ಗೋಣಿಕೊಪ್ಪ ವರದಿ, ಮೇ 6: ಅಖಿಲ ಅಮ್ಮಕೊಡವ ಸಮಾಜ ಹಾಗೂ ಬಾನಂಡ ಕುಟುಂಬ ಸಹಯೋಗದಲ್ಲಿ ಅಮ್ಮ ಕೊಡವ ಜನಾಂಗಗಳ ನಡುವೆ ಮಾಯಮುಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ಮೈದಾನದಲ್ಲಿ ನಡೆದ ಬಾನಂಡ ಕ್ರಿಕೆಟ್ ಟ್ರೋಫಿಯನ್ನು ಹೆಮ್ಮಚ್ಚಿಮನೆ ಕುಟುಂಬ ಮುಡಿಗೇರಿಸಿಕೊಂಡಿತು. ಫೈನಲ್‍ನಲ್ಲಿ ಸೋಲನುಭವಿಸಿದ ಅಮ್ಮತ್ತೀರ ಕುಟುಂಬ ರನ್ನರ್ ಅಪ್ ಸ್ಥಾನ ಅಲಂಕರಿಸಿತು.ಭಾನುವಾರ ನಡೆದ ಫೈನಲ್ ಮುಖಾಮುಖಿಯಲ್ಲಿ ಹೆಮ್ಮಚ್ಚಿಮನೆ ತಂಡವು ಅಮ್ಮತ್ತೀರ ತಂಡವನ್ನು 5 ವಿಕೆಟ್‍ಗಳಿಂದ ಮಣಿಸಿ ಕಪ್ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಅಮ್ಮತ್ತೀರ ಹೆಮ್ಮಚ್ಚಿಮನೆ ತಂಡದ ಉತ್ತಮ ಬೌಲಿಂಗ್ ದಾಳಿಗೆ 9 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತು. ನಂತರ ಬ್ಯಾಟಿಂಗ್‍ಗೆ ಬಂದ ಹೆಮ್ಮಚ್ಚಿಮನೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೊನೆಯ 3 ಓವರ್‍ಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ 6 ಚೆಂಡು ಬಾಕಿ ಉಳಿದಿರುವಂತೆ 63 ರನ್ ಗಳಿಸಿ ಗೆಲವಿನ ನಗೆ ಬೀರಿತು.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಬಲ್ಯಂಡ ತಂಡವು ಮನ್ನಕಮನೆ ವಿರುದ್ಧ 31 ರನ್‍ಗಳಿಂದ ಗೆದ್ದು ಬೀಗಿತು. ಬಲ್ಯಂಡ 3 ವಿಕೆಟ್‍ಗೆ 81 ರನ್ ಪೇರಿಸಿತು. ಮನ್ನಕಮನೆ 7 ವಿಕೆಟ್ ಕಳೆದುಕೊಂಡು 52 ರನ್ ಮಾತ್ರ ಗಳಿಸಿತು.

ಸೆಮಿ ಫೈನಲ್‍ನಲ್ಲಿ ಅಮ್ಮತ್ತೀರ ತಂಡದ ಆಟಗಾರ ದೀಕ್ಷಿತ್ ಬಾರಿಸಿದ 56 ರನ್‍ಗಳ ಕಾಣಿಕೆಯಿಂದ ಅಮ್ಮತ್ತಿರ ತಂಡವು ಆಂಡಮಾಡ ವಿರುದ್ಧ 24 ರನ್‍ಗಳ ಗೆಲುವು ಪಡೆಯಿತು. ಅಮ್ಮತ್ತೀರ 2 ವಿಕೆಟ್ ಕಳೆದುಕೊಂಡು 114 ರನ್ ಪೇರಿಸಿತು. ಆಂಡಮಾಡ 5 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿ ಸೋಲೊಪ್ಪಿಕೊಂಡಿತು.

2 ನೇ ಸೆಮಿಯಲ್ಲಿ ಹೆಮ್ಮಚ್ಚಿಮನೆ ಕುಟುಂಬ ತಂಡವು ಬಲ್ಯಂಡ ವಿರುದ್ಧ 4 ವಿಕೆಟ್ ಗೆಲವು ಪಡೆಯಿತು. ಬಲ್ಯಂಡ 9 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತು. ಹೆಮ್ಮಚ್ಚಿಮನೆ 6 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿ ಗುರಿ ಸಾಧನೆ ಮಾಡಿತು.

(ಮೊದಲ ಪುಟದಿಂದ)

ಉತ್ತಮ ಸಾಧಕರು

ಟೂರ್ನಿಯಲ್ಲಿ 112 ರನ್ ಹಾಗೂ 5 ವಿಕೆಟ್ ಪಡೆದ ಅಮ್ಮತ್ತೀರ ದೀಕ್ಷಿತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯ ಪುರುಷನಾಗಿ ಹೆಮ್ಮಚ್ಚಿಮನೆ ಸುಧೀರ್, ಟೂರ್ನಿಯಲ್ಲಿ 2 ಅರ್ಧಶತಕ ಸಾಧನೆ ಮೂಲಕ 122 ರನ್‍ಗಳಿಸಿದ ಗುಂಬೀರ ಆದರ್ಶ್ ಬೆಸ್ಟ್ ಬ್ಯಾಟ್ಸ್‍ಮನ್ ಬಹುಮಾನ ಪಡೆದುಕೊಂಡರು. 8 ವಿಕೆಟ್ ಸಾಧನೆ ಮಾಡಿದ ಹೆಮ್ಮಚ್ಚಿಮನೆ ಸಾಮ್ರಾಟ್ ಬೆಸ್ಟ್ ಬೌಲರ್, ಕಿರಿಯ ಕ್ರಿಕೆಟಿಗನಾಗಿ ಆಟವಾಡಿದ ಹೆಮ್ಮಚ್ಚಿಮನೆ ಯಶ್‍ಗೆ ಉತ್ಸಾಹಿ ಆಟಗಾರ ಪ್ರಶಸ್ತಿ, ಪಂದ್ಯವೊಂದರಲ್ಲಿ 87 ರನ್ ಬಾರಿಸಿದ ಬಾನಂಡ ಗಗನ್‍ಗೆ ಸ್ಪೂರ್ತಿದಾಯಕ ಬ್ಯಾಟ್ಸ್‍ಮನ್ ಪ್ರಶಸ್ತಿ, ಹ್ಯಾಟ್ರಿಕ್ ವಿಕೆಟ್ ಸಾಧಕನಾಗಿ ಪುತ್ತಾಮನೆ ಸ್ಮರಣ್ ಪ್ರಶಸ್ತಿ ಪಡೆದುಕೊಂಡರು.

ತಾಂತ್ರಿಕ ವರ್ಗದಲ್ಲಿ ಗುಂಬೀರ ತೇಜಸ್, ಅಚ್ಚಿಯಂಡ ಪವನ್, ಮನೋಜ್, ಕ್ರಿಷಿರಾಜ್, ದರ್ಶನ್, ಅಭಿಲಾಶ್, ಅಖಿಲೇಶ್, ವರುಣ್, ವಿವೇಕ್, ದಿನು, ಅನಿಲ್, ಸುನಿಲ್, ಪ್ರಭು, ಬಾಲಕೃಷ್ಣ, ಪ್ರತಾಪ್, ಸುದೀರ್, ಚಿದು, ಸುನಿಲ್ ಕಾರ್ಯನಿರ್ವಹಿಸಿದರು.

ಮುಂದಿನ ವರ್ಷ ಹೆಮ್ಮಚ್ಚಿಮನೆ ಕಪ್

ಮುಂದಿನ ವರ್ಷ ನಡೆಯುವ 6 ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ಕಪ್ ಸಾರಥ್ಯವನ್ನು ಹೆಮ್ಮಚ್ಚಿಮನೆ ಕುಟುಂಬ ಮುನ್ನಡೆಸುವ ಬಗ್ಗೆ ಘೋಷಿಸಲಾಯಿತು.

ಅಂತರ್ರಾಷ್ಟ್ರೀಯ ಕರಾಟೆ ಪಟು ಅರುಣ್ ಮಾಚಯ್ಯ ಮಾತನಾಡಿ, ಕೊಡವ ಭಾಷಿಗ ಜನಾಂಗದಲ್ಲಿ ಕೊಡವ, ಅಮ್ಮಕೊಡವ ಹಾಗೂ ಹೆಗ್ಗಡೆ ಸಮಾಜ ಹೆಚ್ಚು ಬೆಳೆವಣಿಗೆಯಲ್ಲಿದ್ದಾರೆ. ಈ ಮೂರು ಜನಾಂಗದವರು ಉಳಿದಿರುವ ಕೊಡವ ಭಾಷಿಗ ಜನಾಂಗಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಬೇಕಿದೆ ಎಂದರು.

ಕಮಟೆ ಮಹಾದೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಣ್ಣುವಂಡ ರಮೇಶ್ ಮಾತನಾಡಿ, ಕೊಡವ ಭಾಷಿಗರು ಒಂದಾಗಿ ನಮ್ಮ ಸಂಸ್ಕøತಿಯನ್ನು ಪೋಷಿಸುವಲ್ಲಿ ಕಾಳಜಿ ವಹಿಸಬೇಕು. ಸಂಸ್ಖøತಿ ನಾಶದ ಮೂಲಕ ಜನಾಂಗದ ಮೂಲ ನಾಶವಾಗುವದನ್ನು ತಡೆಯಬೇಕಿದೆ ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ಸಂಸ್ಕøತಿ ರಕ್ಷಣೆಗೆ ಕೊಡವ ಭಾಷಿಗರು ಮುಂದಾಗಬೇಕು ಎಂದರು.

ಈ ಸಂದರ್ಭ ಅಖಿಲ ಅಮ್ಮ ಕೊಡವ ಸಮಾಜ ಗೌರವ ಅಧ್ಯಕ್ಷ ಬಾನಂಡ ಪ್ರಥ್ಯು, ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಅಮ್ಮಕೊಡವ ಸಮಾಜ ಕಾರ್ಯದರ್ಶಿ ಪುತ್ತಾಮನೆ ಅನಿಲ್, ಬಾನಂಡ ಕುಟುಂಬ ಅಧ್ಯಕ್ಷ ಬಾನಂಡ ಅಪ್ಪಣಮಯ್ಯ, ತಾ. ಪಂ. ಸದಸ್ಯೆ ನೆರಿಯಂಡಮ್ಮಂಡ ಉಮಾಪ್ರಭು, ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಉಮೇಶ್ ಕೇಚಮಯ್ಯ, ಮನ್ನಕಮನೆ ಬಾಲಕೃಷ್ಣ, ಆಪಟ್ಟೀರ ಟಾಟು ಮೊಣ್ಣಪ್ಪ, ಕಂಗಳತ್ತ್‍ನಾಡ್ ಅಮ್ಮಕೊಡವ ಸಂಘ ಅಧ್ಯಕ್ಷ ಬಲ್ಯಂಡ ದಿನು, ಕೊಡವ ಅಕಾಡೆಮಿ ಮಾಜಿ ಸದಸ್ಯೆ ಕಸ್ತೂರಿ ಗೋವಿಂದಮಯ್ಯ ಉಪಸ್ಥಿತರಿದ್ದರು.

ಬಾನಂಡ ಆಶಾ ಸುದನ್, ಬಾನಂಡ ಮಲಾ ಪ್ರಥ್ಯು ಹಾಗೂ ಅನಿತಾ ಶಿವು, ಪ್ರಭು ನಿರೂಪಿಸಿದರು. -ಸುದ್ದಿಪುತ್ರ