ವೀರಾಜಪೇಟೆ, ಮೇ 6: ಕೊಡವ ಜನಾಂಗದಲ್ಲಿ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಹೆಚ್ಚಿಸಲು ಕೌಟುಂಬಿಕ ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಹೇಳಿದರು.

ಬಿಟ್ಟಂಗಾಲದ ತಂಗಾಳಿ ಇಂಡೋರ್ ಸ್ಟೇಡಿಯಂನಲ್ಲಿ ಕಂಜಿತಂಡ ಕುಟುಂಬ ಆಯೋಜಿಸಿದ್ದ ಕಂಜಿತಂಡ ಕಪ್ ಷಟಲ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯಾಟದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಒರ್ವ ವ್ಯಕ್ತಿ ಸಾರ್ವಜನಿP್ಪರಿಗೆ ಉಪಯೋಗ ಆಗಲೆಂದು ಹೆಲ್ತ್ ಕ್ಲಬ್ ಪ್ರಾರಂಭಿಸಿ ಕೊಡವ ಕುಟುಂಬಗಳ ನಡುವೆ ಷಟಲ್ ಪಂದ್ಯಾಟಗಳನ್ನು ನಡೆಸುವದು ಸಾಮಾನ್ಯದ ವಿಚಾರವಲ್ಲ. ಕ್ರೀಡೆಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು ಎನ್ನುವ ಛಲ ನಮ್ಮಲ್ಲಿರಬೇಕು. ಕ್ರೀಡೆಯ ಮೇಲೆ ಕೊಡವ ಜನಾಂಗಕ್ಕೆ ಇರುವ ಅಭಿಮಾನ ಇತರ ಜನಾಂಗದಲ್ಲಿ ಕಾಣ ಸಿಗುವದಿಲ್ಲ ಎಂದು ಹೇಳಿದರು.

ಬಾಟಾ ಇಂಡಿಯಾದ ಮಾಜಿ ಅಧ್ಯಕ್ಷ ಚೇಮಿರ ಪೊನ್ನಪ್ಪ ಮಾತನಾಡಿ ಕ್ರೀಡೆಗಳಿಗೆ ವಯಸ್ಸಿನ ಮಿತಿ ಇಲ್ಲ. ಎಲ್ಲ ವಯೋಮಾನದವರು ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡವರು ಶಾರೀರಿಕವಾಗಿ ಸದೃಢರಾಗಿರುತ್ತಾರೆ. ಆಯುಸ್ಸು ವೃದ್ಧಿಸುತ್ತದೆ ಎಂದು ಹೇಳಿದರು.

ಪಂದ್ಯಾಟದ ಸಂಚಾಲಕ ಕಂಜಿತಂಡ ಮಂದಣ್ಣ ಮಾತನಾಡಿ ಹಾಕಿ ಫುಟ್ಬಾಲ್, ಕ್ರಿಕೆಟ್ ಪಂದ್ಯಾಟಗಳ ನಡುವೆ ಷಟಲ್ ಬ್ಯಾಡ್ಮಿಂಟನ್ ಪಂದ್ಯಗಳನ್ನು ನಡೆಸಬೇಕು ಎಂಬ ಬಯಕೆ ಹಿಂದಿನಿಂದಲೂ ಇತ್ತು. ಈ ಬಾರಿ 76 ತಂಡಗಳು ಪಾಲ್ಗೊಂಡಿವೆ ಎಂದು ಹೇಳಿದರು.

ಕಂಜಿತಂಡ ಕುಟುಂಬದ ಅಧ್ಯಕ್ಷ ಮಣಿ ಅಯ್ಯಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕ್ರೀಡಾಪಟು ನಂಬುಡುಮಾಡ ಕಿಶನ್, ಅರೆಯಡ ಲಕ್ಷ್ಮಿ ಗಣಪತಿ ಉಪಸ್ಥಿತರಿದ್ದರು. ಚೇಂದ್ರಮಾಡ ಬೊಳ್ಳಮ್ಮ ನಿರೂಪಿಸಿದರು.

ಬಿಟ್ಟಂಗಾಲದ ತಂಗಾಳಿ ಇಂಡೋರ್ ಸ್ಟೇಡಿಯಂನಲ್ಲಿ ಕೊಡವ ಕುಟುಂಬಗಳ ನಡೆದ ಕಂಜಿತಂಡ ಕಪ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಂಬೀರಂಡ ತಂಡ 21-15, 18-21 ನೇರ ಸೆಟ್‍ಗಳಿಂದ ಚೇಂದ್ರಿಮಾಡ ತಂಡವನ್ನು ಪರಾಭವ ಗೊಳಿಸಿ 10 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಉತ್ತಮ ಪ್ರದರ್ಶನ ನೀಡಿ ಅಂತಿಮ ಕ್ಷಣಗಳಲ್ಲಿ ಎಡವಿದ ಚೇಂದ್ರಿಮಾಡ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು 7ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರು. ತೃತೀಯ ಮಂಡಂಗಡ, ಚತುರ್ಥ ಕಳ್ಳಂಗಡ ತಂಡ ಐದು ಹಾಗೂ ಮೂರು ಸಾವಿರ ನಗದು ಆಕರ್ಷಕ ಟ್ರೋಫಿಗೆ ಭಾಜನರಾದರು.

ಪಂದ್ಯಾಟದಲ್ಲಿ ಕೀಪಾಡಂಡ ಬೋಪಣ್ಣ ವಯಸ್ಕ ಆಟಗಾರ, ವಯಸ್ಕ ಆಟಗಾರ್ತಿ ಅಜ್ಜಾಮಾಡ ಕಾವೇರಮ್ಮ, ಉದಯೋನ್ಮುಖ ಆಟಗಾರ ಕೊಂಗಂಡ ಆಕಾಶ್, ಉದಯೋನ್ಮುಖ ಆಟಗಾರ್ತಿ ಅಜ್ಜಾಮಾಡ ಅಕ್ಕಮ್ಮ, ಉತ್ತಮ ಪುರುಷ ಆಟಗಾರ ನಂಬುಡುಮಾಡ ಅಪ್ಪಣ್ಣ, ಉತ್ತಮ ಮಹಿಳಾ ಆಟಗಾರ್ತಿ ಪೆಮ್ಮಡಿಯಂಡ ಪಾಯಲ್, ಸ್ಟೈಲೀಶ್ ಆಟಗಾರ ಪುದಿಯೊಕ್ಕಡ ಸೂರಜ್, ಮುನ್ನಡೆಯ ತಂಡ ತಾತಪಂಡ, ಶಿಸ್ತುಬದ್ದ ತಂಡ ಗುಡ್ಡಂಡ ಇವರುಗಳು ವೈಯಕ್ತಿಕ ಟ್ರೋಫಿ ಪಡೆದುಕೊಂಡರು.

ಪಂದ್ಯಾಟದ ತೀರ್ಪುಗಾರರಾಗಿ ಚೇಂದ್ರಿಮಾಡ ಮಧು, ಪೆಮ್ಮಡಿಯಂಡ ವೇಣು, ತಾತಪಂಡ ಜ್ಯೋತಿ ಕಾರ್ಯ ನಿರ್ವಹಿಸಿದರು. ಮುಂದಿನ ಬಾರಿ ಚೇಂದ್ರಿಮಾಡ ತಂಡ ಪಂದ್ಯಾಟದ ಆತಿಥ್ಯ ವಹಿಸಿಕೊಂಡರು.