ಮಡಿಕೇರಿ, ಮೇ 3: ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಾಟ ಮಾಡುತ್ತಿದ್ದ ಕಾಡು ಮರದ ದಿಮ್ಮಿಗಳನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ರೂ. 2.50 ಲಕ್ಷ ಮೌಲ್ಯದ ಮರ ಹಾಗೂ ಅಂದಾಜು 6 ಲಕ್ಷ ಮೌಲ್ಯದ ಲಾರಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಗೌಡಳ್ಳಿ ಕಡೆಯಿಂದ ಹೊನ್ನೆ ಹಾಗೂ ಮತ್ತಿ ಮರವನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಗೋಪಾಲಪುರ ಜಂಕ್ಷನ್‍ನಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಲಾರಿಯಲ್ಲಿ (ಕೆಎ 12 ಎ 3693) 18 ಮರದ ದಿಮ್ಮಿಗಳು ಪತ್ತೆಯಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.

ಸಿಐಡಿ ಅರಣ್ಯ ಘಟಕ ಮಡಿಕೇರಿಯ ಎಸ್.ಪಿ. ಪ್ರಭಾಕರ್ ಭರ್ಕಿ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದ ಪಿ.ಎಸ್.ಐ. ಚೆನ್ನಕೇಶವಯ್ಯ ಸಿಬ್ಬಂದಿಗಳಾದ ಕೆ.ಎಸ್. ಚಂಗಪ್ಪ, ಎನ್.ಟಿ. ತಮ್ಮಯ್ಯ, ಹೆಚ್.ಪಿ. ಹರ್ಷಿತ್ ಕಾರ್ಯಾಚರಣೆ ನಡೆಸಿದ್ದಾರೆ.