ಮಡಿಕೇರಿ, ಮೇ 3: ಕ್ರೀಡಾ ಆಸಕ್ತಿ ಹಾಗೂ ವ್ಯಾಯಾಮದಲ್ಲಿ ಭಾಗವಹಿಸುವ ಕಾರಣ 21 ವರ್ಷಗಳ ರಾಜಕೀಯ ಜೀವನದಲ್ಲಿ ಒಮ್ಮೆಯೂ ವೈದ್ಯಕೀಯ ವೆಚ್ಚಕ್ಕಾಗಿ ಸರಕಾರಕ್ಕೆ ಬಿಲ್ ಬರೆದಿಲ್ಲ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಹಾಗೂ ಮೊಗೇರ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಡೆದ 9ನೇ ವರ್ಷದ ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದಲ್ಲಿ 225 ಶಾಸಕರ ಪೈಕಿ ಸಾಕಷ್ಟು ಶಾಸಕರು ವೈದ್ಯಕೀಯ ವೆಚ್ಚಕ್ಕಾಗಿ ಕೋಟಿಗಟ್ಟಲೆ ಸರಕಾರದ ಹಣ ವ್ಯಯ ಮಾಡುತ್ತಾರೆ. ನನ್ನ ಸೇವಾ ಅವಧಿಯಲ್ಲಿ 1 ರೂಪಾಯಿ ಕೂಡ ಸರ್ಕಾರದ ಹಣ ಪಡೆದಿಲ್ಲ. ಕಾರಣ ಕ್ರೀಡಾ ಆಸಕ್ತಿ ಹಾಗೂ ವ್ಯಾಯಾಮದಲ್ಲಿ ಭಾಗವಹಿಸುವದು ಎಂದು ಅಪ್ಪಚ್ಚು ರಂಜನ್ ಹೇಳಿದರು.
ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಇದು ದೇಹದ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಸಮುದಾಯ ಬಾಂಧವರು ಸಂಘಟನೆಗಳಲ್ಲಿ ತೊಡಗಿ ಸುವದರೊಂದಿಗೆ
(ಮೊದಲ ಪುಟದಿಂದ) ಆರ್ಥಿಕವಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಸಂಘಟನೆ ಕಟ್ಟಿ ಬೆಳೆಸಲು ಉತ್ತಮ ನಾಯಕರ ಅವಶ್ಯಕತೆ ಇರುತ್ತದೆ. ಹಾಗೆಯೇ ಮೊಗೇರ ಸಮುದಾಯದಲ್ಲೂ ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುವ ನಾಯಕರನ್ನು ಕಾಣಬಹುದು. ಕ್ರೀಡೆ ಸಮುದಾಯ ಬಾಂಧವರಲ್ಲಿ ಉತ್ತಮ ಬಾಂಧವ್ಯ ಬೆಳೆಸಲು ವೇದಿಕೆಯಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಜೈ ಜವಾನ್ ಟ್ರೋಫಿ ಹೆಸರಿನಲ್ಲಿ ಸೈನಿಕರನ್ನು ನೆನಪಿಸುವದರ ಜತೆಗೆ ಅವರಿಗೆ ಗೌರವ ಕೊಡುವ ಕೆಲಸ ಈ ಕ್ರೀಡಾಕೂಟದಲ್ಲಿದೆ. ಪ್ರಕೃತಿ ವಿಕೋಪ ಸಂದರ್ಭ ಮೊಗೇರ ಸಮಾಜ, ಸಮಾಜ ಬಾಂಧವರನ್ನು ಗುರುತಿಸಿ ಪರಿಹಾರ ಕಾರ್ಯ ನೀಡಲು ಸಹಕರಿಸಿರುವದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಕೂಟಗಳನ್ನು ಪ್ರತಿವರ್ಷ ಸಮುದಾಯ ಬಾಂಧವರು ಶಿಸ್ತು ಹಾಗೂ ಸಂಯಮ ಮೈಗೂಡಿಸಿಕೊಳ್ಳಬೇಕು. ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ 10ನೇ ವರ್ಷದ ಕ್ರೀಡಾ ಕೂಟ ವಿಜೃಂಭಣೆಯಿಂದ ನಡೆಯಲಿ ಎಂದು ಸಂತೋಷ್ ಆಶಿಸಿದರು.
ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಅಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ಸಮುದಾಯ ಬಾಂಧವರು ಪ್ರತಿಯೊಂದು ಕ್ಷೇತ್ರದಲ್ಲಿ ಗುರುತಿಸುವ ನಿಟ್ಟಿನಲ್ಲಿ ಸಂಘಟನೆ ಶಕ್ತಿಯುತವಾಗಿದೆ. ಜಿಲ್ಲೆಯಲ್ಲಿ ತೋಟದ ಕಾರ್ಮಿಕರಾಗಿ ದುಡಿಯುತ್ತಿರುವ ಬಾಂಧವರಿಗೆ ಸರಕಾರ ಸೌಲಭ್ಯಗಳನ್ನು ನೀಡಲು ಅಧಿಕಾರಿ ಹಾಗೂ ಜನಪ್ರತಿನಿಗಳಿಗೆ ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮೊಗೇರ ಸಮಾಜ ಗೌರವಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಜಿಲ್ಲೆಯಲ್ಲಿ 38 ಸಾವಿರ ಜನ ಸಮಾಜ ಬಾಂಧವರು ನೆಲೆಸಿದ್ದಾರೆ. ಇವರ ಕ್ಷೇಮ ಅಭ್ಯುದಯಕ್ಕಾಗಿ ಸಂಘವನ್ನು 2003ರಲ್ಲಿ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು. ರಾಜ್ಯದ 7 ಜಿಲ್ಲೆಯಲ್ಲಿ ಮೊಗೇರ ಸಮುದಾಯ ರಚಿಸಲಾಗಿದೆ. ಜಿಲ್ಲೆಯ ಸಂಘಟನೆಯು ಸರಿ ಸಮಾನವಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಮೊಗೇರ ಅಭಿವೃದ್ಧಿ ನಿಗಮ ಸರಕಾರದ ವತಿಯಿಂದ ರಚಿಸಲು ಒತ್ತಾಯಿಸಲಾಗುವದು ಎಂದು ಹೇಳಿದರು. ಸಮಾಜದ ಸ್ಥಾಪಕಾಧ್ಯಕ್ಷ ಟಿ. ಸದಾನಂದ ಮಾಸ್ತರ್ ಮಾತನಾಡಿ, ಸಂಘಟನೆ ಕಟ್ಟಿ 16 ವರ್ಷ ಕಳೆದಿದೆ. ಇದರ ಮೂಲ ಉದ್ದೇಶ ಸಮಾಜ ಬಾಂಧವರಲ್ಲಿ ಶಿಕ್ಷಣ ಜಾಗೃತಿ, ಭದ್ರತೆ, ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡುವದಾಗಿದೆ ಎಂದು ಹೇಳಿದರು.
ಸಮುದಾಯದ ಯುವಕರು ಶಿಕ್ಷಣದತ್ತ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ, ಉನ್ನತ ಶಿಕ್ಷಣ ಪಡೆಯಲು ಮುಂದಾಗುತ್ತಿಲ್ಲ, ಕೆಎಎಸ್, ಐಎಎಸ್, ಐಪಿಎಸ್, ಎಂ.ಬಿ.ಬಿ.ಎಸ್. ಎಂಜಿನಿಯರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರಕಾರದ ಸೌಲಭ್ಯಗಳೊಂದಿಗೆ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು. ಮೊಗೇರ ಸ್ಪೋಟ್ಸ್ ಕ್ಲಬ್‍ಅಧ್ಯಕ್ಷ ಪಿ.ಸಿ. ರಮೇಶ್, ಸೇವಾ ಸಮಾಜ ಉಪಾಧ್ಯಕ್ಷ ಸೋಮನಾಥ್, ಮತ್ತಿತರರು ಹಾಜರಿದ್ದರು.