ಮಡಿಕೇರಿ, ಮೇ 5: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಜೇಜು ಮೈದಾನದಲ್ಲಿ ನಡೆದ ಗೌಡ ಜನಾಂಗದ ಗೌಡ ಕ್ರಿಕೆಟ್ ಹಬ್ಬದಲ್ಲಿ ಕೊಡಗು ಗೌಡ ಯುವ ವೇದಿಕೆ (ಕೆಜಿವೈವಿ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೆಡಿಕೆ (ಕೊಡಗು-ದಕ್ಷಿಣ ಕನ್ನಡ) ಬಾಯ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.ಫೈನಲ್ ಪಂದ್ಯದಲ್ಲಿ ಕೆಡಿಕೆ ಬಾಯ್ಸ್ 10 ಓವರ್‍ಗೆ 5 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಜಿವೈವಿ ತಂಡ 1 ವಿಕೆಟ್ ನಷ್ಟಕ್ಕೆ 7.5 ಓವರ್‍ನಲ್ಲಿ 89 ರನ್ ಗಳಿಸಿ ವಿಜಯ ಪತಾಕೆ ಹಾರಿಸಿತು. ಕೆಜಿವೈವಿ ತಂಡದ ಪರ ವಿಕ್ಕಿ 28 ಎಸೆತಗಳಿಗೆ 64 ರನ್ ಬಾರಿಸಿದರು.

ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಕೆಜಿವೈವಿ ತಂಡದ ತಳೂರು ವಿಕ್ಕಿ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಕೆಡಿಕೆ ಬಾಯ್ಸ್‍ನ ಲೋಹಿತ್ ಕುಮಾರ್, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೆಡಿಕೆ ಬಾಯ್ಸ್‍ನ ಅಕ್ಷಯ್ ಪಡೆದುಕೊಂಡರು.ಕ್ವಾರ್ಟರ್ ಫೈನಲ್‍ನಲ್ಲಿ ಬಿಎಫ್‍ಎಂಎ ಹಾಗೂ ಮುತ್ತಾರ್ಮುಡಿ ಸ್ಮ್ಯಾಷರ್ಸ್ ನಡುವಿನ ಪಂದ್ಯದಲ್ಲಿ ಬಿಎಫ್‍ಎಂಎ ತಂಡ 3 ವಿಕೆಟ್‍ಗೆ 49 ರನ್ ಗಳಿಸಿತು. ಮುತ್ತಾರ್ಮುಡಿ ತಂಡ 2 ವಿಕೆಟ್‍ಗೆ 53 ರನ್ ಗಳಿಸಿ ಗೆಲವು ಸಾಧಿಸಿತು. ಮುತ್ತಾರ್ಮುಡಿ ಪರ ಲೋಹಿತ್ 16 ರನ್ ಬಾರಿಸಿದರು.

ಪೆರಾತ ಫ್ರೆಂಡ್ಸ್ ತಂಡ 2 ವಿಕೆಟ್‍ಗೆ 62 ರನ್ ಗಳಿಸಿದರೆ, ಕೆಜಿವೈವಿ ತಂಡ 5 ವಿಕೆಟ್‍ಗೆ 63 ರನ್ ಗಳಿಸಿ ಗೆಲವು ಸಾಧಿಸಿತು. ಕೆಜಿವೈವಿ ತಂಡದ ಪರ ನೂತನ್ 19 ಎಸೆತಕ್ಕೆ 32 ರನ್ ಬಾರಿಸಿದರು.

ಕೋಳಿಬೈಲು ಹಾಗೂ ಕೆಡಿಕೆ ಬಾಯ್ಸ್ ನಡುವಿನ ಸೆಮಿಫೈನಲ್‍ನಲ್ಲಿ ಕೆಡಿಕೆ ಬಾಯ್ಸ್ 5 ವಿಕೆಟ್‍ಗೆ 104 ರನ್ ಗಳಿಸಿತು. ಕೋಳಿಬೈಲು ತಂಡ 6 ವಿಕೆಟ್‍ಗೆ 49 ರನ್ ಮಾತ್ರ ಗಳಿಸಿ ಸೋಲು ಕಂಡಿತು. ಕೆಡಿಕೆ ಪರವಾಗಿ ಲೋಹಿತ್ ಕುಮಾರ್ 26 ಎಸೆತಕ್ಕೆ 55 ರನ್ ಬಾರಿಸಿದರು.

ಮುತ್ತಾರ್ಮುಡಿ ಹಾಗೂ ಕೆಜಿವೈವಿ ನಡುವಿನ ಸೆಮಿಫೈನಲ್‍ನಲ್ಲಿ ಮುತ್ತಾರ್ಮುಡಿ 3 ವಿಕೆಟ್‍ಗೆ 42 ರನ್ ಗಳಿಸಿತು. ಕೆಜಿವೈವಿ 3 ವಿಕೆಟ್‍ಗೆ 46 ರನ್ ಗಳಿಸಿ ಜಯ ಸಾಧಿಸಿತು. ಕೆಜಿವೈವಿ ಪರ ವಿಕ್ಕಿ 20 ರನ್ ಗಳಿಸಿದರು.

ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಸಂಘಟನೆಯು ಯಶಸ್ವಿಯಾಗಿ ರಾಜಕೀಯ ರಹಿತವಾಗಿ ಜನಾಂಗ ಬಾಂಧವ ರಿಗಾಗಿ ಒಗ್ಗಟ್ಟಿನಿಂದ ಕ್ರೀಡಾಕೂಟ ಆಯೋಜಿಸುತ್ತಾ ಬರುತ್ತಿದೆ ಎಂದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಮಾತನಾಡಿ, (ಮೊದಲ ಪುಟದಿಂದ) ಭಾಷೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿ ಎಂದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಕುಟುಂಬವಾರು ಪಂದ್ಯಾಟ ಆಯೋಜಿಸಿರುವದು ಗೌಡ ಜನಾಂಗದವರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಮುಂದೆಯೂ ಇನ್ನಷ್ಟು ಕ್ರೀಡಾಕೂಟಗಳು, ಕಾರ್ಯಕ್ರಮಗಳು ಯುವ ವೇದಿಕೆಯಿಂದ ನಡೆಯಲಿ ಎಂದರು.

ನಗದು ಬಹುಮಾನ: ಗೆದ್ದ ತಂಡಗಳಿಗೆ ಪ್ರಥಮ ಬಹುಮಾನವಾಗಿ 30 ಸಾವಿರ ನಗದು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಬಹುಮಾನವಾಗಿ 20 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಸಮಾಜ ಸೇವಕ ಮೂಟೇರ ನಂಜುಂಡ, ಕೊಡಗು ಗೌಡ ವಿದ್ಯಾಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಎಜುಕೇಟೈನರ್ ಯಾಲದಾಳು ಕುಮುದ ಜಯ ಪ್ರಶಾಂತ್, ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಶಿಸ್ತು ಸಮಿತಿ ಅಧ್ಯಕ್ಷ ಪೆÇಕ್ಕುಳಂಡ್ರ ಮನೋಜ್, ನ್ಯಾಯಿಕ ಸಮಿತಿ ಅಧ್ಯಕ್ಷ ದಯಾನಂದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.