ಸೋಮವಾರಪೇಟೆ,ಮೇ.5: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ ಗ್ರಾಮದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸರು, ವಾಹನ ಸಹಿತ ಈರ್ವರನ್ನು ವಶಕ್ಕೆ ಪಡೆದಿದ್ದಾರೆ.ಸೋಮವಾರಪೇಟೆ ಪೊಲೀಸ್ ವೃತ್ತನಿರೀಕ್ಷಕ ನಂಜುಂಡೇಗೌಡ ಮತ್ತು ಸಿಬ್ಬಂದಿ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಗರ್ವಾಲೆ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭ ಮಂಕ್ಯ ಗ್ರಾಮದ ಬಳಿ ವಾಹನದಲ್ಲಿ ಐದು ಜಾನುವಾರುಗಳನ್ನು ಸಾಗಿಸುತ್ತಿದ್ದುದು ಕಂಡುಬಂದಿದೆ.ವಾಹನವನ್ನು ತಡೆದು ವಿಚಾರಿಸಿದ ಸಂದರ್ಭ ಯಾವದೇ ಪರವಾನಗಿ ಇಲ್ಲದೇ ಇರುವದು ತಿಳಿದುಬಂದಿದ್ದು, ಮಂಕ್ಯ ಗ್ರಾಮಸ್ಥರ ಜಾನುವಾರುಗಳನ್ನು ಅಕ್ರಮವಾಗಿ ರಾಮನಾಥಪುರದ ಕಸಾಯಿಖಾನೆಗೆ ಸಾಗಿಸಲಾಗುತಿತ್ತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಅಕ್ರಮ ಗೋಸಾಗಾಟ ನಡೆಸುತ್ತಿದ್ದ ಮಲ್ಲಿಪಟ್ಟಣ ಸಮೀಪದ ಅಬ್ಬೂರು ಮಾಚಳ್ಳಿ ನಿವಾಸಿಗಳಾದ ಅಬ್ತಾಪ್ ಪಾಷ ಮತ್ತು ಇಮ್ರಾನ್ ಪಾಷ ಅವರುಗಳ ಸಹಿತ ಅಶೋಕ್ ಲೈಲ್ಯಾಂಡ್

(ಮೊದಲ ಪುಟದಿಂದ) ವಾಹನ (ಕೆ.ಎ.13 ಬಿ.8372) ಸೇರಿದಂತೆ ಐದು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು, ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಸಿಬ್ಬಂದಿಗಳಾದ ಅನಂತ್‍ಕುಮಾರ್, ಮಹದೇಶ್ವರಸ್ವಾಮಿ, ಇಸ್ಮಾಯಿಲ್ ಭಾಗವಹಿಸಿದ್ದರು.