*ಗೋಣಿಕೊಪ್ಪಲು, ಮೇ 7: ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರೂ ಅಸಮರ್ಪಕ ಮೌಲ್ಯಮಾಪನದಿಂದ ವಿದ್ಯಾರ್ಥಿನಿ ಯೊಬ್ಬರು ಅನುತ್ತೀರ್ಣಗೊಂಡಿದ್ದ ಅಚಾತುರ್ಯ ಇದೀಗ ಬೆಳಕಿಗೆ ಬಂದಿದೆ.ಇಲ್ಲಿನ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ.ಎ. ಶೀತಲ್ ಅವರಿಗೆ ಫಲಿತಾಂಶ ಪ್ರಕಟಗೊಂಡಾಗ; ಜೀವಶಾಸ್ತ್ರ ವಿಷಯದಲ್ಲಿ ಕೇವಲ 16 ಅಂಕಗಳು ಬಂದಿದ್ದವು. ಉನ್ನತ ಶ್ರೇಣಿಯನ್ನು ನಿರೀಕ್ಷೆ ಮಾಡಿದ್ದ ಆಕೆಗೆ ಈ ಫಲಿತಾಂಶ ತೀವ್ರ ಆಘಾತ ನೀಡಿತ್ತು. ಇಂಗ್ಲಿಷ್ 87, ಹಿಂದಿಯಲ್ಲಿ 93, ಭೌತಶಾಸ್ತ್ರ 86, ರಸಾಯನಶಾಸ್ತ್ರ 88, ಗಣಿತದಲ್ಲಿ 98 ಅಂಕಗಳು ಲಭಿಸಿದ್ದವು. ಆದರೆ ಜೀವಶಾಸ್ತ್ರದಿಂದ ತೀವ್ರ ನೊಂದುಕೊಂಡ ವಿದ್ಯಾರ್ಥಿನಿ, ಈ ಉತ್ತರ ಪತ್ರಿಕೆಗೆ ಶುಲ್ಕ ಕಟ್ಟಿ ತರಿಸಿಕೊಂಡಿದ್ದರು. ಬಳಿಕ ಉಪನ್ಯಾಸಕರ ಮಾರ್ಗದರ್ಶನದಂತೆ ಮರುಮೌಲ್ಯಮಾಪನಕ್ಕೆ ಸಲ್ಲಿಸಿದ್ದರು. ಇದೀಗ ಜೀವಶಾಸ್ತ್ರದಲ್ಲಿ 16 ಅಂಕಕ್ಕೆ ಬದಲು 46 ಅಂಕಗಳು ಲಭಿಸಿವೆ. ಮೌಲ್ಯ ಮಾಪಕರು ಅಂಕಗಳನ್ನು ನಮೂದಿಸುವಾಗ 46ಕ್ಕೆ ಬದಲು 16 ಎಂದು ಉತ್ತರ ಪತ್ರಿಕೆಯ ಮುಖ ಪುಟದಲ್ಲಿ ನಮೂದಾ ಗಿರುವದೇ ಈ ಪ್ರಮಾದಕ್ಕೆ ಕಾರಣ.