ಮಡಿಕೇರಿ, ಮೇ 8 : ಮಡಿಕೇರಿ ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ದೇವಾಲಯದ 54ನೇ ವಾರ್ಷಿಕ ಆರಾಧನೋತ್ಸವ ತಾ. 9 ರಿಂದ (ಇಂದಿನಿಂದ) 15ರ ವರೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ.

ಶ್ರೀ ಆದಿಪರಾಶಕ್ತಿ ಮತ್ತು ಶ್ರೀ ಮುನೇಶ್ವರ ದೇವರ ಸನ್ನಿಧಿಯಲ್ಲಿ ತಾ. 9 ರಂದು ರಾತ್ರಿ 10 ಗಂಟೆಯಿಂದ ಹೂ ವರ ಕೇಳುವದು, 12 ಗಂಟೆಗೆ ಶ್ರೀ ಮುನೇಶ್ವರ ದೇವರ ಪೂಜೆ, ದೈವಗಣಗಳಿಗೆ ಆಹಾರ ತರ್ಪಣೆ ಸಲ್ಲಿಕೆ, ಅಗ್ನಿ ಚಟ್ಟಿಯಲ್ಲಿ ಅಗ್ನಿ ದೇವರನ್ನು ಪ್ರತಿಷ್ಠಾಪಿಸುವದರ ಮೂಲಕ ಉತ್ಸವಕ್ಕೆ ಚಾಲನೆ ದೊರಕಲಿದೆ.

ತಾ.10 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಗಣಪತಿ ಹೋಮ, ಶ್ರೀ ದೇವಿಯ ಧ್ವಜಾರೋಹಣ, ವಿಶೇಷ ಪೂಜೆ ಮತ್ತು ಅಗ್ನಿಕರಗದ ಪೂಜೆ ನಡೆಯಲಿದೆ. ತಾ. 11 ರಂದು ದೇವಿಗೆ ಅಲಂಕೃತ ಪೂಜೆ ಮತ್ತು ಅಗ್ನಿ ಕರಗದ ನಗರ ಪ್ರದಕ್ಷಿಣೆ ನಡೆಯಲಿದ್ದು, ತಾ.12 ರಂದು ಶ್ರೀ ದೇವಿಯ ವಿಶೇಷ ಪೂಜೆ ಮತ್ತು ಅಗ್ನಿಕರಗದ ನಗರ ಪ್ರದಕ್ಷಿಣೆ ನಡೆಯಲಿದೆ. ತಾ. 13 ರಂದು ಸಂಜೆ 7 ಗಂಟೆಗೆ ನಗರದ ಪಂಪಿನ ಕೆರೆಯಿಂದ ಮುಖ್ಯ ಬೀದಿಗಾಗಿ ಶ್ರೀ ಆದಿಪರಾಶಕ್ತಿ ದೇವಾಲಯಕ್ಕೆ ಶ್ರೀ ದೇವಿಯ ಕಳಸ ತೀರ್ಥ, ಪಡಕಲಂ, ಹೂವಿನ ಕರಗ, ಅಗ್ನಿಕರಗ ಮತ್ತು ವಿದ್ಯುತ್ ಅಲಂಕೃತ ಮಂಟಪ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಸಾಗಲಿದೆ.

ತಾ. 14 ರಂದು ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಪೊಂಗಲ್ ಹಾಗೂ ತಂಬಿಟ್ಟು, ದೀಪಕಳಸಗಳ ಉತ್ಸವ, 12 ಗಂಟೆಗೆ ಮಹಾಪೂಜೆ ನಂತರ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ತಾ. 15 ರಂದು ಅಪರಾಹ್ನ 3 ಗಂಟೆಗೆ ಓಕುಳಿ, ಸಂಜೆ 7 ಗಂಟೆಗೆ ಶ್ರೀ ದೇವಿಯ ಶಾಂತಿ ಪೂಜೆಯೊಂದಿಗೆ ದೇವಿಯ ಧ್ವಜದ ಅವರೋಹಣ ನಡೆಯಲಿದೆಯೆಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.