ಗೋಣಿಕೊಪ್ಪಲು, ಮೆ 7: ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಬಸ್ ನಿಲ್ದಾಣದ ಸುತ್ತ ಮುತ್ತ ತಳ್ಳುಗಾಡಿಗಳ ಹಾವಳಿ,ಬಸ್ ನಿಲ್ದಾಣದ ಅಶುಚಿತ್ವ ಹೃದಯ ಭಾಗದಲ್ಲಿ ತುಂಬಿದ್ದ ಕಸದ ರಾಶಿಯ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರು, ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ.ಬೋಪಣ್ಣ ಮುಂಜಾನೆಯೇ ಬಸ್ ನಿಲ್ದಾಣಕ್ಕೆ ಆಗಮಿಸಿ ಸಮಸ್ಯೆಗಳ ಖುದ್ದು ವೀಕ್ಷಣೆ ಮಾಡಿದರು.ತಕ್ಷಣ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಮಾತನಾಡಿದರು. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬರಮಾಡಿಕೊಂಡು ತರಾಟೆಗೆ ತೆಗೆದುಕೊಂಡರು. ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಸ್ ತಂಗುದಾಣ ವೀಕ್ಷಿಸಿದ ಸಿ.ಕೆ.ಬೋಪಣ್ಣ ಮದÀ್ಯವ್ಯಸನಿಗಳು ನಿದ್ರಿಸುತ್ತಿರುವ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಎಲ್ಲೆಂದರಲ್ಲಿ ತಳ್ಳು ಗಾಡಿಗಳ ಹಾವಳಿಯನ್ನು ನಿಯಂತ್ರಿಸಲು ಪಿಡಿಒಗೆ ನಿರ್ದೇಶನ ನೀಡಿ ಬಸ್ ನಿಲ್ದಾಣದಲ್ಲಿ ತಳ್ಳುಗಾಡಿಗಳಿಗೆ ಅವಕಾಶ
(ಮೊದಲ ಪುಟದಿಂದ) ನೀಡದಂತೆ ಸೂಚಿಸಿದರು.ಇವರಿಗೆ ಬದಲಿ ಸ್ಥಳ ನೀಡುವ ಮೂಲಕ ವ್ಯಾಪಾರಕ್ಕೆ ಅನುಕೂಲ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಶೌಚಾಲಯ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಿದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಬಸ್ ನಿಲ್ದಾಣದಲ್ಲಿ ಅನಧಿಕೃತ ತಳ್ಳುಗಾಡಿಗಳನ್ನು ವಶಕ್ಕೆ ಪಡೆದರು. ದುರ್ನಾತ ಬೀರುತ್ತಿದ್ದ ಕಸದ ರಾಶಿಯನ್ನು ಪೌರ ಕಾರ್ಮಿಕರ ಸಹಕಾರದಿಂದ ವಿಲೇವಾರಿ ಮಾಡಿದರು. ಸಿ.ಕೆ. ಬೋಪಣ್ಣ ತೆಗೆದುಕೊಂಡ ದಿಟ್ಟ ಕ್ರಮದ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುರೈ, ರಾಮಕೃಷ್ಣ, ಆಟೋ ಸಂಘದ ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ,ಮಾಜಿ ಅಧ್ಯಕ್ಷ ರಾಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಬಸ್ ನಿಲ್ದಾಣದಲ್ಲಿ ಇನ್ನುಮುಂದೆ ತಳ್ಳುಗಾಡಿಗಳಿಗೆ ಅವಕಾಶ ನೀಡುವದಿಲ್ಲ. ಸಮೀಪದಲ್ಲಿರುವ ಖಾಲಿ ಶೆಡ್ಡುಗಳಲ್ಲಿ ಇವರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವದು. ಸಂಜೆ 5.30ರ ನಂತರ ಮಾತ್ರವೇ ವ್ಯಾಪಾರ ನಡೆಸಬೇಕು. ವ್ಯಾಪಾರ ಮುಗಿಸಿದ ನಂತರ ತಮ್ಮ ಅಂಗಡಿಗಳನ್ನು ವಾಪಸ್ಸು ತೆಗೆದುಕೊಂಡು ಹೋಗಬೇಕು. ಈ ಬಗ್ಗೆ ಲಿಖಿತವಾಗಿ ಹೇಳಿಕೆ ಪಡೆಯಲಾಗಿದೆ. ತಲಾ ರೂ. 500 ದಂಡ ಕಟ್ಟಿಸಿಕೊಂಡು ಗಾಡಿಗಳನ್ನು ವಾಪಾಸ್ಸು ನೀಡಿದ್ದೇವೆ. ಪಂಚಾಯ್ತಿ ನಿಯಮ ಮೀರಿದಲ್ಲಿ ಕ್ರಮ ಕೈಗೊಳ್ಳಲಾಗುವದು. ಶೌಚಾಲಯದ ಶುಚಿತ್ವದ ಬಗ್ಗೆ ಕ್ರಮ ವಹಿಸಲಾಗುವದು ಎಂದು ಪಿಡಿಓ ಚಂದ್ರಮೌಳಿ ಎಚ್ಚರಿಸಿದರು. -ಹೆಚ್.ಕೆ. ಜಗದೀಶ್