ಮಡಿಕೇರಿ, ಮೇ 9: ವಾಸ್ತವ್ಯದ ಉದ್ದೇಶಕ್ಕಾಗಿ ಮನೆ ನಿರ್ಮಿಸುವವರಿಗೆ 15 ರಿಂದ 20 ಸೆಂಟ್ ಜಾಗದ ವಿಸ್ತೀರ್ಣದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಲು ಕಂದಾಯ ಇಲಾಖೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಈ ವಿಚಾರದಲ್ಲಿ 15 ರಿಂದ 20 ಸೆಂಟ್ ವಿಸ್ತೀರ್ಣದ ಜಮೀನಿನ ಭೂ ಪರಿವರ್ತನೆಗೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಇವರ ಸ್ಥಳ ಪರಿಶೀಲನೆ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿಯವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರಡಿ ಕಲ್ಪಿಸಲಾದ ಅಧಿಕಾರದಂತೆ ಭೂಪರಿವರ್ತನೆಗೆ ಆದೇಶ ನೀಡಲು (ಕೆಲವು ಅಂಶಗಳ ಪರಿಶೀಲನೆಗೆ ಒಳಪಟ್ಟು) ಸರಕಾರವು ಅನುಮತಿ ನೀಡಿರುವದಾಗಿ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ನಿನ್ನೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಅವರೊಂದಿಗೆ ಕೊಡಗು ಸೇವಾ ಕೇಂದ್ರದ ಪ್ರಮುಖರು ಪ್ರಸ್ತುತ ಈ ವಿಚಾರದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಮನವಿ ಸಲ್ಲಿಸಿದ್ದರು. ಅಲ್ಲದೆ ಪಂಚಾಯಿತಿ ಮಟ್ಟದಲ್ಲಿ ಜನತೆಗೆ ಮನೆ ನಿರ್ಮಾಣದ ವಿಚಾರದಲ್ಲಿ ಸಮಸ್ಯೆಯಾಗುತ್ತಿದ್ದ ಕುರಿತು ಈ ಹಿಂದಿನಿಂದಲೂ ಹಲವರಿಂದ ಸಾಕಷ್ಟು ಆಕ್ಷೇಪಣೆಗಳು ಕೂಡ ಕೇಳಿಬರುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಕಂದಾಯ ಇಲಾಖೆ ಈ ಬಗ್ಗೆ ಸ್ಪಷ್ಟ ನಿರ್ದೇಶನವನ್ನು ನೀಡಿದೆ.

ಆದರೆ ಭೂ ಪರಿವರ್ತನೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಪರಿಶೀಲನೆಗೊಳಪಟ್ಟು ಈ ಅನುಮತಿ ನೀಡುತ್ತಿರುವದಾಗಿಯೂ ಕಂದಾಯ ಇಲಾಖೆಯ (ಭೂ ಮಂಜೂರಾತಿ) ಪೀಠಾಧಿಕಾರಿ ಸಿ. ವಿಮಲಮ್ಮ ಅವರು ತಾ. 8 ರಂದು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ನಿಬರ್ಂಧಗಳೇನು?

* ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯವರು ನೀಡಿರುವ ವರದಿಯಲ್ಲಿನ ಅಂಶದಂತೆ ಕಟ್ಟಡಗಳ ರಚನೆ ಸಂಬಂಧ (ಓoಟಿ Sಣಚಿbಟe ಚಿಡಿeಚಿ) ಇದ್ದಲ್ಲಿ ಭೂ ಪತಿವರ್ತನೆಗೆ ಅವಕಾಶ ನೀಡಬಾರದು.

* ನದಿ - ಹಳ್ಳಿಗಳಿಂದ ಕನಿಷ್ಟ 10 ಮೀಟರ್ ದೂರದಲ್ಲಿರಬೇಕು.

* ತೀವ್ರತರವಾದ ಇಳಿಜಾರು ಇರುವ ಮತ್ತು ಕಣಿವೆಯಂತಹ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವದು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಭೂಪರಿವರ್ತನೆಗೆ ಅವಕಾಶ ನೀಡಬಾರದು.

* 2018ರ ಮಳೆಗಾಲದಲ್ಲಿ ಭೂಕುಸಿತ ಉಂಟಾದ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡುವದು ಸೂಕ್ತವಲ್ಲದ ಕಾರಣ ಅಂತಹ ಜಮೀನುಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು ಎಂಬ ಸೂಚನೆಯನ್ನು ಹೊಸ ಆದೇಶದೊಂದಿಗೆ ನೀಡಲಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಕ್ರಮವನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

ಸಮಸ್ಯೆ ಇದ್ದಲ್ಲಿ ಸ್ಪಂದಿಸಲು ಮನವಿ : ವಾಸ್ತವ್ಯದ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಪರಿತರ್ವನೆಯ ವಿಚಾರದಲ್ಲಿ ಪಂಚಾಯಿತಿ ಮಟ್ಟದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಇದೀಗ ಹೊಸ ಆದೇಶದಿಂದ ಇದು ಸಮರ್ಪಕ ವಾಗಲಿದೆ ಎಂದು ಹೇಳಿರುವ ಮಡಿಕೇರಿ ಕೊಡವ ಸಮಾಜದ ಕಟ್ಟಡದಲ್ಲಿರುವ ಕೊಡಗು ಸೇವಾ ಕೇಂದ್ರದ ಪ್ರಮುಖ ಎ.ಎ. ತಮ್ಮು ಪೂವಯ್ಯ ಅವರು ಜನರು ಮತ್ತೆ ಸಮಸ್ಯೆಯಾದಲ್ಲಿ ಸೇವಾ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.