ಮಡಿಕೇರಿ, ಮೇ 6 : ಭಾಗಮಂಡಲ ಕೋರಂಗಾಲ ಗ್ರಾಮದ ನಂಗಾರು ಗೌಡ ಕುಟುಂಬಸ್ಥರ ವತಿಯಿಂದ ಪ್ರಥಮ ವರ್ಷದ ಹೊನಲು ಬೆಳಕಿನ ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿ ತಾ. 12 ರಂದು ಕೋರಂಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ನಂಗಾರು ಕ್ರೀಡಾ ಸಮಿತಿಯ ಸದಸ್ಯ ನಂಗಾರು ಲೋಕನಾಥ್ ಮಾತನಾಡಿ, ತಾ. 12 ರಂದು ಬೆಳಿಗ್ಗೆ 10 ಗಂಟೆಗೆ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹೊಸೊಕ್ಲು ಉತ್ತಪ್ಪ ಅವರು ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಥ್ರೋಬಾಲ್ ಪಂದ್ಯಾಟವನ್ನು ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿ ಪಟ್ಟೆಮನೆ ನವನೀತ ಅವರು ಮತ್ತು ಅಂತಿಮ ಪಂದ್ಯಾಟವನ್ನು ನಂಗಾರು ಪಿ. ದಿವ್ಯಾ ಉದ್ಘಾಟಿಸಲಿದ್ದಾರೆ.

ಪುರುಷರಿಗೆ ಕಬಡ್ಡಿ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕಬಡ್ಡಿಯಲ್ಲಿ ವಿಜೇತ ತಂಡಕ್ಕೆ 15 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10,019 ರೂ. ನಗದು ಬಹುಮಾನ ಹಾಗೂ ಸೆಮಿಫೈನಲ್‍ಗೆ ಆಯ್ಕೆಯಾದ ತಂಡಕ್ಕೆ ರೂ.6,019 ನಗದು ಬಹುಮಾನ ನೀಡಲಾಗುವದು. ಅಲ್ಲದೇ ಉತ್ತಮ ಆಟಗಾರ ಮತ್ತು ಶಿಸ್ತಿನ ತಂಡಕ್ಕೆ ವಿಶೇಷ ಬಹುಮಾನ, ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. 5 ಸಾವಿರ ನಗದು ಹಾಗೂ ದ್ವೀತಿಯ ಸ್ಥಾನ ಪಡೆದ ತಂಡಕ್ಕೆ ರೂ. 3 ಸಾವಿರ ನಗದು ಬಹುಮಾನ ನೀಡಲಾಗುವದು.

ಈಗಾಗಲೇ ಕಬಡ್ಡಿಗೆ 32 ತಂಡಗಳು ಹಾಗೂ ಥ್ರೋಬಾಲ್ ಪಂದ್ಯಾವಳಿಗೆ 15 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿವೆ. ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ತೀರ್ಪುಗಾರರು ಸಹಕಾರ ನೀಡಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ವೀರಾಜಪೇಟೆ ಶಾಸಕÀ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ. ನಂಗಾರು ಕುಟುಂಬದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಗುವದು ಎಂದು ಲೋಕನಾಥ್ ಮಾಹಿತಿ ನೀಡಿದರು.

ಜನಾಂಗ ಬಾಂಧವರಲ್ಲಿ ಐಕ್ಯತೆ ಮೂಡಿಸುವ ನಿಟ್ಟಿನಲ್ಲಿ ಈ ಕ್ರೀಡಾ ಕೂಟವನ್ನು ಆಯೋಜಿಸಲಾಗಿದ್ದು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ನಂಗಾರು ಗುರುಪ್ರಸನ್ನ ಹಾಗೂ ಕಾರ್ಯದರ್ಶಿ ನಂಗಾರು ಪುನಿತ್ ಉಪಸ್ಥಿತರಿದ್ದರು.