ಮಡಿಕೇರಿ, ಮೇ 6: ದೇಶ-ವಿದೇಶದಲ್ಲಿ ಆಗುತ್ತಿರುವ ಭಯೋತ್ಪಾದನೆ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಅಮಾನವೀಯ ಕೃತ್ಯಗಳನ್ನು ಖಂಡಿಸಿ ‘ವಿಶ್ವ ಶಾಂತಿಗಾಗಿ ಮಾನವ ಯಾತ್ರೆ’ ಎಂಬ ಧ್ಯೇಯ ವಾಖ್ಯದಡಿ ಇಂದು ಸಂಜೆ ಮಡಿಕೇರಿಯಲ್ಲಿ ಮೌನ ಮೆರವಣಿಗೆ ಹಾಗೂ ಸರ್ವಧರ್ಮ ಪ್ರಾರ್ಥನೆ ನೆರವೇರಿತು.
ಮಡಿಕೇರಿ ನಗರ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸರ್ವಧರ್ಮದ ಸಮಾನಮನಸ್ಕರು ಇಂದಿರಾಗಾಂಧಿ ವೃತ್ತದಲ್ಲಿ ಸಮಾವೇಶಗೊಂಡು ನಗರದ ರಾಜ ಬೀದಿಯಲ್ಲಿ ಮೌನ ಮೆರವಣಿಗೆ ನಡೆಸಿದರು.‘ವಿಶ್ವಶಾಂತಿಗಾಗಿ ಮಾನವ ಯಾತ್ರೆ’, ‘ಮಾನವ ಕುಲಂತಾನೊಂದೇ ವಲಂ’, ‘ಹುತಾತ್ಮರಿಗೆ ಶ್ರದ್ಧಾಂಜಲಿ-ಭಯೋತ್ಪಾದನೆಗೆ ಧಿಕ್ಕಾರ’... ಎಂಬ ಘೋಷಣೆಗಳನ್ನು ಹೊತ್ತಿದ್ದ ಬ್ಯಾನರ್ನೊಂದಿಗೆ ಮೆರವಣಿಗೆಯಲ್ಲಿ ಸಾಗಿ ಗಾಂಧಿ ಪ್ರತಿಮೆ ಎದುರು ಜಮಾವಣೆಗೊಂಡರು. ನೆರೆದಿದ್ದ ಸರ್ವರನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಮಾಜ ಸೇವಕ ಕೆ.ಟಿ. ಬೇಬಿ ಮ್ಯಾಥ್ಯೂ ಅವರು ಕಾರ್ಯಕ್ರಮದ ಧ್ಯೇಯೊದ್ದೇಶಗಳ (ಮೊದಲ ಪುಟದಿಂದ) ಬಗ್ಗೆ ವಿವರಿಸಿದರು. ನಂತರ ಕ್ರಿಶ್ಚಿಯನ್ ಧರ್ಮಗುರುಗಳಾದ ನವೀನ್, ಶಿಬು, ಅಮೃತ್ರಾಜ್, ಮುಸ್ಲಿಂ ಧರ್ಮಗುರು ಹಕೀಂ ಸಾಬ್, ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರುಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು.
ಎಲ್ಲರೂ ಜಾತಿ, ಮತ, ಬೇಧ ಮರೆತು ಪರಸ್ಪರ ಪ್ರೀತಿ, ವಿಶ್ವಾಸದಿಂದ ಮಾನವರಾಗಿ ಒಂದಾಗಿ ಬಾಳೋಣ ಎಂಬ ಸಂದೇಶವನ್ನು ಸಾರಿದರು. ಪ್ರಮುಖರಾದ ಇ.ರಾ. ದುರ್ಗಾಪ್ರಸಾದ್, ಎಂ.ಯು. ಹನೀಫ್ ಅವರುಗಳು ಮಾತನಾಡಿದರು.
ಅಹಿಂದಾ ಒಕ್ಕೂಟದ ಅಧ್ಯಕ್ಷ ಟಿ.ಎಂ. ಮುದ್ದಯ್ಯ, ಜಮಾಅತ್ ಒಕ್ಕೂಟದ ಅಧ್ಯಕ್ಷ ಜಿ.ಹೆಚ್. ಮಹಮ್ಮದ್, ದ.ಸಂ.ಸ ಅಧ್ಯಕ್ಷ ದಿವಾಕರ್, ಕ್ಯಾಥೇಲಿಕ್ ಸಂಘದ ಜಿಲ್ಲಾ ಕಾರ್ಯದರ್ಶಿ ಜಾನ್ಸನ್ ಪಿಂಟೋ, ಸಂಚಾಲಕ ಜೊಸೆಫ್ ಶಾಂ, ಸಮಾಜ ಸೇವಕ ಉಳ್ಳಾಗಡ್ಡಿ, ಬಿ.ಎ. ಷಂಶುದ್ದಿನ್, ಮುನೀರ್ ಅಹ್ಮದ್, ಪಿ.ಆರ್. ಭರತ್, ಕೆ.ಯು. ಅಬ್ದುಲ್ ರಜಾಕ್, ವಿಲ್ಪ್ರೇಡ್ ಕ್ರಾಸ್ತ, ಮೋಕಿತಾ ಪಾಟೇಲ್, ಅಲ್ಲಾರಂಡ ವಿಠಲ್ ನಂಜಪ್ಪ, ಹಫೀಜ್ ಸಾಗರ್, ಆರ್.ಪಿ. ಚಂದ್ರಶೇಖರ್, ಲಸ್ರಾಡೋ ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.