ಸೋಮವಾರಪೇಟೆ, ಮೇ 7: ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ವಾಗಿರುವ ಬಗ್ಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಳ್ಳದೇ ಅಭಿಯಂತರರು ಗುತ್ತಿಗೆದಾರ ರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರು ಲೋಕೋಪಯೋಗಿ ಇಲಾಖಾ ಅಭಿಯಂತರರನ್ನು ತರಾಟೆ ಗೆತ್ತಿಕೊಂಡರು.
ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಪ್ರತಿಭಟನೆಗೆ ಉದ್ದೇಶಿಸಿದ್ದ ಸಾರ್ವಜನಿಕರು, ಪೊಲೀಸರ ಅನುಮತಿ ನಿರಾಕರಣೆ ಹಿನ್ನೆಲೆ, ಸಾಂಕೇತಿಕ ಪ್ರತಿಭಟನೆ ನಡೆಸಿ, ಇಲಾಖೆಯ ಇಂಜಿನಿಯರ್‍ಗಳನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ, 2017-18ನೇ ಸಾಲಿನ ಕೊಡಗು ಪ್ಯಾಕೇಜ್‍ನಲ್ಲಿ ನಿರ್ಮಿಸಿ ರುವ ಅನೇಕ ರಸ್ತೆ ಕಾಮಗಾರಿಗಳು ಕಳಪೆಯಾಗಿದ್ದು, ಕೆಲವು ಕಾಮಗಾರಿ ಗಳು ಅಳತೆ ಪುಸ್ತಕದಲ್ಲಿ ದಾಖಲಿಸಿ ದಂತೆ ನಿರ್ವಹಿಸದೇ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಲೋಕೋಪಯೋಗಿ ಸಚಿವರು ಜುಲೈ 27ರಂದು ತನಿಖೆ ನಡೆಸಿ ಕ್ರಮ ತೆಗೆದು ಕೊಳ್ಳುವಂತೆ ಆದೇಶ ನೀಡಿದ್ದರೂ ಯಾವದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಆರೋಪಿಸಿದರು.
ಆಲೇಕಟ್ಟೆ ರಸ್ತೆಯ ಬಳಿ ಕಳಪೆ ಕಾಮಗಾರಿ ಹಿನ್ನೆಲೆ ತಡೆಗೋಡೆ ಕುಸಿದು ಬಿದ್ದಿದ್ದರೂ ಇಂದಿಗೂ ಮರು ನಿರ್ಮಾಣ ಮಾಡಿಲ್ಲ. ಅದೇ ಗುತ್ತಿಗೆದಾರರಿಗೆ ಈಗಲೂ ಬೇರೆ ಬೇರೆ ಕಾಮಗಾರಿ ನೀಡಲಾಗುತ್ತಿದೆ. ಕಳಪೆ ಕಾಮಗಾರಿಯ ಗುತ್ತಿಗೆದಾರರನ್ನು ಅಭಿಯಂತರರೇ ಬೆಂಬಲಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರು.
ಗೌಡಳ್ಳಿ, ಬೇಳೂರು, ಕೂಡಿಗೆ ಸೇರಿದಂತೆ ಹಲವು ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಕ್ರಿಯಾಯೋಜನೆ ಯಂತೆ ಕಾಮಗಾರಿ ನಡೆಸಿಲ್ಲ. ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದೀಣೆಮನೆಕೊಪ್ಪ ದಲ್ಲಿ 75 ಮೀಟರ್ ರಸ್ತೆ ಕಾಮಗಾರಿ ನಡೆಸದೇ ಗುತ್ತಿಗೆದಾರ ಬಿಲ್ ಹೊಂದಿಕೊಂಡಿದ್ದಾರೆ. ಇದರೊಂದಿಗೆ ಕೊರ್ಲಳ್ಳಿ 150 ಮೀಟರ್ ಬದಲಿಗೆ 120 ಮೀಟರ್ ಮಾತ್ರ ರಸ್ತೆ ಮಾಡ ಲಾಗಿದೆ. ಕನ್ನಳ್ಳಿ, ಕಂಬಳ್ಳಿ, ಬಜೆಗುಂಡಿ ಯಲ್ಲೂ ಇದೇ ರೀತಿಯಾಗಿದೆ. ಬೆಂಡೆಬೆಟ್ಟ ಕಾಲೋನಿಯಲ್ಲಿ 234 ಮೀಟರ್ ಕಾಂಕ್ರೀಟ್ ಚರಂಡಿ ಮಾಡದೇ ಬಿಲ್ ಹೊಂದಿಕೊಳ್ಳ ಲಾಗಿದೆ. ಕೊಟ್ಟಗೇರಿ ಪೈಸಾರಿಯಲ್ಲಿ 124 ಮೀಟರ್ ಬದಲಿಗೆ 100 ಮೀಟರ್ ರಸ್ತೆ ಆಗಿದೆ. ಚಿಕ್ಕತ್ತೂರಿನಲ್ಲಿ 190 ಮೀಟರ್ ಚರಂಡಿ ಮಾಡದೇ ಇದ್ದರೂ ಗುತ್ತಿಗೆದಾರರಿಗೆ ಹಣ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧೀಕ್ಷಕ ಅಭಿಯಂತರರು ತಂಡವನ್ನು ರಚಿಸಿದ್ದು, ಆ ತಂಡದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಧಿಕಾರಿ ಜತೆ ಮಾತಿನ ಚಕಮಕಿ ನಡೆಯಿತು.
ಅಂತಿಮವಾಗಿ ತಾ. 23ರ ಒಳಗೆ ದೂರುಗಳು ಕೇಳಿಬಂದಿರುವ 18 ಕಾಮಗಾರಿಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವದು. ಇದರೊಂದಿಗೆ ತಡೆಗೋಡೆ ನಿರ್ಮಾಣಕ್ಕೂ ಒತ್ತಡ ಹೇರುವದಾಗಿ ಅಧಿಕಾರಿ ಭರವಸೆ ನೀಡಿದ ನಂತರ ಸಾರ್ವಜನಿಕರು ಕಚೇರಿಯಿಂದ ತೆರಳಿದರು.
ಪ್ರತಿಭಟನೆಯಲ್ಲಿ ಹರಗ ಪ್ರಕಾಶ್, ಬಳಗುಂದ ರವಿ, ಮಚ್ಚಂಡ ಪ್ರಕಾಶ್, ಕಿರಗಂದೂರು ಚಿದಾನಂದ್, ಬೀದಳ್ಳಿ ತಮ್ಮಯ್ಯ, ತಲ್ತರೆಶೆಟ್ಟಳ್ಳಿ ಬಿ.ಎಂ. ವಸಂತ್, ಟಿ.ಈ. ಸುರೇಶ್, ಕೃಷ್ಣಪ್ಪ, ಮಂಜು ಸೇರಿದಂತೆ ಇತರರು ಭಾಗವಹಿಸಿದ್ದರು. ಅಭಿಯಂತರರಾದ ಪೀಟರ್, ವಿಜಯಕುಮಾರ್ ಉಪಸ್ಥಿತರಿದ್ದರು.