ಶನಿವಾರಸಂತೆ, ಮೇ 8: ಕಸ ಗುಡಿಸುವ ಸಂಕೇತವಾಗಿ ಗಾಂಧೀಜಿ ಹಾಗೂ ಸಂವಿಧಾನ ರಚಿಸಿದವರು ಅಂಬೇಡ್ಕರ್ ಎಂದು ಹೇಳುವ ಮೂಲಕ ಅವರ ಮೂಲ ವಿಚಾರಗಳಿಂದ ಜನರನ್ನು ಸರಕಾರಗಳು ವಂಚಿಸುತ್ತಿವೆ ಎಂದು ವಕೀಲ ಕೆ.ಆರ್. ವಿದ್ಯಾಧರ್ ಅಸಮಾಧಾನ ವ್ಯಕ್ತಪಡಿಸಿದರು.

ಸಮೀಪದ ಹಾರೆಹೊಸೂರು ಗ್ರಾಮದಲ್ಲಿ ಅಂಬೇಡ್ಕರ್ ಬಳಗದ ವತಿಯಿಂದ ನಡೆದ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಿಯವರೆಗೆ ಅಸ್ಪøಶ್ಯತೆ, ಜಾತೀಯತೆ ಈ ದೇಶದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿಯ ಅಗತ್ಯವಿದೆ. ಮತದಾನದ ಹಕ್ಕು, ಕಾರ್ಮಿಕರಿಗೆ ಮೂಲಭೂತ ಅವಶ್ಯಕತೆ, ಮಹಿಳೆಯರಿಗೆ ಆಸ್ತಿ ಹಕ್ಕು, ಸಂಬಳ ಸಹಿತ ಹೆರಿಗೆ ರಜೆ, ವಿಧವೆಯರಿಗೆ ಮತ್ತು ವಿವಾಹದ ಹಕ್ಕು ಎಲ್ಲವನ್ನೂ ಒದಗಿಸಿಕೊಟ್ಟವರು ಅಂಬೇಡ್ಕರ್ ಎಂದರು.

ಸ್ವಾತಂತ್ರ್ಯ ಸಮಾನತೆ ಸೋದರತೆಯ ಬದುಕು ರೂಪಿಸಿಕೊಳ್ಳುವ ವ್ಯವಸ್ಥೆ ಅಸ್ಪøಶ್ಯತೆ ಮತ್ತು ಜಾತೀಯತೆಯಿಂದ ಬಿಡುಗಡೆಗೊಳ್ಳಲು ಬೌದ್ಧ ಧರ್ಮದ ದಾರಿ ತೋರಿಸಿ ಶತಮಾನಗಳ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳಿಂದ ಹೊರಬರಲು ಅವಕಾಶ ಕಲ್ಪಿಸಿಕೊಟ್ಟವರು ಅಂಬೇಡ್ಕರ್. ಬಹುಜನರಿಗೆ ಸಮಾನ ಅವಶ್ಯಕತೆಗಳನ್ನು ಪಡೆಯುವ ಅವಕಾಶ ಮಾಡಿಕೊಟ್ಟ ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ ನಡೆಯುವದು ಎಲ್ಲರ ಕರ್ತವ್ಯವಾಗಿದೆ ಎಂದು ವಕೀಲ ವಿದ್ಯಾಧರ್ ಅಭಿಪ್ರಾಯಪಟ್ಟರು.

ಬಾರುಕೋಲು ವಾರಪತ್ರಿಕೆ ಸಂಪಾದಕ ರಂಗಸ್ವಾಮಿ ಮಾತನಾಡಿ, ಅಂಬೇಡ್ಕರ್ ಸಮಾಜದ ಬಿಡುಗಡೆಗಾಗಿ ಇತಿಹಾಸದಲ್ಲಿ ಹೋರಾಟ ಮಾಡಿದ ಗೌತಮ ಬುದ್ಧ ಮತ್ತು ಕಾರ್ಲ್ ಮಾಕ್ರ್ಸ್ ಅವರನ್ನು ಮಾದರಿಯಾಗಿಟ್ಟುಕೊಂಡು ಕೊನೆಯಲ್ಲಿ ಗೌತಮ ಬುದ್ಧರನ್ನು ಒಪ್ಪಿಕೊಂಡರು. ನೈತಿಕತೆಗೆ ಹೆಚ್ಚು ಒತ್ತುಕೊಟ್ಟಿದ್ದ ಅವರು ಬುದ್ಧನನ್ನು ಜಗತ್ತಿನ ಮೊದಲ ಸಮಾಜ ವಿಜ್ಞಾನಿ ಎಂದರು. ಸಮಾಜದಲ್ಲಿಂದು ಹಳ್ಳಿಗೊಂದರಂತೆ ದಲಿತ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡದಿದ್ದರೆ ಮನುಷ್ಯ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಜಾತಿಯ ಸಮಾನತೆ ಮತ್ತು ಅಸ್ಪøಶ್ಯತೆಯ ಅವಮಾನಗಳಿಂದ ಕಳಚಿಕೊಳ್ಳಲು ಅಂಬೇಡ್ಕರ್ ತೋರಿಸಿದ ಮಾರ್ಗದಲ್ಲಿ ನಡೆಯಬೇಕಿದೆ. ಬುದ್ಧನ ಪಂಚಶೀಲ, ಅಷ್ಟಾಂಗ ಮಾರ್ಗಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಉಪನ್ಯಾಸಕರಾದ ಎಂ.ಎನ್. ಹರೀಶ್, ಕೆ.ಪಿ. ಜಯಕುಮಾರ್, ಮುಖಂಡರಾದ ಡಿ.ಎಸ್. ನಿರ್ವಾಣಪ್ಪ, ಮೋಹನ್ ಮೌರ್ಯ, ಟಿ.ಈ. ಸುರೇಶ್, ಜಯಪ್ಪ ಹಾನಗಲ್, ವಕೀಲ ಶಂಕರ್ ಮಾತನಾಡಿದರು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ದಲಿತ ಸಮಿತಿ ಸ್ಥಾಪಕ ಸದಸ್ಯ ಜಯಪ್ಪ ಹಾನಗಲ್, ಹೋರಾಟಗಾರ ಡಿ.ಎಸ್. ನಿರ್ವಾಣಪ್ಪ, ಶಿಕ್ಷಕ ಶಿವಶಂಕರ್ ಅವರನ್ನು ಸನ್ಮಾನಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಖಂಡ ವಿರೂಪಾಕ್ಷ ಸಂದೀಪ್ ವಹಿಸಿದ್ದರು. ಶಿಕ್ಷಕ ದಿವಾಕರ್, ಪಾವರ್ತಿ ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮೊದಲು ಅಂಬೇಡ್ಕರ್ ಭಾವಚಿತ್ರದೊಂದಿಗೆ ಶನಿವಾರಸಂತೆಯ ಕಿತ್ತೂರು ರಾಣಿಚೆನ್ನಮ್ಮ ವೃತ್ತದಿಂದ ಹಾರೆಹೊಸೂರು ಗ್ರಾಮದವರೆಗೆ ಬೈಕ್ ಜಾಥಾ ನಡೆಯಿತು. ದಲಿತ ಕಲಾ ಮಂಡಳಿ ವತಿಯಿಂದ ಕ್ರಾಂತಿಗೀತೆಗಳನ್ನು ಹಾಡಲಾಯಿತು.