ಗೋಣಿಕೊಪ್ಪ ವರದಿ, ಮೇ 5 : ಬೇಗೂರು ಕೊಲ್ಲಿಯಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ನಾಲ್ಕುಚಕ್ರ ಹಾಗೂ ದ್ವಿಚಕ್ರ ಆಟೋಕ್ರಾಸ್ನಲ್ಲಿ ರ್ಯಾಲಿಪಟುಗಳ ಚಾಕಚಕ್ಯತೆ ಕುತೂಹಲ ಮೂಡಿಸಿತು. ದೂಳು.. ಕಿವಿಗಪ್ಪಳಿಸುವ ಶಬ್ದಗಳ ನಡುವೆ ರೋಚಕ ಅನುಭವನ್ನು ರ್ಯಾಲಿಪಟುಗಳು ನೀಡಿದರು.ಸುತ್ತಲೂ ಹಸಿರಿನಿಂದ ಕೂಡಿದ್ದ ಕಾಫಿ ತೋಟಗಳಲ್ಲಿ ಸಂಪೂರ್ಣ ದೂಳು ಕಂಡು ಬಂತು. ರೊಂಯ್ಯೀ.. ರೊಂಯ್ಯೀ.. ಎಂದು ಮುನ್ನುಗ್ಗುವ ಬೈಕ್ಗಳು.. ಭೂಮಿಯಿಂದ ಮೇಲೆದ್ದ ದೂಳು ಆಕಾಶವನ್ನ ಮುತ್ತಿಕ್ಕುವ ಅನುಭವ ನೀಡಿತು. ಬಿಸಿಲಿನ ತಾಪಕ್ಕೂ ಬಗ್ಗದ ಅಭಿಮಾನಿಗಳು ಟ್ರ್ಯಾಕ್ ಉದ್ದಕ್ಕೂ ನಿಂತು ಕುತೂಹಲದಿಂದ ವೀಕ್ಷಿಸಿದರು. ಪೊನ್ನಂಪೇಟೆ-ಹುದಿಕೇರಿ ಮುಖ್ಯರಸ್ತೆ ಬದಿಯಲ್ಲಿನ ಬೇಗೂರುಕೊಲ್ಲಿಯ ಚೇಂದೀರ, ಐಪುಮಾಡ, ಚೆಕ್ಕೇರ ಹಾಗೂ ತೀತೀರ ಕುಟುಂಬಗಳಿಗೆ ಸೇರಿರುವ ಗದ್ದೆಯಲ್ಲಿ ರ್ಯಾಲಿ ನಡೆಯಿತು. ತಿರುವುಗಳಲ್ಲಿ ಮುನ್ನುಗ್ಗುವ ವಾಹನಗಳ ಆರ್ಭಟ ಹೃದಯ ಬಡಿತ ಹೆಚ್ಚಿಸಿತ್ತು. ಅಲ್ಲಲ್ಲಿ ಬಿದ್ದು ಮತ್ತೆ ಓಡುವ ರ್ಯಾಲಿಪಟುಗಳ ಸ್ಪರ್ಧಾಭಾವನೆ ರೋಚಕತೆ ಮೂಡಿಸಿತು. ನಾಲ್ಕುಚಕ್ರ ಹಾಗೂ ದ್ವಿಚಕ್ರ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಿತು. ದ್ವಿಚಕ್ರ ವಿಭಾಗದಲ್ಲಿ ಸುಮಾರು 59 ರ್ಯಾಲಿಪಟುಗಳು ಹೊರ ರಾಜ್ಯದವರು ಹೆಚ್ಚಾಗಿ ಪಾಲ್ಗೊಂಡರು.
ಅಂತರ್ರಾಷ್ಟ್ರೀಯ ರ್ಯಾಲಿಪಟು ಲೋಹಿತ್ ಅರಸ್ ಟ್ರ್ಯಾಕ್ ಚಿಂತನೆಯಂತೆ ನಿರ್ಮಿಸಿದ್ದ ಟ್ರ್ಯಾಕ್ ಸುಮಾರು 850 ಮೀಟರ್ ಉದ್ದವಿತ್ತು. ನಾಲ್ಕುಚಕ್ರ ವಾಹನಗಳಿಗೆ ಅನುಕೂಲವಾಗುವಂತೆ 3 ತಿರುವುಗಳು ಮಾತ್ರ ನಿರ್ಮಿಸಿದ್ದ ಕಾರಣ ಬೈಕ್ ಸವಾರರಿಗೆ ಹೆಚ್ಚು ಅನುಕೂಲವಾಯಿತು. ಇದೇ ಮೊದಲ ಬಾರಿಗೆ ನಾಲ್ಕುಚಕ್ರ ವಾಹನ ರ್ಯಾಲಿಯಲ್ಲಿ ಡಿಜಿಟಲ್ ಟೈಮಿಂಗ್ಸ್ ತಂತ್ರಜ್ಞಾನ ಅಳವಡಿಸಲಾಗಿತ್ತು.
ಸುಂಟಿಕೊಪ್ಪದ ಎಂ. ಬಿ. ಶಿಯಾಬ್ ಚಾಂಪಿಯನ್
ದ್ವಿಚಕ್ರ ವಿಭಾಗದ 3 ಕ್ಲಾಸ್ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸುಂಟಿಕೊಪ್ಪದ ಎಂ. ಬಿ. ಶಿಯಾಬ್ ಚಾಂಪಿಯನ್ ಬಹುಮಾನ ಗಿಟ್ಟಿಸಿಕೊಂಡರು. ಕೂರ್ಗ್ ಲೋಕಲ್, ನಾವಿಸ್ ಹಾಗೂ ಇಂಡಿಯನ್ ಓಪನ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನದ ಸಾಧನೆ ಮಾಡಿದರು.