ಕೂಡಿಗೆ, ಮೇ 7 : ಕರ್ನಾಟಕ ಸರಕಾರದಿಂದ ಸುಮಾರು ರೂ. 1.88 ಕೋಟಿ ಹಣ ವ್ಯಯಿಸುವ ಮೂಲಕ ಕರ್ನಾಟಕ ರಾಜ್ಯದಲ್ಲೇ ಪ್ರಥಮ ವೆಂಬಂತೆ ರೂಪಿಸಿರುವ ಮೇಕೆ ಹಾಲು ಉತ್ಪಾದನಾ ಘಟಕವೊಂದು ನಿರರ್ಥಕಗೊಳ್ಳುವ ಮುನ್ಸೂಚನೆ ಕಂಡುಬಂದಿದೆ. ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿ 112 ಎಕರೆ ಭೂಮಿಯಲ್ಲಿ ಹಿಂದೆ ಪಶು ಸಂಗೋಪನಾ ಸಚಿವರಾಗಿದ್ದ ಎ. ಮಂಜು ಅವರ ಅಧಿಕಾರ ಅವಧಿಯಲ್ಲಿ ಭೂಮಿಪೂಜೆಯೊಂದಿಗೆ ಕಾಮಗಾರಿ ಚಾಲನೆಗೊಂಡಿತ್ತು.
‘ಶಕ್ತಿ’ಗೆ ಲಭಿಸಿರುವ ಮಾಹಿತಿ ಯಂತೆ ಕಾಡಂಚಿನಲ್ಲಿರುವ ಈ ಸ್ಥಳದಲ್ಲಿ ಆಡು (ಮೇಕೆ) ಸಾಕಾಣಿಕೆ ಕಷ್ಟಸಾಧ್ಯವೆಂಬ ಮಾತು ರೈತರ ದ್ದಾಗಿದ್ದು, ಈ ಪ್ರದೇಶಗಳಲ್ಲಿ ಚಿರತೆ ಇತ್ಯಾದಿ ವನ್ಯಮೃಗಗಳ ಹಾವಳಿಯ ತಾಣವಾಗಿದೆ. ಹೀಗಾಗಿ ಎಷ್ಟೇ ಸುರಕ್ಷಾ ಕ್ರಮಕೈಗೊಂಡರೂ, ಮೇಕೆ ಸಾಕಾಣಿಕೆ ದೊಡ್ಡಿಯೊಳಗೆ ಮೃಗಗಳು ನುಗ್ಗಿ ಸುಲಭವಾಗಿ ಆಹಾರಕ್ಕಾಗಿ ಹೊತ್ತೊಯ್ಯುವ ಅಪಾಯ ಎದುರಾಗಲಿದೆ.
ಇನ್ನೊಂದೆಡೆ ಕೂಡಿಗೆ ಸುತ್ತಮುತ್ತ ಹಾಗೂ ಜಿಲ್ಲೆಯ ರೈತವರ್ಗ ಅಷ್ಟಾಗಿ ಮೇಕೆ ಹಾಲು ಬಳಸುತ್ತಿಲ್ಲ. ಕೂಡಿಗೆ ಹಾಲಿನ ಘಟಕದಲ್ಲಿ ಜಾನುವಾರು (ಹಸು) ಹಾಲು ಹೊರತು ಮೇಕೆ ಹಾಲನ್ನು ಪಾಶ್ಚೀಕರಿಸುವ ವ್ಯವಸ್ಥೆ ಇಲ್ಲ. ಆ ಸಲುವಾಗಿಯೇ ಪ್ರತ್ಯೇಕ ಘಟಕ ಸ್ಥಾಪಿಸಿದರೂ ಅಷ್ಟಾಗಿ ಪ್ರಯೋಜನ ಲಭಿಸದು ಎನ್ನುವದು ಅನುಭವಿಗಳ ಮಾತು.
(ಮೊದಲ ಪುಟದಿಂದ) ಕಾರಣ ಮೇಕೆ ಹಾಲು ದುಬಾರಿ. ಒಂದು ಲೀಟರ್ಗೆ ನೂರಾರು ರೂ. ವೆಚ್ಚವಾಗಲಿದೆ.
ಬದಲಾಗಿ ಇಂತಹ ಹಾಲು ಶ್ರೀಮಂತ ವರ್ಗ ಅಥವಾ ಅರಬ್ ರಾಷ್ಟ್ರಗಳಲ್ಲಿ ಲೀಟರ್ವೊಂದಕ್ಕೆ ರೂ. 250 ರಿಂದ 300 ತೆತ್ತು ಬಳಸುವ ವಾಡಿಕೆ ಇದೆಯಂತೆ. ಪರಿಣಾಮ ಕೂಡಿಗೆಯ ಮೇಕೆ ಹಾಲು ಘಟಕದಲ್ಲಿ ನಿರೀಕ್ಷಿತ ಉತ್ಪಾದನೆ, ಬಳಕೆ, ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಕೊಡಗಿನ ಮಳೆಗಾಲ ಇತ್ಯಾದಿ ಹವಾಮಾನದ ಏರಿಳಿತ ನಡುವೆ ಮೇಕೆಗಳ ಸಾಕಾಣೆ ಕೂಡ ಕಷ್ಟಸಾಧ್ಯವೆಂಬ ಅಭಿಪ್ರಾಯವಿದೆ.
ಈ ಎಲ್ಲ ಸವಾಲುಗಳ ನಡುವೆ ಸರಕಾರದ ಯೋಜನೆಯೊಂದು ಅನುಷ್ಠಾನಗೊಳ್ಳುವ ಮುನ್ನ ಪ್ರಾರಂಭಿಕ ಹಂತದ ಯೋಜನೆ ಕುಂಟತೊಡಗಿದ್ದು, ಭವಿಷ್ಯದಲ್ಲಿ ಹೇಗಾದೀತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕರ್ನಾಟಕ ಸರ್ಕಾರದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 11.2 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣ ಘಟಕದ ಕಾಮಗಾರಿಯು ಸಾಗುತ್ತಿದ್ದು, ಕಟ್ಟಡ ಕಾಮಗಾರಿಯೂ ಇದೀಗ ಶೇ.80 ರಷ್ಟು ಮುಗಿದಿದೆ. ಇನ್ನೂ ಕಟ್ಟಡ ಕಾಮಗಾರಿ ಶೇ.20 ರಷ್ಟು ಆಗಬೇಕಿದ್ದು, ಅದರ ಜೊತೆಗೆ ಘಟಕಕ್ಕೆ ಬೇಕಾಗುವ ಯಂತ್ರೋಕರಣ ಮತ್ತು ಮೇಕೆ ಹಾಲು ಸಂಸ್ಕರಣಕ್ಕೆ ಬೇಕಾಗುವ ಶಿಥಿಲಿಕರಣ ಕೇಂದ್ರ ಹಾಗೂ ಮೇಕೆಗೆ ಹುಲ್ಲು ಸಂಗ್ರಹಣ ಘಟಕ, ಮೇಕೆ ಸಾಕಾಣಿಕಾ ಕಾರ್ಯವು ಪಶುಪಾಲನಾ ಇಲಾಖೆಯ ವತಿಯಿಂದ ಆಗಬೇಕಿದೆ. ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದ್ದರೂ, ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಮುಂದುವರಿದಿದೆ.
ರಾಜ್ಯ ಸರ್ಕಾರದ ಈ ಯೋಜನೆಯು 5 ಕೋಟಿ ರೂ. ವೆಚ್ಚದ್ದಾಗಿದ್ದು, ಕಾಮಗಾರಿಗೆ ಪಶು ಸಂಗೋಪನ ಇಲಾಖೆಯಿಂದ 3 ಕೋಟಿ ರೂ. ಬಿಡುಗಡೆಯಾಗಿದೆ.
ಮೇಕೆ ಹಾಲು ಉತ್ಪಾದನೆಯು ರಾಜ್ಯದಲ್ಲಿ ಬೀದರ್, ಮಂಗಳೂರು ಕಡೆಗಳಲ್ಲಿ ಖಾಸಗಿಯವರು ನಡೆಸುತ್ತಿದ್ದು, ಪ್ರಗತಿಯಲ್ಲಿ ಮುನ್ನಡೆದು ಆ ಭಾಗದ ಜನರಿಗೆ ಪ್ರಯೋಜನಾವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಿಲ್ಲೆಯ ಬ್ಯಾಡಗೊಟ್ಟದಲ್ಲಿ ಘಟಕವನ್ನು ಪ್ರಾರಂಭಿಸಲು ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ ಕಾಮಗಾರಿಯು ಸಾಗುತ್ತಿದೆ.
ಮುಂದಿನ ದಿನಗಳಲ್ಲಿ ಮೇಕೆಗಳಿಗೆ ಆಧುನೀಕ ರೀತಿಯ ಪಂಜರ ಹಾಗೂ ಹುಲ್ಲುಗಾವಲನ್ನು ನಿರ್ಮಿಸಲು ಈಗಾಗಲೇ ಗುರುತಿಸಲಾಗಿರುವ 112 ಎಕರೆ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಯೊಳಗೆ 50 ಜಾತಿಯ ಹೈಬ್ರಿಡ್ ಹುಲ್ಲಿನ ತಳಿಗಳನ್ನು ಬೆಳೆಸುವ ಯೋಜನೆಯಿದೆ. ಅಲ್ಲದೆ ರಾಜ್ಯದಲ್ಲಿನ ಬರಗಾಲಪೀಡಿತ ಪ್ರದೇಶಗಳಿಗೆ ಇಲ್ಲಿಂದ ಬೆಳೆಸಲಾದ ಹುಲ್ಲನ್ನು ಕಳುಹಿಸುವ ಯೋಜನೆಯು ಇದೆ. ಇದರ ಜೊತೆಯಲ್ಲಿ ಮಲೆನಾಡು ಗಿಡ್ಡ ರಾಸುಗಳು ಮತ್ತು ಸ್ಥಳೀಯ ಹಸುಗಳನ್ನು ಪ್ರೋತ್ಸಾಹಿಸುವ ಯೋಜನೆಯು ಇದಾಗಿದೆ. ಪಶುಸಂಗೋಪನ ಇಲಾಖೆಯ ರಾಜ್ಯ ಉಪನಿರ್ದೇಶಕರು ಇದರ ಉಸ್ತುವಾರಿಯನ್ನು ವಹಿಸಿರುತ್ತಾರೆ.
ಈವರೆಗೆ ಬಿಡುಗಡೆಯಾಗಿರುವ 1.88ಲಕ್ಷ ರೂ ಹಣದಲ್ಲಿ ಇದೀಗ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಈ ಕೇಂದ್ರದಲ್ಲಿ 500 ಮೇಕೆ ಸಾಕಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ಮೇಕೆ ಹಾಲು ಸಂಗ್ರಹದ ಶಿಥಿಲೀಕರಣ ಘಟಕ ಕಾಮಗಾರಿ ನಡೆಯಬೇಕಾಗಿದೆ. ರಾಜ್ಯದಲ್ಲೇ ಪ್ರಪ್ರಥಮವಾಗಿರುವ ಈ ಯೋಜನೆಗೆ ಪಶುಪಾಲನ ಇಲಾಖೆಯ ಮುಖ್ಯಕಾರ್ಯದರ್ಶಿಗಳ ಮೂಲಕ ಸಭೆ ನಡೆದು ಸರ್ಕಾರದಿಂದ ಅನುಮತಿ ಪಡೆದು ಮೇಕೆಗಳನ್ನು ರಾಜ್ಯ, ಹೊರರಾಜ್ಯ ಮತ್ತು ಹೊರ ದೇಶಗಳಿಂದ ತರಿಸಿಕೊಂಡು ಅವುಗಳ ಸಾಕಾಣಿಕೆ ಮತ್ತು ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ನಡೆದಿದೆ.
ಈ ಕೇಂದ್ರ ಕೂಡಿಗೆಯ ಜರ್ಸಿತಳಿ ಸಂವರ್ಧನಾ ಕೇಂದ್ರದ ಅಧೀನದಲ್ಲಿದ್ದು, ಇದರ ಜವಾಬ್ದಾರಿಯನ್ನು ಜರ್ಸಿತಳಿ ಸಂವರ್ಧನಾ ಕೇಂದ್ರವು ವಹಿಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಜರ್ಸಿತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕರನ್ನು ಸುದ್ದಿಗಾರರು ಮಾತನಾಡಿಸಿದಾಗ, ಕೇಂದ್ರಕ್ಕೆ ಬೇಕಾಗುವ ಹೆಚ್ಚು ಮೇಕೆಗಳು ಮತ್ತು ಸಾಕಾಣಿಕೆ ಮಾಡಲು ಬರಿಸಬಹುದಾದ ವೆಚ್ಚ ಹಾಗೂ ಬರುವ ಹಾಲಿನ ಉತ್ಪಾದನೆ ಮತ್ತು ಅದರ ಸದ್ಬಳಕೆಯ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮೇಲಾಧಿಕಾರಿಗಳ ಆದೇಶದನ್ವಯ ಕಾರ್ಯಪ್ರವೃತ್ತರಾಗಲು ಟೆಂಡರ್ ಪ್ರಕ್ರಿಯೆ ನಡೆಸಲಾಗುವದು. ಇದಕ್ಕೆ ಬೇಕಾಗುವ ಎಲ್ಲಾ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಇಲಾಖೆಯ ಮೂಲಕ ಸಲ್ಲಿಸÀಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಪ್ರಬಾರ ಉಪ ನಿರ್ದೇಶಕರಾಗಿ ಯೋಜನೆಯ ಹೊಣೆಗಾರಿಕೆ ನೋಡಿಕೊಳ್ಳುತ್ತಿರುವ ಡಾ. ಚಿಟ್ಟಿಯಪ್ಪ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಹಂತ ಹಂತವಾಗಿ ಕೆಲಸ ಪ್ರಗತಿಯಲ್ಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ