ಮಡಿಕೇರಿ, ಮೇ 8 : ಗಾಳಿಬೀಡು ಗ್ರಾಮದ ಒಂದನೇ ಮೊಣ್ಣಂಗೇರಿಯ ಶ್ರೀ ಶಕ್ತಿ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ತಾ. 11ರಿಂದ 13ರವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಕುಮಾರ್, ಖಜಾಂಚಿ ನವೀನ್ ದೇರಳ ಹಾಗೂ ಪದಾಧಿಕಾರಿಗಳು ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಕೈಂಕರ್ಯಗಳ ಕುರಿತು ಮಾಹಿತಿ ನೀಡಿದರು.

ತಾ. 11ರಂದು ಸಂಜೆ 4 ಗಂಟೆಯಿಂದ ಉಗ್ರಾಣ ಪೂಜೆ, ಶಿಲ್ಪಿಗಳಿಂದ ಸ್ವೀಕಾರ, ಪ್ರಾರ್ಥನೆ, ಆಚಾರ್ಯವರಣ, ಸ್ಥಳಶುದ್ಧಿ ಸಪ್ತಶುದ್ಧಿ, ಅಂಕುರ ಪೂಜೆ, ಗೋಪ್ರವೇಶ, ಜಲಾಧಿವಾಸ, ರಾತ್ರಿ 8 ಗಂಟೆಯಿಂದ ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ದಿಗ್ಬಲಿ ಕಾರ್ಯಕ್ರಮ ಗಳು ಜರುಗಲಿವೆ ಎಂದರು.

ತಾ. 12ರಂದು ಬೆಳಿಗ್ಗೆ 6 ಗಂಟೆಯಿಂದ ಸ್ಥಳ ಶುದ್ಧಿ, ಅಂಕುರಪೂಜೆ, ಗಣಹೋಮ, ಪಂಚತತ್ವ ಹೋಮ, ಕಲಾಹೋಮ, ಧಾನ್ಯಾಧಿವಾಸ, ಅಂಕುರಪೂಜೆ, ಸಂಜೆ 6ಗಂಟೆಯಿಂದ ಅದಿವಾಸ ಹೋಮ, ಅಂಕುರಪೂಜೆ, ದುರ್ಗಾಪೂಜೆ, ಬ್ರಹ್ಮಕಲಶ ಪ್ರತಿಷ್ಠೆ, ದೇವತಾ ಶಯನ ನಡೆಯಲಿದೆ ಎಂದು ವಿವರಿಸಿದರು.

ತಾ. 13ರ ಬೆಳಿಗ್ಗೆ 5 ಗಂಟೆ ಯಿಂದ ಸ್ಥಳ ಶುದ್ಧಿ, ಗಣಹೋಮ. 7.10ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಶಕ್ತಿ ಗಣಪತಿ ಪ್ರತಿಷ್ಠೆ, ಮಹಾ ಕಲಶಾಭಿಷೇಕ, ಮಹಾಪೂಜೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ . ದೈವಿಕ ಕೈಂಕರ್ಯಗಳನ್ನು ಕಾಸರಗೋಡು ವಿನ ಪುಂದೂರು ಗೋಪಾಲ ಕೃಷ್ಣ ಕೆದಿಲಾಯ ನೇತೃತ್ವದಲ್ಲಿ ನಡೆಸಲಿರುವದಾಗಿ ತಿಳಿಸಿದ್ದಾರೆ.

ದೇವಾಲಯದ ಜೀರ್ಣೋ ದ್ಧಾರಕ್ಕೆ ಸುಮಾರು 22 ಲಕ್ಷ ರೂ. ವೆಚ್ಚವಾಗಲಿದ್ದು, ಪ್ರಸಕ್ತ 15 ಲಕ್ಷ ರೂ. ವೆಚ್ಚದಲ್ಲಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ಇನ್ನೂ ಸುಮಾರು 6-7 ಲಕ್ಷ ರೂ.ಗಳ ಅಗತ್ಯವಿದ್ದು, ದಾನಿಗಳ ನೆರವಿನಿಂದ ದೇವಾಲ ಯದ ಕಾಮಗಾರಿ ಪೂರ್ಣಗೊಳಿ ಸಲು ಚಿಂತನೆ ನಡೆಸಲಾಗಿದೆ. ಅದರಂತೆ ದಾನಿಗಳು ತಮ್ಮ ದೇಣಿಗೆಯನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ಮೇ 11ರ ಸಂಜೆ ನಡೆಯುವ ಉಗ್ರಾಣ ಪೂಜೆಗೆ ಅಕ್ಕಿ ತೆಂಗಿನ ಕಾಯಿ, ಎಳನೀರು, ಹಿಂಗಾರ, ಕಬ್ಬು, ತರಕಾರಿ, ತುಪ್ಪ, ಬಾಳೆಎಲೆ, ಹಣ್ಣು ಹಂಪಲು, ಬಾಳೆ ಗೊನೆ, ಹೂವುಗಳು, ಭತ್ತ, ತುಳಸಿ, ಬಿಲ್ವಪತ್ರೆ ಹೂಮಾಲೆಗಳನ್ನು ಸಂಜೆ 4 ಗಂಟೆಯೊಳಗೆ ನೀಡಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ನಿತಿನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮನುಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ರೈ ಉಪಸ್ಥಿತರಿದ್ದರು.