ಶ್ರೀಮಂಗಲ, ಮೇ 6: ದಕ್ಷಿಣ ಕೊಡಗಿನ ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲ್ಲಿ ಸೇರಿಕೊಂಡಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ಕೈಗೊಂಡಿದ್ದು, ಬ್ರಹ್ಮಗಿರಿ ಮೀಸಲು ಅರಣ್ಯಕ್ಕೆ ಸೇರಿಸಲು ಹರಸಾಹಸ ಪಡಲಾಗುತ್ತಿದೆ.

ತಾ. 5 ರಿಂದ ಆರಂಭವಾಗಿರುವ ಕಾರ್ಯಾಚರಣೆ ಇಂದು ಮುಂದುವರೆದಿದೆ.

ಶ್ರೀಮಂಗಲ ವಲಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ವೀರೇಂದ್ರ ಮರಿಬಸವಣ್ಣನವರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ 22 ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ. ಪೆÇನ್ನಂಪೇಟೆ ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಯ ಸಿಬ್ಬಂದಿ ಸಹ ಭಾಗವಹಿಸಿದ್ದಾರೆ.

ಇದುವರೆಗಿನ ಕಾರ್ಯಾಚರಣೆ ಯಲ್ಲಿ ಮರಿಯಾನೆ ಸಹಿತ 10 ಕಾಡಾನೆಗಳನ್ನು ಪತ್ತೆಮಾಡಿ ಬ್ರಹ್ಮಗಿರಿ ಅರಣ್ಯಕ್ಕೆ ಸೇರಿಸಲಾಗಿದೆ ಎಂದು ಅರಣ್ಯಾಧಿಕಾರಿ ವೀರೇಂದ್ರ ಮಾಹಿತಿ ನೀಡಿದ್ದಾರೆ.

ತಾ. 3 ರಂದು ಶ್ರೀಮಂಗಲ-ಕುಟ್ಟ ಹೆದ್ದಾರಿಯಲ್ಲಿ ಕಾಡಾನೆ ದಾಳಿಗೆ ಕಾಯಿಮಾನಿ ಗ್ರಾಮದ ರೈತ ಚೋಕಿರ ಸುಧಾ ಕುಟ್ಟಪ್ಪ (42) ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಮಂಗಲ ವ್ಯಾಪ್ತಿಯ ಕುರ್ಚಿ, ಬೀರುಗ, ಕಾಕೂರು, ಕಾಯಿಮಾನಿ, ಮಂಚಳ್ಳಿ, ಕುಟ್ಟ, ತೈಲ ಗ್ರಾಮಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.