ಸೋಮವಾರಪೇಟೆ, ಮೇ 8: ಬೆಳೆಗಾರರ ನಡುವೆ ಒಗ್ಗಟ್ಟಿನ ಹೋರಾಟದ ಕೊರತೆಯಿಂದ ಹಲವಷ್ಟು ಬೇಡಿಕೆಗಳು ಈಡೇರದೇ ಇಂದಿಗೂ ಬೆಳೆಗಾರರು ಸಮಸ್ಯೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರರು ಎಲ್ಲಾ ರೀತಿಯಲ್ಲೂ ಒಗ್ಗಟ್ಟು ಕಾಯ್ದುಕೊಳ್ಳಬೇಕಿದೆ ಎಂಬ ಬಗ್ಗೆ ತಾಲೂಕು ಕಾಫಿ, ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಕಾಫಿ, ಕಾಳುಮೆಣಸು ಮತ್ತು ಏಲಕ್ಕಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಭೆಯನ್ನು ಕಾಫಿ ಬೆಳೆಗಾರ ಬಿ.ಎಸ್.ಸುದೀಪ್ ಉದ್ಘಾಟಿಸಿದರು. ಸಭೆಯಲ್ಲಿ ಕೃಷಿಕರು ಹಾಗು ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಕಳೆದ ಮುಂಗಾರಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೋಟ್ಯಾಂತರ ರೂಪಾಯಿ ಬೆಳೆಹಾನಿ ಸಂಭವಿಸಿದ್ದು, 9 ತಿಂಗಳು ಕಳೆದರೂ ಬೆಳೆಗಾರರಿಗೆ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು, ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಬೆಳೆಹಾನಿ ಪರಿಹಾರ ನೀಡುವಂತಾಗಬೇಕು. ಇನ್ನೂ ವಿಳಂಬವಾದಲ್ಲಿ ಸಮಿತಿಯ ವತಿಯಿಂದ ಹೋರಾಟದ ಹಾದಿ ಹಿಡಿಯಬೇಕು ಎಂದು ಅಭಿಪ್ರಾಯಿಸಿದರು.
ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ.ಮುದ್ದಪ್ಪ ಮಾತನಾಡಿ, ಮಳೆಹಾನಿ ಪರಿಹಾರ ನೀಡಲು ವಿಳಂಬ ಮಾಡಿದರೆ ಪ್ರತಿಭಟನೆ ಮಾಡಲಾಗುವದು. ಆಸ್ತಿಗೆ ಹಕ್ಕುಪತ್ರ ಸಿಕ್ಕಿದ್ದರೂ, ಸರ್ವೆ ಇಲಾಖೆಯಿಂದ ಪೋಡಿ ದುರಸ್ತಿ ಆಗಿರುವದಿಲ್ಲ. ಈ ಬಗ್ಗೆ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದರು.
ಕಾಫಿ ಬೆಳೆಗಾರರು ದಿನಂಪ್ರತಿ ಸಮಸ್ಯೆ ಎದುರಿಸುತ್ತಿದ್ದು, ಬೆಳೆಗಾರರಲ್ಲಿ ಒಗ್ಗಟ್ಟು, ಹೋರಾಟದಲ್ಲಿ ಆಸಕ್ತಿ ಇಲ್ಲದಿರುವದರಿಂದ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಬೆಳೆಗಾರ ಲಕ್ಷ್ಮಣ ಹೇಳಿದರು.
ಕಳೆದ ಐದು ವರ್ಷದಲ್ಲಿ ಸೋಮವಾರಪೇಟೆ ತಾಲೂಕಿನಾದ್ಯಂತ ಅಕ್ರಮ-ಸಕ್ರಮ ಸಮಿತಿಯಡಿ ಬೆರಳೆಣಿಕೆ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಸಾವಿರಾರು ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಕೊಳೆಯುತ್ತಿವೆ. ಬಡ ರೈತರನ್ನು ಸರ್ಕಾರಿ ಇಲಾಖೆಯ ಕೆಲ ಲಂಚಕೋರರು ಶೋಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಉಗ್ರ ಹೋರಾಟವೊಂದೇ ಪರಿಹಾರ ಎಂದು ಅಭಿಮತ ವ್ಯಕ್ತಪಡಿಸಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಲಿಂಗೇರಿ ರಾಜೇಶ್, ಕಾರ್ಯದರ್ಶಿ ಡಿ.ಎಸ್.ಚಂಗಪ್ಪ, ಕಾಫಿ ಬೆಳೆಗಾರರಾದ ಬಗ್ಗನ ತಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.