ಗೋಣಿಕೊಪ್ಪಲು, ಮೇ 9 : ಕೊಡಗಿನಲ್ಲಿ ಕಳೆದ ಬಾರಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದ ಹಿನ್ನಲೆಯಲ್ಲಿ ಈ ಬಾರಿ ಮುಂಜಾಗೃತಾ ಕ್ರಮವಾಗಿ ಅಗತ್ಯ ವಿದ್ಯುತ್ ಸಾಮಗ್ರಿಗಳನ್ನು ಶೇಖರಿಸಿಟ್ಟಿದ್ದು ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಚೆಸ್ಕಾಂನ ವಿಭಾಗೀಯ ಅಧೀಕ್ಷಕಿ ತಾರಾ ಮಾಹಿತಿ ಒದಗಿಸಿದ್ದಾರೆ.

ಗೋಣಿಕೊಪ್ಪ ಚೆಸ್ಕಾಂ ಕಚೇರಿಗೆ ಆಗಮಿಸಿದ ಸಂದರ್ಭ ‘ಶಕಿ’್ತಯೊಂದಿಗೆ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು ಈಗಾಗಲೇ ಮಳೆಗಾಲದ ಮುಂಜಾಗೃತ ಕ್ರಮವಾಗಿ ಅಗತ್ಯ ವಿದ್ಯುತ್ ಸಾಮಗ್ರಿಗಳನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶೇಖರಣೆ ಮಾಡಲಾಗಿದೆ. 14 ವಾಹನಗಳು, 125 ಗ್ಯಾಂಗ್‍ಮನ್‍ಗಳು ಸೇರಿದಂತೆ ಇತರ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು ಅಗತ್ಯ ಕಂಡುಬಂದಲ್ಲಿ ವಿಭಾಗ ಮಟ್ಟದಲ್ಲಿರುವ ಸಿಬ್ಬಂದಿಗಳ ಸೇವೆ ಪಡೆಯಲಾಗುವದು ಎಂದರು.

ಗೋಣಿಕೊಪ್ಪಲು ಚೆಸ್ಕಾಂ ಕಚೇರಿಯಲ್ಲಿ ಒತ್ತಡದಲ್ಲಿ ನೌಕರರು ಸೇವೆ ಸಲ್ಲಿಸುತ್ತಿರುವ ಬಗ್ಗೆ ಮತ್ತೊಂದು ಸೆಕ್ಷನ್ ತೆರೆಯುವ ಅಭಿಪ್ರಾಯ ಮಂಡಿಸಿದಾಗ; ಇಲ್ಲಿ ಕೆಲಸ ಒತ್ತಡದ ಬಗ್ಗೆ ಅರಿವಿದೆ. ಹಿರಿಯ ಅಧಿಕಾರಿಗಳು ನೂತನ ಸೆಕ್ಷನ್ ಅವಶ್ಯಕತೆ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದಲ್ಲಿ ಕೂಡಲೇ ಕ್ರಮ ಕೈಗೊಂಡು ಜಾರಿ ಮಾಡಲಾಗುವದು ಎಂದರು.

ಆಗಿಂದಾಗ್ಗೆ ವಿದ್ಯುತ್ ನಿಲುಗಡೆ ಸಮಸ್ಯೆಯ ಬಗ್ಗೆ ಗಮನ ಸೆಳೆದಾಗ ಈಗಾಗಲೇ ಸಾರ್ವಜನಿಕರಿಂದ ಈ ಬಗ್ಗೆ ದೂರು ವ್ಯಾಪಕವಾಗಿ ಬಂದಿದೆ. ಜಿ.ಓ.ಎಸ್. ಅಳವಡಿಸಿ ವಿದ್ಯುತ್ ನಿಲುಗಡೆ ತಡೆಯುವ ಕೆಲಸ ಮಾಡಲಾಗುವದು. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು. ಆನೆ ದಾಟುವ ಸ್ಥಳಗಳಲ್ಲಿ ಕಾರಿಡಾರ್‍ನ ಕಂಬಗಳನ್ನು ಅಳವಡಿಸಿ ಕೆಲಸ ಮಾಡಲಾಗುವದು ಕೈಕೇರಿ, ಕಳತ್ಮಾಡು ಮಾರ್ಗದ 6 ಕಿ.ಮೀ.ರಸ್ತೆಗೆ ವಿದ್ಯುತ್ ಕಂಬವನ್ನು ಅಳವಡಿಸಿ ಎಕ್ಸ್‍ಪ್ರೆಸ್ ಲೈನ್ ಮೂಲಕ ವಿದ್ಯುತ್ ಕಲ್ಪಿಸಲಾಗುವದು. ಸಕಾಲದಲ್ಲಿ ಗ್ರಾಹಕರು ನಿಗಮದೊಂದಿಗೆ ಸಹಕರಿಸಿ ವಿದ್ಯುತ್ ಬಿಲ್ಲನ್ನು ಪಾವತಿಸುವಂತೆ ಸಲಹೆ ನೀಡಿದರು.

-ಹೆಚ್.ಕೆ.ಕೆ.