ಮಡಿಕೇರಿ, ಮೇ 3: ಕೊಡಗಿನಲ್ಲಿ ಭೂಪರಿವರ್ತನೆ ಸ್ಥಗಿತಗೊಳಿಸಿ ಸರಕಾರ ಹೊರಡಿಸಿರುವ ಆದೇಶದಿಂದಾಗಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಕೆಯಾಗಿರುವ ಸುಮಾರು 693 ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದುಕೊಂಡಿದೆ.ಕಳೆದ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ಜಿಲ್ಲೆಯಲ್ಲಿ ಸರ್ವೆ ನಡೆಸಿ ಸರಕಾರಕ್ಕೆ ನವೆಂಬರ್‍ನಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಭೂಪರಿವರ್ತನೆಯಿಂದ ಮುಂದೆ ಅನಾಹುತಗಳಾಗುವ ಸಾಧ್ಯತೆಯಿರುವದಾಗಿ ಪ್ರಸ್ತಾಪಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊಡಗಿನಲ್ಲಿ ಭೂಪರಿವರ್ತನೆಗೆ ಅವಕಾಶ ನೀಡದಂತೆ ಆದೇಶ ಹೊರಡಿಸಿತು. ಅದಾದ ನಂತರ ಭೂಪರಿವರ್ತನೆ ಕೋರಿ ಜಿಲ್ಲಾಧಿಕಾರಿ ಕಚೇರಿಗೆ 693 ಅರ್ಜಿಗಳು ಬಂದಿದ್ದು, ವಿಲೇವಾರಿಯಾಗದೆ ಉಳಿದುಕೊಂಡಿವೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಭೂಪರಿವರ್ತನೆ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಬಂದಿರುವ ಅರ್ಜಿಗಳನ್ನು ಮುಂದಿನ ಆದೇಶದವರೆಗೂ ತಡೆಹಿಡಿಯಲಾಗಿದೆ.

(ಮೊದಲ ಪುಟದಿಂದ) ಈ ನಡುವೆ ಇಂದು ಕಂದಾಯ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ ರಾಜ್‍ಕುಮಾರ್ ಖತ್ರಿ ಅವರು ಭೇಟಿ ನೀಡಿದ್ದ ವೇಳೆ ಕನಿಷ್ಟಪಕ್ಷ 15 ರಿಂದ 20 ಸೆಂಟ್ ಜಾಗದಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ಬಂದಿರುವ ಅರ್ಜಿಗಳನ್ನಾದರೂ ವಿಲೇವಾರಿ ಮಾಡುವ ಬಗ್ಗೆ ಚರ್ಚಿಸಲಾಗಿದ್ದು, ಯಾವದೇ ತೀರ್ಮಾನವಾಗಿಲ್ಲ ಎಂದು ತಿಳಿಸಿದ್ದಾರೆ.