ಮಡಿಕೇರಿ, ಮೇ 3: ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಡಿಕೇರಿ ನಗರಸಭಾ ವ್ಯಾಪ್ತಿಯ ಕುಂಬಳಗೇರಿ, ಉಕ್ಕುಡ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ತಾ. 5 ರಂದು ರಸ್ತೆತಡೆ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಬಡಾವಣೆಯ ಅಧ್ಯಕ್ಷ ಹೆಚ್.ಬಿ. ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.

ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 24 ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರು ವಾಸಿಸುತ್ತಿದ್ದು, ಶೇ. 22.72 ನಿಧಿಯಿಂದ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳು ನಡೆಯಬೇಕಾಗಿತ್ತು. ಆದರೆ 2017-18ನೇ ಸಾಲಿನಲ್ಲಿ ಯಾವದೇ ಕಾಮಗಾರಿಗಳು ನಡೆದಿಲ್ಲ ಎಂದು ಆರೋಪಿಸಿದರು.

ಯಾವದೇ ಚರಂಡಿ ವ್ಯವಸ್ಥೆಯನ್ನು ಮಾಡದೆ ರಸ್ತೆ ಕಾಮಗಾರಿ ಕೈಗೊಂಡಿದ್ದು, ತ್ಯಾಜ್ಯ ನೀರು ಕುಡಿಯುವ ನೀರಿನ ಬಾವಿಗೆ ಸೇರುತ್ತಿದೆ. ಊರಿನ ಬಾವಿಯಲ್ಲಿರುವ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವೈದ್ಯಾಧಿಕಾರಿಗಳು ಈಗಾಗಲೇ ಲಿಖಿತ ರೂಪದಲ್ಲಿ ದೃಢೀಕರಿಸಿದ್ದಾರೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ನಗರಸಭೆಗೆ ದೂರನ್ನು ನೀಡಿದ್ದರೂ ಇಲ್ಲಿಯವರೆಗೆ ಯಾವದೇ ಸ್ಪಂದನ ದೊರಕ್ಕಿಲ್ಲವೆಂದು ಸ್ಥಳೀಯರು ಆರೋಪಿಸಿದರು.

ಬಡಾವಣೆಯಲ್ಲಿರುವ ದೇವಾಲಯದ ದುರಸ್ತಿ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಆದೇಶಿಸಲಾಗಿದೆ. ಆದರೆ ಕಾಮಗಾರಿಯನ್ನು ದಿಢೀರ್ ಆಗಿ ಸ್ಥಗಿತಗೊಳಿಸುವ ಮೂಲಕ ಇಲ್ಲಿನ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಲಾಗಿದೆ. ಸೂಕ್ತ ಫುಟ್‍ಪಾತ್, ಚರಂಡಿ ವ್ಯವಸ್ಥೆಗಳಿಲ್ಲದೆ ಬಡಾವಣೆ ಅಶುಚಿತ್ವದಿಂದ ಕೂಡಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಎನಿಸಿದೆ. ಕಳೆದ ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ. ಶೇ. 22.72 ನಿಧಿಯಡಿ ನಗರಸಭೆಗೆ ಅನುದಾನ ಲಭ್ಯವಿದ್ದರೂ ವಾರ್ಡ್ ಸಂಖ್ಯೆ 24 ರ ಅಭಿವೃದ್ಧಿಗೆ ಖರ್ಚಾದ ಅಥವಾ ಕಾಮಗಾರಿಗಳು ನಡೆದ ಕುರುಹುಗಳಿಲ್ಲ ಎಂದು ಕೃಷ್ಣಪ್ಪ ಆರೋಪಿಸಿದರು. ಬಾವಿಯ ನೀರು ಕುಡಿಯಲು ಯೋಗ್ಯವಿಲ್ಲವೆಂದು ದೃಢಪಟ್ಟಿದ್ದರೂ ಶುದ್ಧ ಕುಡಿಯುವ ನೀರನ್ನು ನೀಡದ ನಗರಸಭೆಯೇ ಮುಂದಿನ ಅನಾಹುತ ಅಥವಾ ಅನಾರೋಗ್ಯ ಪರಿಸ್ಥಿತಿಗೆ ಕಾರಣವಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.