ಮಡಿಕೇರಿ, ಮೇ 7: ಲೋಕಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಯಾವದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು, ಮಾಜೀ ಮುಖ್ಯಮಂತ್ರಿ ಹಾಗೂ ರಾಜ್ಯ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. ಇಲ್ಲಿಗೆ ಸಮೀಪದ ಇಬ್ಬನಿ ರೆಸಾರ್ಟ್‍ನಲ್ಲಿ ತಂಗಿದ್ದ ಮಾಜೀ ಮುಖ್ಯಮಂತ್ರಿಗಳು ತಮ್ಮ ಆಪ್ತವಲಯದೊಂದಿಗೆ ರಹಸ್ಯ ಸಮಾಲೋಚನೆ ನಡೆಸಿದ ಸಂದರ್ಭ ಲೋಕಸಭಾ ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ಒಕ್ಕೂಟ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿಯೂ ಮಹತ್ವದ ಬದಲಾವಣೆಯ ಸುಳಿವು ನೀಡಿರುವ ಅವರು, ಮೈತ್ರಿ ಸರಕಾರ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾಗಿ ಗೊತ್ತಾಗಿದೆ.ಕೊಡಗು- ಮೈಸೂರು ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ 12 ಸ್ಥಾನಗಳಲ್ಲಿ ಕಾಂಗ್ರೆಸ್ ಸಂಸದರ ಗೆಲವಿನ ವಿಶ್ವಾಸ ಹೊರಗೆಡವಿರುವ (ಮೊದಲ ಪುಟದಿಂದ) ಸಿದ್ದರಾಮಯ್ಯ, ಕೇಂದ್ರದಲ್ಲಿ ಪ್ರಧಾನಿ ಮೋದಿ ಬದಲಾವಣೆಯು ನಿಶ್ಚಿತವೆಂದು ಭವಿಷ್ಯ ನುಡಿದಿದ್ದಾರೆ ಎಂದು ಆಪ್ತ ಮೂಲಗಳಿಂದ ಗೊತ್ತಾಗಿದೆ.

ತಮ್ಮ ಪುತ್ರ ಯತೀಂದ್ರ ಹಾಗೂ ಕೆಲವೇ ಆಪ್ತರೊಂದಿಗೆ ರೆಸಾರ್ಟ್‍ಗೆ ಆಗಮಿಸಿ ತಂಗಿದ್ದ ಮಾಜೀ ಮುಖ್ಯಮಂತ್ರಿ; ಕೊಡಗಿನ ಹಿರಿಯ ಮುಖಂಡರೊಬ್ಬರ ಸಹಿತ ಆಪ್ತವಲಯದೊಂದಿಗೆ ಮಾತುಕತೆ ನಡೆಸಿದ್ದು, ಈ ಸಂದರ್ಭ ಕೊಡಗಿನ ಉಸ್ತುವಾರಿ ಮಂತ್ರಿ ಸಾ.ರಾ. ಮಹೇಶ್ ಹಾಗೂ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ವಿರುದ್ಧ ಅಸಮಾಧಾನ ಹೊರ ಹಾಕಿದರೆನ್ನಲಾಗಿದೆ. ಏನೇ ಇದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಅವರು ವಿಶ್ವಾಸ ತುಂಬಿರುವದಾಗಿ ಈ ಮೂಲಗಳಿಂದ ಗೊತ್ತಾಗಿದೆ.

ಲೋಕಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉಡುಪಿಯಲ್ಲಿ ವಿಶ್ರಾಂತಿ ಪಡೆದಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿ ಸಮೀಪದ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆದು ಇಂದು ಹಿಂತೆರಳಿದ್ದಾರೆ. ಮಡಿಕೇರಿ ನಗರದ ಹೊರಭಾಗದ ಮೈಸೂರು ರಸ್ತೆಯಲ್ಲಿರುವ ಇಬ್ಬನಿ ರೆಸಾರ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ವಾಸ್ತವ್ಯ ಹೂಡಿದ್ದರು. ನಿನ್ನೆ ಸಂಜೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಜೊತೆ ಆಗಮಿಸಿ 5:30ಕ್ಕೆ ರೆಸಾರ್ಟ್‍ನಲ್ಲಿ ತಂಗಿದ್ದರು. ಈ ಬೆಳಗ್ಗೆಯವರೆಗೂ ರೆಸಾರ್ಟಿನಲ್ಲಿದ್ದರು. ಇಬ್ಬನಿ ರೆಸಾರ್ಟಿಗೆ ಸಂಬಂಧಿಸಿದವರ ಹೆಸರಿನಲ್ಲಿ ಇಬ್ಬರು ಮಾತ್ರ ಪ್ರವೇಶ ಎಂದು ದಾಖಲಾಗಿದ್ದರೂ, ಎರಡಕ್ಕಿಂತ ಹೆಚ್ಚು ಜನ ತಂಗಿದ್ದಾಗಿ ತಿಳಿದು ಬಂದಿದೆ. ಗೌಪ್ಯವಾಗಿ ಸಿದ್ದರಾಮಯ್ಯ ಹಾಗೂ ಅವರ ಸಂಗಡಿಗರು ರೂಮ್ ಬುಕ್ ಮಾಡಿದ್ದು, ಹೊರತು ಪಡಿಸಿದರೆ ಮತ್ತೆ ಯಾವದೇ ಮಾಹಿತಿ ಲಭ್ಯವಾಗಿಲ್ಲ. ನಿನ್ನೆ ಇಡೀ ವಿಶ್ರಾಂತಿ ಮಾಡಿರೋ ಸಿದ್ದರಾಮಯ್ಯ ಮತ್ತು ಪುತ್ರ ಬೆಳಗ್ಗೆ ರೆಸಾರ್ಟ್ ಸುತ್ತಿ ಪ್ರಕೃತಿಯ ಸೌಂದರ್ಯ ಆಸ್ವಾದಿಸಿದ್ದಾರೆ. ಅಲ್ಲದೆ ರೆಸಾರ್ಟ್‍ಗೆ ಗೌಪ್ಯವಾಗಿ ಆಗಮಿಸಿರೋ ಅವರ ಆಪ್ತರ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನು ಸಿದ್ದರಾಮಯ್ಯರ ಕೊಡಗು ರೆಸಾರ್ಟ್ ವಾಸ್ತವ್ಯ ಕೊಡಗಿನ ಕೈ ನಾಯಕರಿಗೇ ತಿಳಿದಿಲ್ಲವೆನ್ನುವದು ಖಾತರಿ. ಮೈಸೂರು ವ್ಯಾಪ್ತಿಯ ಅವರ ಆಪ್ತರು ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆಯಲ್ಲದೆ, ಈ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹಿಂತಿರುಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಬೇರೆ ಯಾರಿಗೂ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಗೊತ್ತಾಗಿದೆ. ಬದಲಾಗಿ ಮಡಿಕೇರಿಯ ಹಿರಿಯ ಮುಖಂಡರ ಸಹಿತ ಕೆಲವರಷ್ಟೇ ರೆಸಾರ್ಟ್‍ಗೆ ತೆರಳಿ ಮಾಜೀ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಿರುವದು ಖಾತರಿಯಾಗಿದೆ. ಈ ಭೇಟಿ ಸಿದ್ದರಾಮಯ್ಯ ಬೆಂಬಲಿಗರಿಗೆ ಹರ್ಷ ತಂದಿದ್ದರೆ, ಆ ಪಕ್ಷದ ಕೆಲವರಿಗೆ ಕಸಿವಿಸಿ ಉಂಟು ಮಾಡಿರುವ ಮಾತು ಕೇಳಿ ಬರತೊಡಗಿದೆ.