ಮಡಿಕೇರಿ, ಮೇ 9 : ಜಿಲ್ಲಾಡಳಿತ ಹಾಗೂ ವಿಕೋಪ ನಿರ್ವಹಣಾ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ, ಪರಿಷ್ಕರಣೆ ಹಾಗೂ ವಿಕೋಪ ಮಿತಗೊಳಿಸುವಿಕೆ, ಪೂರ್ವಸಿದ್ಧತೆ ಹಾಗೂ ಸ್ಪಂದನೆ ಯೋಜನೆ ಬಗ್ಗೆ ಎರಡು ದಿನದ ತರಬೇತಿ ಉಪನ್ಯಾಸ ಕಾರ್ಯಾಗಾರವು ನಡೆಯಿತು.
ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ಬೋಧಕ ಡಾ. ಜೆ.ಆರ್. ಪರಮೇಶ್ ಮಾತನಾಡಿ ಕಳೆದ ಬಾರಿ ಕೊಡಗಿನಲ್ಲಿ ತೀವ್ರ ಅತೀವೃಷ್ಟಿಯಿಂದಾಗಿ ಹಲವು ಹಾನಿ ಸಂಭವಿಸಿದ್ದು, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ನಿಯೋಜಿಸುವ ಮೂಲಕ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸುವದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮಾತನಾಡಿ ಕಾರ್ಯಾ ಗಾರದ ಪ್ರಶಿಕ್ಷಣಾರ್ಥಿಗಳೊಂದಿಗೆ ಚರ್ಚೆ ನಡೆಸಿ, ಮುಂಬರುವ ದಿನಗಳಲ್ಲಿ ಸಂಭವಿಸಬಹುದಾದ ವಿಕೋಪಗಳನ್ನು ತಡೆಗಟ್ಟುವಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಸೇರಿಸಿ ಜಿಲ್ಲಾ ಮಟ್ಟದ ಅಪಾಯ, ನಷ್ಟ, ದುರ್ಬಲತೆ ಹಾಗೂ ಸಾಮಥ್ರ್ಯಗಳನ್ನು ಗುರುತಿಸಿಕೊಂಡು ವಿಕೋಪ ತಡೆಗಟ್ಟುವಿಕೆ, ಸ್ಪಂದನೆ ಹಾಗೂ ಪುನರ್ವಸತಿ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವದು. ವಿಪತ್ತು ನಿರ್ವಹಣೆ ಯೋಜನೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಜಿಲ್ಲಾ ಅಗ್ನಿ ಶಾಮಕಾಧಿಕಾರಿ, ಭೂವಿಜ್ಞಾನಿ ವಿಪತ್ತು ನಿರ್ವಹಣಾ ತಜ್ಞರು, ಆರೋಗ್ಯಾಧಿಕಾರಿ, ಜಿಲ್ಲಾ ಪೊಲೀಸರು ವಿಪತ್ತು ನಿರ್ವಹಣಾ ಕಾರ್ಯಗಳಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಿರ್ವಹಣೆಯನ್ನು ಹೇಗೆ ಕೈಗೊಳ್ಳಬೇಕೆಂದು ವಿವರಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಂಚಾಯತ್ ರಾಜ್ ಇಂಜಿನಿಯ ರಿಂಗ್ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡಗಳು ಗುಂಪು ಚರ್ಚೆಯ ಮೂಲಕ ವಿಕೋಪ ತಡೆಗಟ್ಟುವಿಕೆ ಹಾಗೂ ಮುಂತಾದವುಗಳ ಬಗ್ಗೆ ಮಾಹಿತಿ ಮಂಡನೆ ಮಾಡಿದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಎಚ್.ರಾಜಲಕ್ಷ್ಮಿ ಇತರರು ಇದ್ದರು.