ಗೋಣಿಕೊಪ್ಪ ವರದಿ, ಮೇ 3 : ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಕೊಡಗು ಹೆಗ್ಗಡೆ ಸಮಾಜ ವತಿಯಿಂದ ಆಯೋಜಿಸಿದ್ದ ಕೊಡಗು ಹೆಗ್ಗಡೆ ಹಿರಿಯರ ಕ್ರಿಕೆಟ್ ಕಪ್‍ನ್ನು ಕಡಿಯತ್ತೂರು ತಂಡ ಮುಡಿಗೇರಿಸಿಕೊಂಡಿದೆ. ಪಾರಾಣೆ (ಬಿ) ತಂಡವು ದ್ವಿತೀಯ ಸ್ಥಾನ ಅಲಂಕರಿಸಿದೆ.ಶುಕ್ರವಾರ ನಡೆದ ಫೈನಲ್ ಮುಖಾಮುಖಿಯಲ್ಲಿ ಕಡಿಯತ್ತೂರು ತಂಡವು ಪಾರಾಣೆ ತಂಡವನ್ನು 5 ವಿಕೆಟ್‍ಗಳಿಂದ ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಪಾರಾಣೆ 4 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಕಡಿಯತ್ತೂರು 5 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿತು. ಆ ಮೂಲಕ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಪಂದ್ಯದ ಕೊನೆಯ ಎಸೆತದಲ್ಲಿ ರೋಚಕ ಫಲಿತಾಂಶ ಹೊರ ಹೊಮ್ಮಿತು. ಹಿರಿಯರ ಕ್ರಿಕೆಟ್‍ನಲ್ಲಿ ಬೆಸ್ಟ್ ಬ್ಯಾಟ್ಸ್‍ಮನ್ ಬಹುಮಾನವನ್ನು ಕಡಿಯತ್ತೂರು ತಂಡದ ಅಯ್ಯಪ್ಪ, ಬೌಲರ್ ಬಹುಮಾನವನ್ನು ಪಾರಾಣೆ ತಂಡದ ಅಶ್ವತ್, ಪಂದ್ಯ ಪುರುಷ ಬಹುಮಾನವನ್ನು ಕಡಿಯತ್ತೂರು ತಂಡದ ಭರತ್, ಸರಣಿ ಶ್ರೇಷ್ಠ ಬಹುಮಾನವನ್ನು ಕಡಿಯತ್ತೂರು ತಂಡದ ಅಯ್ಯಪ್ಪ ಪಡೆದುಕೊಂಡರು.

ಕಿರಿಯರಿಗೆ ನಡೆದ ಕ್ರಿಕೆಟ್‍ನಲ್ಲಿ ಪೊನ್ನಂಪೇಟೆ ತಂಡ ಚಾಂಪಿಯನ್, ಹಾತೂರು ತಂಡ ರನ್ನರ್ ಅಪ್ ಸ್ಥಾನ ಅಲಂಕರಿಸಿತು. ಹಾತೂರು ತಂಡವು ಮೊದಲು ಬ್ಯಾಟ್ ಮಾಡಿ 6 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪೊನ್ನಂಪೇಟೆ ತಂಡ 1 ವಿಕೆಟ್ ಕಳೆದುಕೊಂಡು 3 ಓವರ್‍ಗಳಲ್ಲಿ 41 ರನ್ ಗಳಿಸಿ ಗೆಲವು ಪಡೆದುಕೊಂಡಿತು. ಕಿರಿಯರಲ್ಲಿ ಹಾತೂರು ತಂಡದ ಪವನ್ ಬೆಸ್ಟ್ ಬ್ಯಾಟ್ಸ್‍ಮನ್, ಪೊನ್ನಂಪೇಟೆ ತಂಡದ ಸಫನ್ ಬೆಸ್ಟ್ ಬೌಲರ್, ಹಾತೂರ್ ತಂಡದ ಪಿ.ವಿ. ನಿಖಿಲ್ ಪಂದ್ಯ ಪುರುಷ ಹಾಗೂ ಸರಣಿ ಶ್ರೇಷ್ಠ ಬಹುಮಾನ ಗಳಿಸಿದರು. ಮಹಿಳೆಯರಿಗೆ ನಡೆದ ಥ್ರೋಬಾಲ್‍ನಲ್ಲಿ ಬಿಟ್ಟಂಗಾಲ ಚಾಂಪಿಯನ್, ಬೆಟ್ಟಗೇರಿ ರನ್ನರ್ ಅಪ್ ಸ್ಥಾನ ಪಡೆಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಜನಾಂಗದ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಎಸ್ಸೆಎಸ್ಸೆಎಲ್ಸಿಯಲ್ಲಿ ಪೊಕ್ಕಳಿಚಂಡ ಗೌತಮಿ, ಜಿ. ನಂಜಮ್ಮ, ಪಿಯುಸಿಯಲ್ಲಿ ಪಿ.ಕೆ. ಮೋನಿಕಾ, ಸಿ.ಎಸ್. ಸಂಗೀತ, ಪದವಿ ಶಿಕ್ಷಣದಲ್ಲಿ ಪಿ.ವಿ ಪುನಿತಾ, ಪಿ.ಕೆ. ಬೋಪಣ್ಣ, ಕೆ. ಪಿ. ರಕ್ಷಿತ್, ಸಿ.ಪಿ. ಪ್ರತಿಭಾ ಸ್ವೀಕರಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಜನಾಂಗದ ಕ್ರೀಡಾಪಟು ಕಾಕೇರ ಪ್ರಜ್ವಲ್ ಮಂದಣ್ಣ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ವರ್ಷದಿಂದ ಹೆಗ್ಗಡೆ ಜನಾಂಗದ ವಲಯ ಮಟ್ಟದ ತಂಡಕ್ಕೆ ಕ್ರೀಡಾಕೂಟ ಆಯೋಜಿಸಲು ಅವಕಾಶ ಮಾಡಿಕೊಡಲಾಗುವದು. ಹೆಗ್ಗಡೆ ಸಮಾಜದ ಸಹಯೋಗದಲ್ಲಿ ವಲಯ ಮಟ್ಟದ ತಂಡ ನಡೆಸಲಾಗುತ್ತದೆ ಎಂದು ಘೋಷಿಸಲಾಯಿತು.

ಕೊಡವ ತಕ್ಕ್ ಜನಾಂಗಕ್ಕಾರಡ ಕೂಟ ಅಧ್ಯಕ್ಷ

(ಮೊದಲ ಪುಟದಿಂದ) ಕೊರಕುಟ್ಟೀರ ಸರಾ ಚೆಂಗಪ್ಪ ಮಾತನಾಡಿ, ಕೊಡವ ಭಾಷಿಗರಿಗೆ ಮೀಸಲಾತಿಯಲ್ಲಿ ತಾರತಮ್ಯವಿದೆ. ಇದನ್ನು ಸರಿಪಡಿಸುವ ಕಾರ್ಯ ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ. ಈ ಬಗ್ಗೆ ಕೊಡವ ಭಾಷಿಗ ಕುಲಶಾಸ್ತ್ರ ಅದ್ಯಯನ ನಡೆಸುವಂತೆ ಜಿಲ್ಲಾಧಿಕಾರಿ ಮೂಲಕ ಒತ್ತಾಯ ಮಾಡಲಾಗುವದು ಎಂದರು.

ಈ ಸಂದರ್ಭ ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಂಞರಂಡ ಜಿ. ಅಯ್ಯಪ್ಪ, ಹಾಲುಗುಂದ ಗ್ರಾ. ಪಂ. ಸದಸ್ಯ ಪಂದಿಕಂಡ ದಿನೇಶ್, ಹಿರಿಯರಾದ ಪಾನಿಕುಟ್ಟೀರ ಕಾರ್ಯಪ್ಪ, ಕ್ರೀಡಾ ಸಮಿತಿ ಮುಖ್ಯಸ್ಥ ಪಡಿಂಞರಂಡ ಪ್ರಭುಕುಮಾರ್, ಹಿರಿಯರುಗಳಾದ ತೋರೇರ ಮುದ್ದಯ್ಯ, ಪೊಕ್ಕಳಿಚಂಡ ಕಾಳಪ್ಪ, ಕೊಪ್ಪಡ ಪಳಂಗಪ್ಪ, ಪಾನಿಕುಟ್ಟೀರ ಕುಟ್ಟಪ್ಪ, ಚರ್ಮಂಡ ಪೂವಯ್ಯ, ಚಂಗಚಂಡ ಕಟ್ಟಿ ಕಾವೇರಪ್ಪ, ತಂಬಂಡ ಮಂಜುನಾಥ್, ಮಳ್ಳಂಡ ಸುತಾ, ಮೋರೀರ ಶಾಂತಿ, ಮೋರೀರ ಕುಶಾಲಪ್ಪ, ಚೋವಂಡ ಇಂದಿರಾ, ಯರವ ಸಮಾಜ ಅಧ್ಯಕ್ಷ ಶಾಂತಕುಮಾರ್ ಇದ್ದರು.

-ಸುದ್ದಿಪುತ್ರ, ಜಗದೀಶ್