಬದಿಯಲ್ಲಿ ತೆಗೆದಿರುವ ಆನೆ ಕಂದಕ ಸರಿ ಪಡಿಸುವಂತೆ ಹಾಗೂ ರಸ್ತೆ ಅಗಲೀಕರಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.
-ಹೆಚ್.ಕೆ.ಜಗದೀಶ್