ಸೋಮವಾರಪೇಟೆ, ಮೇ 10: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆರ್‍ಟಿಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ ಪೋಷಕರು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಶಾಲೆಯಲ್ಲಿನ ಆರ್.ಟಿ.ಇ. ವಿದ್ಯಾರ್ಥಿಗಳ ಪೋಷಕರ ಕುಂದುಕೊರತೆ ಸಭೆಯಲ್ಲಿ ಈ ಬಗ್ಗೆ ಪೋಷಕರು ಆರೋಪಿಸಿದರು. ಸರ್ಕಾರದ ಪ್ರತಿನಿಧಿಗಳಾಗಿ ಆಗಮಿಸಿದ್ದ ಮೈಸೂರಿನ ಡಯಟ್ ಪ್ರಾಂಶುಪಾಲ ಮಹಾದೇವಪ್ಪ ಹಾಗೂ ಹಿರಿಯ ಉಪನ್ಯಾಸಕ ಅಮಿತ್, ಆರ್.ಟಿ.ಇ. ನೋಡೆಲ್ ಅಧಿಕಾರಿ ಶೇಖರ್, ಶಿಕ್ಷಣಾಧಿಕಾರಿ ಶ್ರೀನಾಥ್ ಅವರುಗಳು ಪೋಷಕರಿಂದ ದೂರುಗಳನ್ನು ಸ್ವೀಕರಿಸಿದರು.

ಆರ್‍ಟಿಇ ಅಡಿಯಲ್ಲಿ ದಾಖ ಲಾಗಿರುವ ಹಲವಷ್ಟು ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಕೆಲ ಖಾಸಗಿ ಶಾಲೆಗಳಲ್ಲಿ ಪುಸ್ತಕಗಳ ನೆಪದಲ್ಲಿ ನಮ್ಮ ಮಕ್ಕಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲ ಕಡೆ ಆರ್.ಟಿ.ಇ. ವಿದ್ಯಾರ್ಥಿಗಳಿಗೆ ಬಸ್ ಕಳುಹಿಸು ವದಿಲ್ಲ ಎಂಬಿತ್ಯಾದಿ ದೂರುಗಳು ಸಭೆಯಲ್ಲಿ ಕೆಳಿಬಂದವು.

ಪ್ರತಿ ಶಾಲೆಗಳಲ್ಲಿ ಆರ್.ಟಿ.ಐ. ವಿದ್ಯಾರ್ಥಿಗಳಿಗೆ ಲಭಿಸುವ ಸೌಲಭ್ಯಗಳ ಪಟ್ಟಿಯನ್ನು ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಬೇಕು. ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಶಾಲಾ ಬಸ್‍ಗಳ ಸೌಲಭ್ಯ ಒದಗಿಸಬೇಕು. ಪುಸ್ತಕಗಳಿಗೆ ಶುಲ್ಕವನ್ನು ವಿಧಿಸಬಾರದು. ಇದನ್ನು ಮೀರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾದಾ ಪುರದ ಅಶ್ರಫ್ ಒತ್ತಾಯಿಸಿದರು.

ಆರ್.ಟಿ.ಇ. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಬೇಕು. ಕೆಲ ಶಾಲೆಗಳಲ್ಲಿ ವಾರ್ಷಿಕವಾಗಿ ನೋಟ್ ಪುಸ್ತಕಗಳ ವಿತರಣೆಗಾಗಿ 4 ಸಾವಿರದಿಂದ 10 ಸಾವಿರ ರೂ.ಗಳನ್ನು ಪಡೆದಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವದು ಎಂದು ಹೇಳಿದರು.

ಖಾಸಗಿ ಮತ್ತು ಅನುದಾನಿತ ಶಾಲೆಯಲ್ಲಿ ದಾಖಲಾದ ಆರ್.ಟಿ.ಇ. ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಪೋಷಕರು ಲಿಖಿತ ದೂರು ನೀಡಿದರೆ, ಅವುಗಳನ್ನು ಸ್ವೀಕರಿಸಿ ಸರ್ಕಾರಕ್ಕೆ ಹಾಗೂ ಇಲಾಖೆಯ ಆಯುಕ್ತರಿಗೆ ಸಲ್ಲಿಸಲಾಗುವದು ಎಂದು ಪ್ರಾಂಶುಪಾಲ ಮಹಾದೇವಪ್ಪ ಹೇಳಿದರು.