ವೀರಾಜಪೇಟೆ, ಮೇ 9: ರಾಜ್ಯ ಸಾರಿಗೆ ಸಂಸ್ಥೆಗೆ ಮುಕ್ತ ಸಂಚಾರದ ಸ್ವಾಯತ್ತತೆ ನೀಡುವ ಮೂಲಕ ಕೊಡಗು ಜಿಲ್ಲೆಯಾದ್ಯಂತ ಮುಕ್ತವಾಗಿ ಸಂಚರಿಸಲು ಅನುವು ಮಾಡಿಕೊಡುವದನ್ನು ಖಾಸಗಿ ಬಸ್ ಕಾರ್ಮಿಕರ ಸಂಘ ಪೂರ್ಣವಾಗಿ ವಿರೋಧಿಸುತ್ತದೆ. ಸರಕಾರಿ ಬಸ್‍ಗಳಿಗೆ ಸ್ವಾಯತ್ತತೆಯ ಮುಕ್ತ ಸಂಚಾರದ ಆದೇಶವನ್ನು ಜಾರಿ ಮಾಡದಂತೆ ಸಂಘಟನೆ ಸಾರಿಗೆ ಸಂಸ್ಥೆಯ ಆಡಳಿತಕ್ಕೆ ಮನವಿ ಮಾಡಿರುವದಾಗಿ ಅಧ್ಯಕ್ಷ ದಿನೇಶ್ ನಾಯರ್ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಾದ್ಯಂತ ಸುಮಾರು 200 ರಿಂದ 225 ಖಾಸಗಿ ಬಸ್‍ಗಳು ಸಂಚರಿಸುತ್ತಿದ್ದು ಕೊಡಗಿನ ಮೂರು ತಾಲೂಕುಗಳ ಪ್ರಯಾಣಿಕರಿಗೆ ಬೇಡಿಕೆಯಂತೆ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದೆ. ಖಾಸಗಿ ಬಸ್‍ಗಳು ತನ್ನ ಆಯ್ದ ಮಾರ್ಗಗಳಿಗೆ ಮೂರು ತಿಂಗಳಿಗೊಮ್ಮೆ ರೂ 35000ದಿಂದ 40,000ದವರೆಗೆ ತೆರಿಗೆಯನ್ನು ಪಾವತಿಸುತ್ತಿದೆ. ಆರ್.ಟಿ.ಓ ನಿರ್ದೇಶನದಂತೆ ವೇಳಾಪಟ್ಟಿಗನುಸಾರವಾಗಿ ಬಸ್ಸನ್ನು ಚಾಲಿಸಲಾಗುತ್ತಿದೆ. ಖಾಸಗಿ ಬಸ್ಸುಗಳು ನೀಡುತ್ತಿರುವ ವ್ಯವಸ್ಥಿತ ಸೇವೆಯಿಂದ ಪ್ರಾಯಾಣಿಕರು ಈ ಸೇವೆಗೆ ಹೊಂದಿಕೊಂಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಖಾಸಗಿ ಬಸ್ ಸೇವೆಯನ್ನು ಸರಕಾರದ ಸಾರಿಗೆ ಸಂಸ್ಥೆ ಕಡೆಗಣಿಸುವದು ನ್ಯಾಯ ಸಮ್ಮತವಲ್ಲ ಎಂದು ದಿನೇಶ್ ನಾಯರ್ ದೂರಿದರು.

ಸಂಘಟನೆಯ ಉಪಾಧ್ಯಕ್ಷ ನಾಗೇಶ್ ಮಾತನಾಡಿ ಸಾರಿಗೆ ಸಂಸ್ಥೆಗೆ ಸ್ವಾಯತ್ತತೆ ನೀಡಿ ಮುಕ್ತ ಸಂಚಾರಕ್ಕೆ ಅನುಮತಿ ನೀಡಿದರೆ ಸಾರಿಗೆ ಸಂಸ್ಥೆಯ ಬಸ್ಸುಗಳು ವೇಳಾಪಟ್ಟಿ ಇಲ್ಲದೆ ಸಂಚರಿಸಿ ಖಾಸಗಿ ಬಸ್ಸುಗಳ ಆರ್ಥಿಕ ಪರಿಸ್ಥತಿ ಮೇಲೆ ಧಕ್ಕೆ ಉಂಟು ಮಾಡಲಿದೆ. ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳಲ್ಲಿ ಸುಮಾರು ಎರಡು ಸಾವಿರದಿಂದ ಎರಡೂವರೆ ಸಾವಿರದಷ್ಟು ಕಾರ್ಮಿಕರು ದುಡಿಯುತ್ತಿದ್ದಾರೆ. ಖಾಸಗಿ ಬಸ್ಸುಗಳ ಆರ್ಥಿಕ ಪರಿಸ್ಥಿತಿ ಮೇಲೆ ಕಾರ್ಮಿಕರ ಸೇವೆ ಅವಲಂಭಿತವಾಗಿದೆ. ರಾಜ್ಯದ ಸಾರಿಗೆ ಸಂಸ್ಥೆಯ ಸ್ವಾಯತ್ತತೆಯ ಆದೇಶವನ್ನು ಕೈ ಬಿಡದಿದ್ದರೆ ಖಾಸಗಿ ಬಸ್ಸಿನ ಕಾರ್ಮಿಕರು ಬೀದಿ ಪಾಲಾಗುವದರಲ್ಲಿ ಸಂಶಯವಿಲ್ಲ ಎಂದರು.

ಸಂಘಟನೆಯ ಮಾಜಿ ಅಧ್ಯಕ್ಷ ಎಂ.ಸಿ.ಅಶೋಕ್ ಮಾತನಾಡಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ವ್ಯವಸ್ಥಿತವಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದರೂ ಸಾರಿಗೆ ಸಂಸ್ಥೆಯ ಪರವಾಗಿ ಸ್ವಾಯತ್ತತೆಯನ್ನು ನೀಡುವದು ಸರಿಯಲ್ಲ ಎಂದು ಹೇಳಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಟಿ.ಎನ್.ಮಂಜುನಾಥ್ ಮಾತನಾಡಿ ಹೊರ ಜಿಲ್ಲೆಗಳಂತೆ ಕೊಡಗಿನ ಜನತೆ ಟ್ರಾಕ್ಟರ್, ಲಾರಿ, ಇನ್ನಿತರ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವದಿಲ್ಲ. ಕೊಡಗಿನ ಶಿಸ್ತುಬದ್ಧ ಪ್ರಯಾಣಿಕರು ಪ್ರಯಾಣಕ್ಕಾಗಿ ಖಾಸಗಿ ವಾಹನ ಇಲ್ಲವೇ ಖಾಸಗಿ ಬಸ್ಸನ್ನು ಅವಲಂಭಿಸುತ್ತಾರೆ. ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರಿಗೆ ಸಂಸ್ಥೆಗೆ ಸ್ವಾಯತ್ತತೆ ಆದೇಶ ಜಾರಿಗೊಳಿಸುವ ಮೊದಲು ಖಾಸಗಿ ಬಸ್ ಸಂಚಾರದ ಸೇವೆಯನ್ನು ಗಮನಿಸಬೇಕು. 1974 ರಲ್ಲಿ ದಿಢೀರನೇ ಖಾಸಗಿ ಬಸ್ಸುಗಳನ್ನು ಜಿಲ್ಲೆಯ ಸಂಚಾರ ಹೊರತುಪಡಿಸಿದಂತೆ ಅಂತರ ಜಿಲ್ಲಾ ಸಂಚಾರವನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆಗ ಖಾಸಗಿ ಬಸ್ ಮಾಲೀಕರು ವಿರೋಧಿಸಿದರೂ ಅಂತರ ಜಿಲ್ಲಾ ಪ್ರಯಾಣಿಕರ ಹಿತದೃಷ್ಟಿಯಿಂದ ಆಗಿನ ಸರಕಾರದ ತೀರ್ಮಾನಕ್ಕೆ ಅನುಕಂಪ ತೋರಿಸಿದನ್ನು ಈಗಲೂ ಸ್ಮರಿಸಬಹುದು ಎಂದರು. ಗೋಷ್ಠಿಯಲ್ಲಿ ಸಮಿತಿಯ ಜೂಡಿವಾಝ್ ಹಾಜರಿದ್ದರು.